ADVERTISEMENT

ಚಿಕ್ಕಬಳ್ಳಾಪುರ: ಹೂ ಮಾರುಕಟ್ಟೆ ಸ್ಥಳಾಂತರಿಸಲು ಆಗ್ರಹ

ಸಮಸ್ಯೆ ಪರಿಹಾರಕ್ಕೆ ಸಚಿವರ ನೇತೃತ್ವದಲ್ಲಿ ಸೋಮವಾರ ಸಭೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 7:02 IST
Last Updated 14 ನವೆಂಬರ್ 2021, 7:02 IST
ಎಪಿಎಂಸಿ ಬಳಿ ಪ್ರತಿಭಟಿಸಿದ ವರ್ತಕರು, ರೈತರು
ಎಪಿಎಂಸಿ ಬಳಿ ಪ್ರತಿಭಟಿಸಿದ ವರ್ತಕರು, ರೈತರು   

ಚಿಕ್ಕಬಳ್ಳಾಪುರ: ನಗರದ ಕೆ.ವಿ.ಕ್ಯಾಂಪಸ್‌ ಬಳಿಯ ಹೂವಿನ ತಾತ್ಕಾಲಿಕ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದ್ದು ಎಪಿಎಂಸಿಯಲ್ಲಿ ವಹಿವಾಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಹೂ ಬೆಳೆಗಾರರು ಹಾಗೂ ವರ್ತಕರು ಶನಿವಾರ ಪ್ರತಿಭಟನೆ
ನಡೆಸಿದರು. ಅಂತಿಮವಾಗಿ ಸಚಿವ ಡಾ.ಕೆ.ಸುಧಾಕರ್ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಸಮಾಪ್ತಿ ಆಯಿತು.

ಬೆಳಿಗ್ಗೆಯೇ ಎಪಿಎಂಸಿ ಆವರಣಕ್ಕೆ ಬಂದ ವರ್ತಕರು ಹಾಗೂ ರೈತರು, ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ. ಕೆ.ವಿ.ಕ್ಯಾಂಪಸ್ ಬಳಿತ ತಾತ್ಕಾಲಿಕ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ. ಮಳೆಯ ನಡುವೆ ವಹಿವಾಟು ನಡೆಸಲು ಸಾಧ್ಯವಿಲ್ಲ. ಎಪಿಎಂಸಿಗೆ ಮಾರುಕಟ್ಟೆ ಸ್ಥಳಾಂತರಿಸಬೇಕು. ಪರ್ಯಾಯ ಮಾರುಕಟ್ಟೆ ನಿರ್ಮಿಸುವವರೆಗೂ ಅಲ್ಲಿಯೇ ವ್ಯಾಪಾರ ನಡೆಸುತ್ತೇವೆ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಈ ವೇಳೆ ಅಧಿಕಾರಿಗಳ ಜತೆ ಜಟಾಪಟಿ ನಡೆಯಿತು. ಎಂ.ಜಿ ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಸೇರಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಯಿತು.

ಹೂ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರ ಮಾತನಾಡಿ, ಎರಡು ವರ್ಷಗಳಿಂದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದೇವೆ. ಇಲ್ಲಿ ಸಮಸ್ಯೆಗಳು ಹೆಚ್ಚಿವೆ. ಎಪಿಎಂಸಿ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಎಪಿಎಂಸಿಯಲ್ಲಿಯೇ ವಹಿವಾಟು ನಡೆಸುತ್ತೇವೆ. ಹೊಸ ಮಾರುಕಟ್ಟೆಯನ್ನು ನೀವು ನಿರ್ಮಿಸಿಕೊಡುವವರೆಗೂ ಎಪಿಎಂಸಿಯಲ್ಲಿ ಅವಕಾಶ ನೀಡಿ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.