ADVERTISEMENT

ದುಗುಡ ಮರೆತು, ‘ಸಂಭ್ರಮ’ದಲ್ಲಿ ಬೆರೆತು

ನಗರ ಹೊರವಲಯದ ಅಗಲಗುರ್ಕಿ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಳೆಗಟ್ಟಿದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:48 IST
Last Updated 24 ಡಿಸೆಂಬರ್ 2019, 16:48 IST
ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಯಿತು.   

ಚಿಕ್ಕಬಳ್ಳಾಪುರ: ಸದಾ ತರಗತಿಗಳು, ಸಿಲೆಬಸ್‌, ಹೋಂವರ್ಕ್‌, ಅಸೈನ್‌ಮೆಂಟ್‌ಗಳ ಮಾತುಗಳಿಂದ ಗಂಭೀರವಾಗಿರುತ್ತಿದ್ದ ಆ ಕ್ಯಾಂಪಸ್‌ನಲ್ಲಿ ಮಂಗಳವಾರ ‘ಸಂಭ್ರಮ’ ಮನೆ ಮಾಡಿತ್ತು. ದೈನಂದಿನ ಚಿತ್ರಣ ಕಾಣೆಯಾಗಿ, ವಿಭಿನ್ನ ಲೋಕವೊಂದು ಅನಾವರಣಗೊಂಡು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

ನಗರ ಹೊರವಲಯದ ಅಗಲಗುರ್ಕಿ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಂಭ್ರಮ-’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕ್ಯಾಂಪಸ್‌ನಲ್ಲಿ ಅಕ್ಷರಶಃ ‘ಸಂಭ್ರಮ’ ಉಂಟು ಮಾಡಿದ್ದವು. ನೃತ್ಯ, ಫ್ಯಾಷನ್‌ ಶೋ, ವಿಚಿತ್ರ ವೇಷಭೂಷಣಗಳ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ, ‘ವಿದ್ಯಾರ್ಥಿಗಳು ಪ್ರತಿ ಸಂದರ್ಭದಲ್ಲಿ ಹೊಸ ವಿಚಾರಗಳಲ್ಲಿ ಶೋಧನೆ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಓದಿನಲ್ಲಿ ಯೋಜನೆ ಹಾಕಿಕೊಳ್ಳಬೇಕು. ತಮಗಿಷ್ಟವಾದ ಪದವಿ ಆಯ್ಕೆ ಮಾಡಿಕೊಂಡು ಅಧ್ಯಯನಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕು ಆಗ ಮಾತ್ರ ಯಶಸ್ಸು ದೊರೆತು, ಶಿಕ್ಷಣಕ್ಕೆ ಒಂದು ಒಳ್ಳೆಯ ಅರ್ಥ ಸಿಗುತ್ತದೆ’ ಎಂದು ಹೇಳಿದರು.

‘ಕಲಿಕೆ ಕಾಲೇಜು, ತರಗತಿಗಳಿಗೆ ಸೀಮಿತಗೊಳ್ಳದೆ. ಜೀವನ ಪರ್ಯಂತ ಮುಂದುವರಿಯಬೇಕು. ಕಲಿಕೆ ನಿಂತ ನೀರಾಗಬಾರದು ನದಿಯಾಗಬೇಕು. ಆದ್ದರಿಂದ ಪ್ರತಿಯೊಬ್ಬರೂ ಸಾಯುವವರೆಗೂ ಏನಾದರೂ ಕಲಿಯುತ್ತಲೇ ಇರಬೇಕು. ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಓದಿ ಗಳಿಸಿಕೊಳ್ಳುವ ಜ್ಞಾನದ ಜತೆಗೆ ದೇಶದ ಬೆಳವಣಿಗೆ ಬಗ್ಗೆ ಕಲ್ಪನೆ ಇರಬೇಕು. ಇವತ್ತು ವಿಪುಲ ಉದ್ಯೋಗಾವಕಾಶಗಳಿವೆ. ಆದರೆ ಎಲ್ಲರಿಗೂ ಕೆಲಸ ಸಿಗುವುದಿಲ್ಲ. ಉತ್ತಮ ಕೌಶಲ ತೋರುವವರಿಗೆ ಮಾತ್ರ ಕೆಲಸ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲ ಕಲಿಯಲು ಆದ್ಯತೆ ನೀಡಬೇಕು’ ಎಂದರು.

ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್ ಚಂದ್ರ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಬಿಜಿಎಸ್ ಎಂದರೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲದೇ, ಸಾಂಸ್ಕೃತಿಕ ಪರಂಪರೆಯಲ್ಲಿಯೂ ಕೂಡ ಮೇಲುಗೈ ಸಾಧಿಸಿದೆ. ಬಿಜಿಎಸ್ ಎಂದರೆ ಜ್ಞಾನದ ಹೂಗಳು ಅರಳುವ ತೋಟ ಇದ್ದಂತೆ’ ಎಂದು ತಿಳಿಸಿದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರದಾನ ಮಾಡಲಾಯಿತು. ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಬಿಜಿಎಸ್ ಪಿಯು ಕಾಲೇಜುಗಳ ಮುಖ್ಯಸ್ಥ ಎನ್. ಮಧುಸೂಧನ್, ಪ್ರಾಂಶುಪಾಲ ಎಚ್.ಬಿ.ರಮೇಶ್, ಉಪಪ್ರಾಂಶುಪಾಲರಾದ ಜೆ. ಚಂದ್ರಮೋಹನ್, ಜ್ಯೋತಿ ಕಿರಣ್, ಬಿಜಿಎಸ್ ಇಂಗ್ಲೀಷ್ ಶಾಲೆ ಮುಖ್ಯಶಿಕ್ಷಕ ಡಿ.ಸಿ.ಮೋಹನ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.