ADVERTISEMENT

ಜ.3ರಿಂದ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ’ ಎಕ್ಸ್‌ಪೋ

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 15:22 IST
Last Updated 1 ಜನವರಿ 2025, 15:22 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ’ ಸಂಘಟನೆಯ ರಾಜ್ಯ ಸಂಯೋಜಕ ನಟರಾಜ್ ಗೌಡ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ’ ಸಂಘಟನೆಯ ರಾಜ್ಯ ಸಂಯೋಜಕ ನಟರಾಜ್ ಗೌಡ ಮಾತನಾಡಿದರು   

ಚಿಕ್ಕಬಳ್ಳಾಪುರ: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಮತ್ತು ಗಾಯತ್ರಿ ವೃಕ್ಷದಲ್ಲಿ ಜ.3ರಿಂದ 5ರವರೆಗೆ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ’ ಎಕ್ಸ್‌ಪೋ ಕಾರ್ಯಕ್ರಮ ನಡೆಯಲಿದೆ ಎಂದು ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ’ ಸಂಘಟನೆಯ ರಾಜ್ಯ ಸಂಯೋಜಕ ನಟರಾಜ್ ಗೌಡ ತಿಳಿಸಿದರು. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಮತ್ತು ಎರಡನೇ ಎಕ್ಸ್‌ಪೋ ಬೆಂಗಳೂರಿಗೆ ಸೀಮಿತವಾಗಿ ನಡೆಸಿದ್ದೇವೆ. ಈಗ 14 ಜಿಲ್ಲೆಗಳ 124 ತಾಲ್ಲೂಕುಗಳಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಸಂಘಟನೆಯನ್ನು ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ಸಂಘಟನೆ ರೂಪಿಸಲಾಗುವುದು ಎಂದು ಹೇಳಿದರು.

ಕೃಷಿ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ತೊಡಗಿರುವವರನ್ನು ಒಂದೆಡೆ ಸೇರಿಸುವುದು ನಮ್ಮ ಉದ್ದೇಶವಾಗಿದೆ. ಸಣ್ಣ ಮಟ್ಟದಲ್ಲಿ ಆರಂಭವಾದ ನಮ್ಮ ಪ್ರಯತ್ನ ಈಗ ದೊಡ್ಡ ಮಟ್ಟದಲ್ಲಿ ರೂಪು ಪಡೆದಿದೆ. ಉದ್ದಿಮೆಗಳಿಗೆ ಸಂಬಂಧಿಸಿದಂತೆ ಪರಿಣತರ ಜೊತೆ ಚರ್ಚೆ, ಗ್ರಾಹಕರು, ಉದ್ದಿಮೆ ನಡೆಸುವವರು ಒಂದೆಡೆ ಸೇರುವರು ಎಂದು ತಿಳಿಸಿದರು.

ADVERTISEMENT

ಈಗಾಲೇ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಚರ್ಚಿಸಲಾಗಿದೆ. ಉದ್ದಿಮೆಗಳ ನಿರ್ಮಾಣದಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ. ಉದ್ಯೋಗದಾತರು ಹೆಚ್ಚು ಸೃಷ್ಟಿ ಆದಷ್ಟು ಸಮಾಜಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.  

ಕಳೆದ ಬಾರಿ ಬೆಂಗಳೂರಿಗೆ ಸೀಮಿತವಾಗಿ ನಡೆದ ಎಕ್ಸ್‌ಪೋನಲ್ಲಿ 15 ಸಾವಿರ ಉದ್ದಿಮೆದಾರರು ಭಾಗವಹಿಸಿದ್ದರು. ಈ ಬಾರಿ ಗ್ರಾಹಕರು, ಉದ್ದಿಮೆದಾರರು ಸೇರಿದಂತೆ 50 ಸಾವಿರಿಂದ 1 ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ವಿವರಿಸಿದರು.

ಮೂರು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಮೊದಲನೇಯದ್ದು ಉದ್ಘಾಟನಾ ಕಾರ್ಯಕ್ರಮ ವೇದಿಕೆಯಾದರೆ, ಎರಡನೇ ವೇದಿಕೆಯಲ್ಲಿ ಉದ್ದಿಮೆಗಳು, ಅವುಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆ, ಗೋಷ್ಠಿಗಳು ನಡೆಯಲಿವೆ. ಮೂರನೇ ವೇದಿಕೆಯಲ್ಲಿ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಪ್ರದರ್ಶನಗಳು ನಡೆಯಲಿವೆ ಎಂದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜ.3ರ ಮಧ್ಯಾಹ್ನ 2ರಿಂದ 3.30ರವರೆಗೆ ಚರ್ಚೆಗಳು ನಡೆಯಲಿವೆ. ಈ ಚರ್ಚೆಯಲ್ಲಿ ಈ ಎರಡೂ ಜಿಲ್ಲೆಗಳ ಉದ್ದಿಮೆಗಳು, ಅವುಗಳ ಬೆಳವಣಿಗೆ, ಸಮಸ್ಯೆ ಸೇರಿದಂತೆ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲ ದಕ್ಷಿಣ ಕರ್ನಾಟಕದಲ್ಲಿ ಕನ್ನಡಿಗರು ಉದ್ದಿಮೆಗಳಲ್ಲಿ ತೊಡಗಿರುವುದು ತೀರಾ ಕಡಿಮೆ. ಶೇ 3ರಿಂದ 5ರಷ್ಟು ಮಾತ್ರ ಪ್ರಾತಿನಿಧ್ಯವಿದೆ. ಸ್ಥಳೀಯರು ಹೆಚ್ಚು ಉದ್ದಿಮೆಗಳಲ್ಲಿ ತೊಡಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಹೇಳಿದರು. 

ಸ್ಥಳೀಯ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಯಾವ ರೀತಿಯಲ್ಲಿ ಉದ್ದಿಮೆಗಳನ್ನು ರೂಪಿಸಬಹುದು. ಅವುಗಳನ್ನು ಹೇಗೆ ಬೆಳೆಸಬಹುದು ಎನ್ನುವ ಚರ್ಚೆಗಳು ನಡೆಯಲಿವೆ ಎಂದರು.

ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಜಿಲ್ಲಾ ಉಪಾಧ್ಯಕ್ಷೆ ರಕ್ಷಿತಾ ಕೆ.ವಿ ಮಾತನಾಡಿ, ಇದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಉದ್ದಿಮೆಗಳಿಗೆ ಒಳ್ಳೆಯ ವೇದಿಕೆ  ದೊರಕಿಸಿಕೊಡಲಿದೆ. ಜಿಲ್ಲೆಯಿಂದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು  ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕ ಪ್ರಭಾಕರ ರೆಡ್ಡಿ ಟಿ.ವಿ, ಶಶಿಕುಮಾರ್, ನವೀನ್, ರಾಮಸ್ವಾಮಿ, ಮಂಜುನಾಥರೆಡ್ಡಿ, ಗಂಗಿರೆಡ್ಡಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.