ADVERTISEMENT

ಗೌರಿಬಿದನೂರಿಗೆ ಇಲ್ಲ ಸಂಪುಟ ಸಭೆ ಸಿಹಿ

ವಿಧಾನಸಭಾ ಕ್ಷೇತ್ರದ ಒಂದೇ ಒಂದು ಯೋಜನೆಯೂ ಪ್ರಸ್ತಾಪವಿಲ್ಲ

ಡಿ.ಎಂ.ಕುರ್ಕೆ ಪ್ರಶಾಂತ
Published 4 ಜುಲೈ 2025, 7:48 IST
Last Updated 4 ಜುಲೈ 2025, 7:48 IST
ಕೆ.ಎಚ್. ಪುಟ್ಟಸ್ವಾಮಿಗೌಡ
ಕೆ.ಎಚ್. ಪುಟ್ಟಸ್ವಾಮಿಗೌಡ   

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಾಗೇಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಒಳ್ಳೆಯ ಅನುದಾನವನ್ನೇ ಮಂಜೂರು ಮಾಡಲಾಗಿದೆ. 

ಆದರೆ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ಯಾವ ಯೋಜನೆ ಮಂಜೂರು ಮಾಡಲಾಗಿದೆ ಎಂದು ನೋಡಿದರೆ ಒಂದೇ ಒಂದು ಯೋಜನೆಯೂ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿಲ್ಲ. ಅನುದಾನ ನೀಡಿಲ್ಲ. ಉಳಿದ ವಿಧಾನಸಭಾ ಕ್ಷೇತ್ರಗಳಿಗೆ ಬೆಣ್ಣೆ ನೀಡಿದ ಸಚಿವ ಸಂಪುಟ ಸಭೆಯು ಗೌರಿಬಿದನೂರು ಕ್ಷೇತ್ರಕ್ಕೆ ಸುಣ್ಣ ನೀಡಿದೆ!

ಗೌರಿಬಿದನೂರು ಪ್ರತಿನಿಧಿಸುವ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಅವರು ಕಾಂಗ್ರೆಸ್‌ ಹಿರಿಯ ನಾಯಕ ಎನಿಸಿದ್ದಾರೆ. ಈ ಕಾರಣದಿಂದ ಸಚಿವ ಸಂಪುಟ ಸಭೆಯಲ್ಲಿ ಒಂದಿಷ್ಟು ಯೋಜನೆಗಳಾದರೂ ಘೋಷಣೆ ಆಗಬಹುದು ಎನ್ನುವ ನಿರೀಕ್ಷೆಯನ್ನು ಗೌರಿಬಿದನೂರಿನ ಜನರು ಹೊಂದಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಗೆ ದೊರೆತಿರುವ ಅನುದಾನ ಮತ್ತು ಯೋಜನೆಗಳ ಪಟ್ಟಿ ಗಮನಿಸಿದರೆ ಗೌರಿಬಿದನೂರಿನ ಕಡೆಗಣನೆ ಎದ್ದು ಕಾಣುತ್ತದೆ.

ADVERTISEMENT

ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಂದಿಕೊಂಡಿರುವ ಗೌರಿಬಿದನೂರು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚು ಅವಕಾಶಗಳು ಇವೆ. 

ಚಿಕ್ಕಬಳ್ಳಾಪುರ ಜಿಲ್ಲೆಗೆ ಸುಮಾರು ₹900 ಕೋಟಿ ವೆಚ್ಚದ ಯೋಜನೆಗಳಿಗೆ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಅನುದಾನ ಮತ್ತು ಯೋಜನೆಗಳ ಅನುಮೋದನೆಯಲ್ಲಿ ಬಾಗೇಪಲ್ಲಿ, ಚಿಂತಾಮಣಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಇದ್ದರೆ, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ನಂತರದ ಸ್ಥಾನದಲ್ಲಿವೆ. 

ಗೌರಿಬಿದನೂರಿನಲ್ಲಿ ಕಳೆದ ತಿಂಗಳು ನಡೆದ ಕುಸುಮ್ ‘ಸಿ’ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಶಾಸಕ ಹಾಗೂ ಎಚ್.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ತಾಲ್ಲೂಕಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಯೋಜನೆಗಳಿಗೆ ಹಣ ದೊರಕಿಸಿಕೊಡುವಂತೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದರು. 

ಗೌರಿಬಿದನೂರಿನಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಇದಕ್ಕಾಗಿ ₹180 ಕೋಟಿಯ ಅಂದಾಜು ಯೋಜನೆ ಸಿದ್ಧಪಡಿಸಲಾಗಿದೆ. ಹಣ ದೊರಕಿಸಿಕೊಡಬೇಕು. ಗೌರಿಬಿದನೂರು ಟೋಲ್‌ನಿಂದ ಹಿಂದೂಪುರಕ್ಕೆ ಸಾಗುವ ರಸ್ತೆ ಕಿರಿದಾಗಿದೆ. ಇಲ್ಲಿ ವಾಹನ ಸಂಚಾರ ಹೆಚ್ಚು. ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ರಸ್ತೆ ವಿಸ್ತರಣೆಗೆ ಕ್ರಮವಹಿಸಬೇಕು. 20 ಸಾವಿರ ಜನಸಂಖ್ಯೆಯುಳ್ಳ ಅಲೀಪುರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಶಾಸಕ ಪುಟ್ಟಸ್ವಾಮಿಗೌಡ ಕೋರಿದ್ದರು. 

ಮುಂದಿನ ಬಜೆಟ್‌ನಲ್ಲಿ ಯುಜಿಡಿ ವ್ಯವಸ್ಥೆಗೆ ಹಣ ನೀಡಲಾಗುವುದು ಎಂದು ಮುಖ್ಯಮಂತ್ರಿಯೂ ಪ್ರಕಟಿಸಿದ್ದರು. ಕೊನೆಯ ಪಕ್ಷ ಅಲೀಪುರವನ್ನು ಪಟ್ಟಣ ಪಂಚಾಯಿತಿಯನ್ನಾದರೂ ಮಾಡಿ ಎಂದು ಗೌಡರು ಮತ್ತೊಮ್ಮೆ ಮನವಿ ಮಾಡಿದ್ದರು.  

ಮತ್ತೊಂದು ಕಡೆ ಎನ್.ಎಚ್.ಶಿವಶಂಕರ ರೆಡ್ಡಿ, ಹೊಸೂರಿನ ಎಚ್‌.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ₹50 ಕೋಟಿ, ಗೌರಿಬಿದನೂರಿನಲ್ಲಿ ರಾಮಕೃಷ್ಣ ಆಶ್ರಮ ಶಾಲೆಗೆ ಜಮೀನು ಮಂಜೂರು, ಶಾದಿಮಹಲ್ ಪೂರ್ಣಕ್ಕೆ ₹3 ಕೋಟಿ ಅನುದಾನ, ಕುಡುಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ಎಚ್.ಎನ್.ವ್ಯಾಲಿ ಯೋಜನೆಯಡಿ 10 ಎಂಎಲ್‌ಡಿ ನೀರು ಪೂರೈಕೆ, ವಿದುರಾಶ್ವತ್ಥ ಅಭಿವೃದ್ಧಿಗೆ ಹಣ ನೀಡಬೇಕು ಎಂದು ಮನವಿ ಮಾಡಿದ್ದರು.

ಹೀಗೆ ಶಾಸಕರು ಮತ್ತು ಮಾಜಿ ಶಾಸಕರು ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಕಳೆದ ತಿಂಗಳೇ ಮನವಿ ಮಾಡಿದ್ದರು. ಆದರೆ ಸಚಿವ ಸಂಪುಟ ಸಭೆಯಲ್ಲಿ ಗೌರಿಬಿದನೂರು ಕ್ಷೇತ್ರಕ್ಕೆ ಸಂಬಂಧಿಸಿದ ಒಂದೂ ಯೋಜನೆಗಳು ಅನುಮೋದನೆ ಪಡೆಯದೇ ಇರುವುದು ತಾಲ್ಲೂಕಿನ ನಾಗರಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ₹ 900 ಕೋಟಿಗೂ ಹೆಚ್ಚು ಅನುದಾನ ಸಿ.ಎಂಗೆ ಮನವಿ ಸಲ್ಲಿಸಿರುವ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಬಾಗೇಪಲ್ಲಿಗೆ ಗರಿಷ್ಠ ಯೋಜನೆಗಳು

‘ಮುಂದಿನ ಬಜೆಟ್‌ನಲ್ಲಿ ಹಣ’ ಗೌರಿಬಿದನೂರಿನಲ್ಲಿ ಯುಜಿಡಿ ವ್ಯವಸ್ಥೆ ಕಲ್ಪಿಸಲು ₹180 ಕೋಟಿ ನೀಡುವಂತೆ ಗೌರಿಬಿದನೂರಿಗೆ ಮುಖ್ಯಮಂತ್ರಿ ಅವರು ಬಂದಾಗ ಕೋರಿದ್ದೆ. ಈ ಯೋಜನೆಗೆ ಮುಂದಿನ ಬಜೆಟ್‌ನಲ್ಲಿ ಹಣ ನೀಡುವುದಾಗಿ ಅವರು ತಿಳಿಸಿದ್ದಾರೆ. ನಗರಸಭೆಯ ಕಟ್ಟಡವು ಬಾಡಿಗೆಯದ್ದಾಗಿದೆ. ಸ್ವಂತ ಕಟ್ಟಡವಿಲ್ಲ. ಇದಕ್ಕೆ ಹಣ ನೀಡುವಂತೆ ಮತ್ತು  ಅಲೀಪುರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೋರಿದ್ದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  ಈ ಪ್ರಸ್ತಾವಗಳು ಹಣಕಾಸು ಇಲಾಖೆಯ ಮುಂದೆ ಇನ್ನೂ ಬಂದಿಲ್ಲ. ಹಣಕಾಸು ಇಲಾಖೆಯಿಂದ ಅನುಮೋದನೆಗೊಂಡು ಸಚಿವ ಸಂಪುಟ ಸಭೆಗೆ ಬಂದಾಗ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ. ಕೆಲವು ಯೋಜನೆಗೆ ಮುಂದಿನ ಬಜೆಟ್‌ನಲ್ಲಿ ಹಣ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.