ADVERTISEMENT

ಗೌರಿಬಿದನೂರು: ಪಡಿತರ ಪಡೆಯುವುದೇ ತಾಪತ್ರಯ

ಸಮಯಕ್ಕೆ ಸರಿಯಾಗಿ ವಿತರಣೆಯಾಗದ ಆಹಾರ ಧಾನ್ಯಗಳು; ತಾಲ್ಲೂಕಿನಲ್ಲಿ 112 ನ್ಯಾಯಬೆಲೆ ಅಂಗಡಿಗಳು

ಕೆ.ಎನ್‌.ನರಸಿಂಹಮೂರ್ತಿ
Published 5 ಮೇ 2025, 6:28 IST
Last Updated 5 ಮೇ 2025, 6:28 IST
ಗೌರಿಬಿದನೂರು ನಗರಸಭೆ ಪಕ್ಕದಲ್ಲಿರುವ ಪಡಿತರ ಅಂಗಡಿ ಎದುರು ಗ್ರಾಹಕರು
ಗೌರಿಬಿದನೂರು ನಗರಸಭೆ ಪಕ್ಕದಲ್ಲಿರುವ ಪಡಿತರ ಅಂಗಡಿ ಎದುರು ಗ್ರಾಹಕರು   

ಗೌರಿಬಿದನೂರು: ಕೇಂದ್ರ ಮತ್ತು ರಾಜ್ಯ ರಾಜ್ಯ ಸರ್ಕಾರಗಳು ಬಡ ಕುಟುಂಬಗಳ ಹಸಿವು ನೀಗಿಸಲು ಉಚಿತವಾಗಿ ಪಡಿತರ ವಿತರಿಸುತ್ತಿವೆ. ಆದರೆ ತಾಲ್ಲೂಕಿನಲ್ಲಿ ಬಹಳಷ್ಟು ನ್ಯಾಯಬೆಲೆ ಅಂಗಡಿಗಳು ಸರಿಯಾದ ಸಮಯಕ್ಕೆ ಪಡಿತರ ವಿತರಿಸುತ್ತಿಲ್ಲ. ಜನರನ್ನು ಅಂಗಡಿಗಳ ಮುಂದೆ ಕಾಯಿಸುತ್ತಲೇ ಇದ್ದಾರೆ.

ನಗರ, ಗ್ರಾಮೀಣ ಭಾಗದ ಬಹುತೇಕ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸರಿಯಾದ ಸಮಯಕ್ಕೆ ಪಡಿತರ ವಿತರಣೆ ಮಾಡುತ್ತಿಲ್ಲ. ಈ ಬಗ್ಗೆ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ.

ತಾಲ್ಲೂಕಿನಲ್ಲಿ 112 ನ್ಯಾಯಬೆಲೆ ಅಂಗಡಿಗಳು ಇವೆ. ಶೇ 70ರಷ್ಟು ನ್ಯಾಯಬೆಲೆ ಅಂಗಡಿಗಳು ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ತೆರೆಯಲಾಗುತ್ತದೆ. ಇದರಿಂದ ಪಡಿತರ ಖರೀದಿಸುವ ಗ್ರಾಹಕರು ನಿತ್ಯವೂ ಪಡಿತರ ವಿತರಿಸುವ ಸ್ಥಳಕ್ಕೆ ಬಂದು ಹೋಗುವಂತಾಗಿದೆ.

ADVERTISEMENT

ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಕೆಲಸಕ್ಕೆ ರಜೆ ಹಾಕಿ, ನ್ಯಾಯಬೆಲೆ ಅಂಗಡಿಗಳ ಮುಂದೆ ಕಾದು ಕುಳಿತುಕೊಳ್ಳುವರು.

ನ್ಯಾಯಬೆಲೆ  ಅಂಗಡಿಗಳನ್ನು ತೆರೆಯಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆ ಮತ್ತು ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಸಮಯ ನಿಗದಿಪಡಿಸಿದೆ. ಆದರೆ ಬಹುತೇಕ ಅಂಗಡಿಗಳು ಈ ಸಮಯದಲ್ಲಿ ತೆರೆಯುವುದಿಲ್ಲ. ತಮಗೆ ಇಷ್ಟ ಬಂದ ಸಮಯದಲ್ಲಿ ತೆಗೆದು, ತೋಚಿದ ಸಮಯದಲ್ಲಿ ಅಂಗಡಿಗಳನ್ನು ಮುಚ್ಚುತ್ತಿವೆ.

ತಿಂಗಳ ಕೊನೆ ವಾರದಲ್ಲಿ ಮಾತ್ರ ಅಂಗಡಿಗಳನ್ನು ಹೆಚ್ಚಾಗಿ ತೆಗೆಯುತ್ತಾರೆ. ಇದರಿಂದ ಗ್ರಾಹಕರು, ಆತಂಕದಿಂದ, ಒಮ್ಮೆಲೇ ಪಡಿತರ ಅಂಗಡಿಗಳ ಕಡೆ ಪಡಿತರಕ್ಗೆ ಕಬೀಳುವುದು ಸಾಮಾನ್ಯವಾಗಿದೆ.

ಸರ್ಕಾರದ ಆಹಾರ ಮತ್ತು ನಾಗರಿಕ ಇಲಾಖೆಯು, ಮಂಗಳವಾರ ಮತ್ತು ಸರ್ಕಾರಿ ರಜೆಗಳನ್ನು ಹೊರತು ಪಡಿಸಿ, ಉಳಿದ ದಿನಗಳಲ್ಲಿ ಕಡ್ಡಾಯವಾಗಿ 8 ತಾಸು ಅಂಗಡಿಗಳನ್ನು ತೆರೆಯಬೇಕು ಎಂದು ಆದೇಶಿಸಿದೆ. ಆದರೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಮಾತ್ರ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ.

ಕೆಲವರು ಬೆಳಿಗ್ಗೆ ಸ್ವಲ್ಪ ಹೊತ್ತು ಪಡಿತರ ಕೊಟ್ಟರೆ ಸಂಜೆ ತೆರೆಯುವುದೇ ಇಲ್ಲ. ಮರುದಿನ ತಮ್ಮ ಅನುಕೂಲ ನೋಡಿಕೊಂಡು ತೆರೆಯುತ್ತಾರೆ. ಹೀಗಾದರೆ ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಪಡಿತರ ಪಡೆಯುವುದಾದರೂ ಹೇಗೆ ಎಂಬ ಪ್ರಶ್ನೆ  ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸರ್ಕಾರ ಪಡಿತರದಾರರು ಎಲ್ಲಿ ಬೇಕಾದರೂ ಪಡಿತರ ತೆಗೆದುಕೊಳ್ಳಲು ಅವಕಾಶ ನೀಡಿದೆ. ಆದರೆ ಬಹುತೇಕ ಅಂಗಡಿಗಳು ಇದನ್ನು ಪಾಲಿಸುತ್ತಿಲ್ಲ. ಉಚಿತವಾಗಿ ನೀಡಬೇಕಾದ ಪಡಿತರಕ್ಕೆ ₹ 10 ರಿಂದ ₹ 20 ರೂಪಾಯಿಯನ್ನು ಪಡಿತರ ಅಂಗಡಿಗಳಲ್ಲಿ ವಸೂಲಿ ಮಾಡುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.  

ತಾಲ್ಲೂಕಿನಲ್ಲಿರುವ ಯಾವುದೇ ನ್ಯಾಯ ಬೆಲೆ ಅಂಗಡಿಗಳ ಮುಂಭಾಗದಲ್ಲಿ ಯಾವ ಸಮಯಕ್ಕೆ ಅಂಗಡಿಯ ಬಾಗಿಲು ತೆರೆಯುತ್ತದೆ ಎನ್ನುವ ಮಾಹಿತಿ ಫಲಕಗಳೂ ಇಲ್ಲ.

ಪರವಾನಗಿ ರದ್ದು

ಪಡಿತರ ನೀಡಲು ಯಾವುದೇ ಅಂಗಡಿ ಮಾಲೀಕರು ಸಾರ್ವಜನಿಕರಿಂದ ಹಣ ಪಡೆಯಬಾರದು. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಹಣ ಪಡೆಯುವ ಪ್ರಕರಣಗಳು ಕಂಡು ಬಂದರೆ ಅವರ ಪರವಾನಗಿ ರದ್ದುಮಾಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮಹೇಶ್ ಎಸ್ ಪತ್ರಿ ತಹಶೀಲ್ದಾರ್ ಗೌರಿಬಿದನೂರು *** ಕೆಲಸ ಬಿಟ್ಟು ಬರಬೇಕು ತಿಂಗಳಲ್ಲಿ ಮೂರು ದಿನ ಮಾತ್ರ ಪಡಿತರ ವಿತರಣೆ ಮಾಡಲಾಗುತ್ತದೆ. ಅವರು ವಿತರಿಸುವ ದಿನ ಎಲ್ಲಾ ಕೆಲಸಗಳನ್ನು ಬಿಟ್ಟು ಪಡಿತರ ಪಡೆಯಬೇಕು. ಎಲ್ಲರೂ ಒಂದೇ ಸಲ ಬರುವುದರಿಂದ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯುವುದು ಕಷ್ಟವಾಗುತ್ತದೆ. ವೆಂಕಟಲಕ್ಷ್ಮಮ್ಮ ಕರೆಕಲ್ಲಹಳ್ಳಿ ಗೌರಿಬಿದನೂರು ***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.