ADVERTISEMENT

ಚಿಂತಾಮಣಿ: ಐಸಿಡಿಎಸ್ ಯೋಜನೆ ಜಾರಿಯಾಗಿ ದಶಕ ಕಳೆದರೂ ಅಂಗನವಾಡಿಗಿಲ್ಲ ಸ್ವಂತ ಕಟ್ಟಡ

ಎಂ.ರಾಮಕೃಷ್ಣಪ್ಪ
Published 10 ಫೆಬ್ರುವರಿ 2025, 7:15 IST
Last Updated 10 ಫೆಬ್ರುವರಿ 2025, 7:15 IST
ಚಿಂತಾಮಣಿ ತಾಲ್ಲೂಕಿನ ಗುಡಾರ್ಲಹಳ್ಳಿಯ ಮಾದರಿ ಅಂಗನವಾಡಿ
ಚಿಂತಾಮಣಿ ತಾಲ್ಲೂಕಿನ ಗುಡಾರ್ಲಹಳ್ಳಿಯ ಮಾದರಿ ಅಂಗನವಾಡಿ   

ಚಿಂತಾಮಣಿ: ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಅಪೌಷ್ಟಿಕತೆಯನ್ನು ತಡೆಗಟ್ಟುವುದು ಹಾಗೂ ಮಕ್ಕಳ ಸಾವಿಗೆ ಕಡಿವಾಣ ಹಾಕುವ ಸಲುವಾಗಿ ರೂಪಿಸಿ ಅನುಷ್ಠಾನಕ್ಕೆ ತಂದಿರುವ ಐಸಿಡಿಎಸ್ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಅಂಗನವಾಡಿ ಕೇಂದ್ರಗಳು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ. ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ.

ತಾಲ್ಲೂಕಿನಲ್ಲಿ 30 ಮಿನಿ ಅಂಗನವಾಡಿ ಸೇರಿ ಒಟ್ಟು 460 ಅಂಗನವಾಡಿ ಕೇಂದ್ರಗಳಿವೆ. 242 ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ, 76 ಬಾಡಿಗೆ ಕಟ್ಟಡಗಳಲ್ಲಿ, 42 ಕೇಂದ್ರಗಳು ಸಮುದಾಯ ಕೇಂದ್ರಗಳಲ್ಲಿ, 82 ಕೇಂದ್ರಗಳು ಶಾಲೆಗಳಲ್ಲಿ, 27 ಕೇಂದ್ರಗಳು ಇತರೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಬಹುತೇಕ ಕಟ್ಟಡಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಕ್ಕೆ ಮಕ್ಕಳನ್ನು ಹೊರಗಡೆ ಕಳುಹಿಸುತ್ತಾರೆ. ಹೊರಗಡೆಯಿಂದ ನೀರನ್ನು ತರಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಅವಲತ್ತುಕೊಳ್ಳುತ್ತಾರೆ.

ADVERTISEMENT

ಸರ್ಕಾರದ ನಿಯಮದ ಪ್ರಕಾರ ಒಂದು ಅಂಗನವಾಡಿ ಕೇಂದ್ರ 30x40 ಅಡಿ ವಿಸ್ತೀರ್ಣದಲ್ಲಿರಬೇಕು. ಕೇಂದ್ರಗಳಿಗೆ ಸ್ವಂತ ಕಟ್ಟಡ, ಕಾಂಪೌಂಡ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಸುಸಜ್ಜಿತ ಅಡುಗೆ ಕೋಣೆ, ಪ್ರತ್ಯೇಕ ದಾಸ್ತಾನು ಕೊಠಡಿ, ಶೌಚಾಲಯದ ವ್ಯವಸ್ಥೆ ಇರಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಆಕರ್ಷಿಸುವಂತಹ ವಾತಾವರಣ ಅಗತ್ಯ.

ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಲಿಕಾ ವಾತಾವರಣವಿಲ್ಲ. ಅನೇಕ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿರುವ ಒಂದೇ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳು ನಲಿದಾಡುವ ಕೇಂದ್ರಗಳು ಸುಣ್ಣ ಬಣ್ಣ ಕಂಡು ಅನೇಕ ವರ್ಷಗಳಾಗಿವೆ. ಮಳೆಗಾಲದಲ್ಲಿ ಸೋರುವುದು ಮಾಮೂಲಿಯಾಗಿದೆ. ಇಂತಹ ಕೇಂದ್ರಗಳಲ್ಲಿ ಆಹಾರಧಾನ್ಯ, ಪುಸ್ತಕ, ದಾಖಲೆಗಳನ್ನು ಸಂರಕ್ಷಿಸುವುದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸವಾಲಾಗಿದೆ.

ಒಂದು ಮೂಲೆಯಲ್ಲಿ ಮಕ್ಕಳಿಗೆ ಆಹಾರ ತಯಾರಿಸಲಾಗುತ್ತದೆ. ಮತ್ತೊಂದು ಮೂಲೆಯಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಇರುತ್ತದೆ. ಇನ್ನುಳಿದ ಸ್ಥಳದಲ್ಲಿ ಮಕ್ಕಳನ್ನು ಕೂರಿಸಿ ಕಲಿಕೆ ಪ್ರಕ್ರಿಯೆ ನಡೆಯುತ್ತದೆ. ಬಹುತೇಕ ಕೇಂದ್ರಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಕಲುಷಿತ ವಾತಾವರಣ, ನಾಮಕಾವಸ್ಥೆ ಕಿಟಕಿ ಬಾಗಿಲು, ಶುದ್ಧ ಗಾಳಿ, ಬೆಳಕು ಇಲ್ಲದಿರುವ ಉಸಿರುಗಟ್ಟಿಸುವ ಪರಿಸರದಲ್ಲಿ ಚಿಣ್ಣರು ಬಾಲ್ಯ ಕಳೆಯುವಂತಾಗಿದೆ.

ಗ್ರಾಮೀಣ ಭಾಗಗಳಲ್ಲಿ ಕೇಂದ್ರಗಳನ್ನು ನಡೆಸಲು ಅನುಕೂಲವಾಗುವ ಕಟ್ಟಡ ಸಿಗುವುದಿಲ್ಲ. ಶಾಲೆ, ದೇವಸ್ಥಾನ, ಸಮುದಾಯ ಭವನ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಒಂದೇ ಕೊಠಡಿಯಲ್ಲಿ ಕೇಂದ್ರ ನಡೆಸಲಾಗುತ್ತಿದೆ. ಶಿಥಿಲಗೊಂಡಿರುವ ಹಳೆಯ ಕಟ್ಟಡಗಳು ಇವೆ. ಇದೇ ಕಾರಣದಿಂದ ಮಾತೃವಂದನಾ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಕೇಂದ್ರಗಳಿಗೆ ಆಗಮಿಸಿ ಊಟ ಮಾಡಬೇಕು ಎಂಬ ಆದೇಶ ವಿಫಲವಾಯಿತು. ಬೆರಳೆಣಿಕೆಯಷ್ಟು ಕೇಂದ್ರಗಳನ್ನು ಹೊರತುಪಡಿಸಿ ಉಳಿದಕಡೆ ಉತ್ತಮ ವಾತಾವರಣ ಕಾಣುತ್ತಿಲ್ಲ ಎಂದು ಫಲಾನುಭವಿಗಳು ದೂರುತ್ತಾರೆ.

ತಾಲ್ಲೂಕಿನ ಬುರುಡಗುಂಟೆ, ವೈಜಕೂರು ಮತ್ತಿತರ ಕಡೆಗಳಲ್ಲಿ ಎರಡು ಕೇಂದ್ರಗಳು ಒಟ್ಟಿಗೆ ಸೇರಿಸಿ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವವಹಿಸುತ್ತಿವೆ. ಮಾತೃವಂದನಾ, ಪ್ರಧಾನಮಂತ್ರಿ ಪೋಷಣ್ ಅಭಿಯಾನ, ಬಾಲ್ಯ ವಿವಾಹ ತಡೆಗಟ್ಟುವುದು, ಭಾಗ್ಯಲಕ್ಷ್ಮಿ ಯೋಜನೆ, ಸಾಂತ್ವನ ಕೇಂದ್ರಗಳ ಸಮೀಕ್ಷೆ ನಡೆಸುವುದು, ಜಾಗೃತಿ ಮೂಡಿಸುವುದು ಸಹ ಅಂಗನವಾಡಿ ಕಾರ್ಯಕರ್ತೆಯರ ಮೂಲಕವೇ ನಡೆಯುತ್ತಿದೆ.

ತಾಲ್ಲೂಕಿನಲ್ಲಿ ಒಂದು ವರ್ಷದ ಒಳಗಿನ 1845, 1 ರಿಂದ 2 ವರ್ಷದೊಳಗಿನ 3279, 2 ರಿಂದ 3 ವರ್ಷದೊಳಗಿನ 3385, 3 ರಿಂದ 5 ವರ್ಷದೊಳಗಿನ 4882 ಹಾಗೂ 5 ರಿಂದ 6 ವರ್ಷದೊಳಗಿನ 462 ಸೇರಿ ಒಟ್ಟು 17,493 ಮಕ್ಕಳಿದ್ದಾರೆ. 1,597 ಗರ್ಭಿಣಿಯರು, 1,209 ಬಾಣಂತಿಯರು ಹಾಗೂ 441 ಕಿಶೋರಿಯರು ಸೌಲಭ್ಯ ಪಡೆಯುತ್ತಿದ್ದಾರೆ.

ಕೆಲವು ಗ್ರಾಮ ಪಂಚಾಯಿತಿಗಳು ವಿಶೇಷ ಆಸಕ್ತಿ ವಹಿಸಿ ಇರುವ ಕಟ್ಟಡಗಳನ್ನೇ ಉಪಯೋಗಿಸಿ ಮಾದರಿ ಅಂಗನವಾಡಿಗಳನ್ನು ರೂಪಿಸಿವೆ. ಕಟ್ಟಡಗಳ ಒಳಗೆ ಮತ್ತು ಹೊರ ಗೋಡೆಗಳ ಮೇಲೆ ಪುಟಾಣಿಗಳನ್ನು ಆಕರ್ಷಿಸುವ ಚಿತ್ರ ಬಿಡಿಸಲಾಗಿದೆ. ಬಾಲಸ್ನೇಹಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಮಕ್ಕಳ ಅಟಿಕೆಗಳ ವ್ಯವಸ್ಥೆ ಮಾಡಲಾಗಿದೆ. ಸಾಮೂಹಿಕ ಸೀಮಂತ, ಪೋಷಣ್ ಅಭಿಯಾನ, ಮಕ್ಕಳ ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಆದರೆ ಇಂತಹ ಕೇಂದ್ರಗಳ ಸಂಖ್ಯೆ ತುಂಬಾ ಕಡಿಮೆ.

ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಸ್ಯೆಗಳು ನೂರೆಂಟು. ಕಾರ್ಯಕರ್ತೆಯರಿಗೆ ₹11,500 ಹಾಗೂ ಸಹಾಯಕಿಯರಿಗೆ ₹6 ಸಾವಿರ ಗೌರವಧನ ನೀಡಲಾಗುತ್ತಿದೆ. ಅದನ್ನು ಸಹ ಪ್ರತಿ ತಿಂಗಳು ಸರಿಯಾಗಿ ನೀಡುವುದಿಲ್ಲ. ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಕಾರ್ಯಕರ್ತೆಯರು ಅವಲತ್ತುಕೊಳ್ಳುತ್ತಾರೆ.

ಮಕ್ಕಳು, ಗರ್ಭಿಣಿಯರಿಗೆ ಆಹಾರ ಪದಾರ್ಥಗಳ ವಿತರಣೆ ಸೇರಿದಂತೆ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪ್ರತಿನಿತ್ಯ ದಾಖಲಿಸಬೇಕು. ಇಲಾಖೆ ನೀಡಿರುವ ಮೊಬೈಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಗ್ಯಾಸ್ ಸಿಲಿಂಡರ್ ಸಾಗಾಣಿಕೆ ಹಣವನ್ನು ಸಹ ಕಾರ್ಯಕರ್ತೆಯರು ಭರಿಸಬೇಕಾಗಿದೆ. ಮೊಟ್ಟೆಯನ್ನು ಕಾರ್ಯಕರ್ತೆಯರು ಸ್ವಂತ ಹಣದಿಂದ ಖರೀದಿಸಬೇಕು. ಅದರ ಹಣವನ್ನು 2-3 ತಿಂಗಳಿಗೆ ನೀಡುತ್ತಾರೆ. ಅದನ್ನು ನೇರವಾಗಿ ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡುವುದಿಲ್ಲ. ಬಾಲ ವಿಕಾಸ ಸಮಿತಿ ಖಾತೆಗೆ ಜಮಾ ಮಾಡುತ್ತಾರೆ. ಕೆಲವು ಕಡೆ ಆ ಹಣವನ್ನು ಪೂರ್ಣವಾಗಿ ನೀಡುವುದಿಲ್ಲ ಎಂದು ಕಾರ್ಯಕರ್ತೆಯೊಬ್ಬರು ತಿಳಿಸಿದರು.

ಚಿಂತಾಮಣಿ ತಾಲ್ಲೂಕಿನ ಬೊಮ್ಮೇಕಲ್‌ ಅಂಗನವಾಡಿ ಕೇಂದ್ರ
ಅಂಗನವಾಡಿಗಳಿಗೆ ಅಗತ್ಯವಿರುವ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಳೆದ 2 ವರ್ಷಗಳಿಂದ 20 ಹೊಸ ಕಟ್ಟಡಕ್ಕೆ ಮಂಜೂರಾತಿ ದೊರೆತಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೆ ಕಾಮಗಾರಿ ಆರಂಭವಾಗಲಿದೆ
ಮಹೇಶ್ ಬಾಬು ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಬೇಡಿಕೆ ಈಡೇರಿಸುತ್ತಿಲ್ಲ ಕೇಂದ್ರ ಸರ್ಕಾರ
ಐಸಿಡಿಎಸ್ ಯೋಜನೆಯ ಅನುದಾನ ಕಡಿತಗೊಳಿಸುತ್ತಿದೆ. ದಶಕಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ರಾಜ್ಯ ಸರ್ಕಾರವೂ ಸ್ಪಂದಿಸುತ್ತಿಲ್ಲ. ಮಾರ್ಚ್‌ 7 ರಿಂದ ಎಲ್ಲ ಅಂಗನವಾಡಿಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಎಚ್.ಜಿ.ಲಕ್ಷ್ಮಿನರಸಮ್ಮ ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ  ಗೌರವಧನ ಕಡಿಮೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ತುಂಬಾ ಕಡಿಮೆ. ಬೆಲೆ ಏರಿಕೆಯ ಕಾಲದಲ್ಲಿ ಜೀವನ ನಡೆಸುವುದಾದರೂ ಹೇಗೆ? ಮಾತೃಪೂರ್ಣ ಮಾತೃವಂದನಾ ಭಾಗ್ಯಲಕ್ಷ್ಮಿ ಯೋಜನೆ ಬಾಲ್ಯ ವಿವಾಹ ತಡೆಗಟ್ಟುವಿಕೆ ಮತ್ತಿತರ ಎಲ್ಲ ಸಮೀಕ್ಷೆಗಳಿಗೂ ಅಂಗನವಾಡಿ ಕಾರ್ಯಕರ್ತೆಯರು ಬೇಕು. ಆದರೆ ಸಮರ್ಪಕವಾದ ವೇತನ ಮಾತ್ರ ನೀಡುತ್ತಿಲ್ಲ. ನಾಗವೇಣಿ ಅಂಗನವಾಡಿ ಕಾರ್ಯಕರ್ತೆ ಮೂಲ ಸೌಲಭ್ಯ ಒದಗಿಸಿ ನಾವು ಕೂಲಿ-ನಾಲಿ ಮಾಡಿ ಸಂಸಾರ ಬಂಡಿ ಸಾಗಿಸುತ್ತಿದ್ದೇವೆ. ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಶಕ್ತಿ ಇಲ್ಲ. ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿ ಕೂಲಿಗೆ ಹೋಗುತ್ತೇವೆ. ಅಂಗನವಾಡಿಗಳಿಗೆ ಸರ್ಕಾರ ಮೂಲ ಸೌಲಭ್ಯ ಒದಗಿಸಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು. ಲಕ್ಷ್ಮಿದೇವಮ್ಮ ಪೋಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.