ADVERTISEMENT

ಚಿಕ್ಕಬಳ್ಳಾಪುರ: ಮತಯಂತ್ರಗಳಲ್ಲಿ ಭದ್ರವಾದ ಅಭ್ಯರ್ಥಿಗಳ ‘ಭವಿಷ್ಯ’

ಮತದಾರರಲ್ಲಿ ಇಮ್ಮಡಿಗೊಂಡ ಉತ್ಸಾಹ, ಶಾಂತಿಯುತವಾಗಿ ನಡೆದ ಮತದಾನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:28 IST
Last Updated 5 ಡಿಸೆಂಬರ್ 2019, 14:28 IST
ಚಿಕ್ಕಬಳ್ಳಾಪುರದ ಸೇಂಟ್‌ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು
ಚಿಕ್ಕಬಳ್ಳಾಪುರದ ಸೇಂಟ್‌ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಗುರುವಾರ ಯಾವುದೇ ಅಹಿತಕರ ಘಟನೆಗಳಿಲ್ಲದೆ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7ಕ್ಕೆ ಶುರುವಾದ ಮತದಾನ ಆರಂಭದಲ್ಲಿ ಮಂದಗತಿಯಲ್ಲಿತ್ತು. ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆಯಿತು.

ಚಳಿಯ ಕಾರಣಕ್ಕೆ ಬೆಳ್ಳಂಬೆಳಗೆ ಮತಗಟ್ಟೆಯತ್ತ ಜನ ಮುಖಮಾಡದ ಕಾರಣಕ್ಕೆ ಮತಗಟ್ಟೆಗಳು ಭಣಗುಡುತ್ತಿದ್ದವು. ಪರಿಣಾಮ, ಮತದಾನ ಆರಂಭಗೊಂಡು ನಾಲ್ಕು ತಾಸುಗಳು ಕಳೆದರೂ ಬೆಳಿಗ್ಗೆ 11ರ ಸುಮಾರಿಗೆ ಶೇ 20.78ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ರಿಂದ ಸಂಜೆ 5ರ ವರೆಗೆ ಮತದಾನದಲ್ಲಿ ತೀವ್ರ ಚುರುಕು ಕಾಣಿಸಿಕೊಂಡು ಮತದಾನದ ಪ್ರಮಾಣ ಶೇ 79.8ಕ್ಕೆ ತಲುಪಿತ್ತು.

ಮಧ್ಯಾಹ್ನದ ನಂತರ ಮತಗಟ್ಟೆಗಳ ಮುಂದೆ ಮತದಾರರ ಉದ್ದನೆಯ ಸರದಿ ಸಾಲುಗಳು ಕಂಡುಬಂದವು. ಮೊದಲ ಬಾರಿ ಮತ ಚಲಾಯಿಸಲು ಬಂದಿದ್ದ ಯುವ ಮತದಾರರು ಸರದಿ ಸಾಲಿನಲ್ಲಿ ಉತ್ಸಾಹದಿಂದ ಮತ ಚಲಾಯಿಸುವುದನ್ನೇ ಕುತೂಹಲದಿಂದ ಎದುರು ನೊಡುತ್ತಿದ್ದರು. ಇನ್ನು ಮತ ಚಲಾಯಿಸಿ ಬಂದವರ ಮೊಗದಲ್ಲಂತೂ ಏನೋ ಸಾಧಿಸಿದ ಕಳೆ ಗೋಚರಿಸುತ್ತಿತ್ತು.

ADVERTISEMENT

ವಯೋವೃದ್ಧರು, ಅಂಗವಿಕಲರು ಸಹ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು. ಅಂಗವಿಕಲರು ಮತ್ತು ನಡೆಲಾರದಂತಹ ಸ್ಥಿತಿಯಲ್ಲಿರುವ ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.

ಬಚ್ಚಹಳ್ಳಿಯಲ್ಲಿ ಸಂಪೂರ್ಣ ಗುಲಾಬಿಮಯ ಅಲಂಕೃತಗೊಂಡಿದ್ದ, ಸಂಪೂರ್ಣ ಮಹಿಳಾ ಅಧಿಕಾರಿಗಳೇ ನಿರ್ವಹಿಸಿದ ‘ಸಖಿ’ ಮತಗಟ್ಟೆಗಳು ಮತದಾರರ ಜನರ ಗಮನ ಸೆಳೆದವು. ಭದ್ರತೆಗಾಗಿ ಸಾಮಾನ್ಯ ಮತಗಟ್ಟೆ ಬಳಿ ಪೊಲೀಸ್ ಸಿಬ್ಬಂದಿ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಬಳಿ ಅರೆ ಸೇನಾ ಪಡೆಯ ಯೋಧರನ್ನು ನಿಯೋಜಿಸಲಾಗಿತ್ತು.

ಕ್ಷೇತ್ರದ ಸ್ಪರ್ಧಾ ಕಣಗಳಲ್ಲಿದ್ದ ಒಂಬತ್ತು ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ಈ ಪೈಕಿ ಯಾವ ಯಾರಿಗೆ ‘ಅದೃಷ್ಟ’ ಒಲಿಯಲಿದೆ ಎಂದು ಡಿ.9ರಂದು ನಡೆಯುವ ಮತ ಎಣಿಕೆಯಲ್ಲಿ ತಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.