ADVERTISEMENT

ಕಡೆಗೂ ಕೃಪೆ ತೋರಿದ ವರುಣ

ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಶೇ 26 ರಷ್ಟು ಮಳೆ ಪ್ರಮಾಣ ಹೆಚ್ಚಳ, ಜಲಮೂಲಗಳ ಒಡಲಲ್ಲಿ ಸ್ವಲ್ಪ ಮಳೆ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 14:20 IST
Last Updated 24 ಸೆಪ್ಟೆಂಬರ್ 2019, 14:20 IST
ಬತ್ತಿ ಬರಿದಾಗಿದ್ದ ನಗರ ಹೊರವಲಯದ ಕಂದವಾರ ಕೆರೆಯಲ್ಲಿ ಸಂಗ್ರಹವಾದ ನೀರು
ಬತ್ತಿ ಬರಿದಾಗಿದ್ದ ನಗರ ಹೊರವಲಯದ ಕಂದವಾರ ಕೆರೆಯಲ್ಲಿ ಸಂಗ್ರಹವಾದ ನೀರು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಿಂದಲೇ ಜೂಜಾಟ ಆಡುತ್ತ, ಕೃಷಿ ಚಟುವಟಕೆಗಳಿಗೆ ಹಿನ್ನೆಡೆ ಮಾಡಿ ರೈತಾಪಿ ವರ್ಗವನ್ನು ಕಂಗೆಡಿಸಿದ ವರುಣ ಒಂದು ವಾರದಿಂದ ಜನರ ಬವಣೆಗೆ ಮನಸ್ಸು ಕರಗಿಸಿದಂತೆ, ಜೋರಾಗಿ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾನೆ.

ಸೋಮವಾರ ಸಂಜೆ ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುರಿದ ಭರ್ಜರಿ ಮಳೆ ರೈತರಲ್ಲಿ ನೆಮ್ಮದಿಯ ವಾತಾವರಣ ಮೂಡಿಸಿದೆ. ಸಾಕಷ್ಟು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರು ಕಾಣುವಂತಾಗಿದೆ.

ಸೆಪ್ಟೆಂಬರ್‌ 24ರ ವರೆಗೆ ವಾಡಿಕೆಯಂತೆ 116.3 ಮಿ.ಮೀ ಮಳೆ ಬೀಳಬೇಕಿತ್ತು. ಆದರೆ ಈ ಬಾರಿ 146.3 ಮಿ.ಮೀ ಮಳೆಯಾಗಿ ಶೇ 26ರಷ್ಟು ಮಳೆ ಪ್ರಮಾಣ ಏರಿಕೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕುಡಿಯುವ ನೀರಿನ ತೊಂದರೆಯಾದರೂ ನೀಗಿತೆಂಬ ಆಶಾಭಾವ ಜನರದು.

ADVERTISEMENT

ಜೂನ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆ ಮುಂದುವರಿಯುತ್ತ, ಕೆರೆಕಟ್ಟೆಗಳು ಖಾಲಿಯಾಗುತ್ತ ಕುಡಿಯುವ ನೀರಿಗೆ ಹಾಹಾಕಾರ ಗಣನೀಯವಾಗಿ ತಲೆದೋರುತ್ತ ಸಾಗಿದ್ದು ಜಿಲ್ಲಾಡಳಿತದಲ್ಲಿ, ಜನರಲ್ಲಿ ಆತಂಕ ಮೂಡಿಸಿತ್ತು. ಆದರೆ ಕೆಲ ದಿನಗಳಿಂದ ಆಗಾಗ ಆರ್ಭಟಿಸುತ್ತಿರುವ ಮಳೆರಾಯ ಬೆಳೆಗಳನ್ನು ಸೊಂಪಾಗಿ ಮಾಡುವ ಜತೆಗೆ ಬರಿದಾಗಿ ಬಿರಿದಿದ್ದ ಜಲಮೂಲಗಳ ಒಡಲಲ್ಲಿ ಜಲರಾಶಿ ಕಾಣುವಂತೆ ಮಾಡಿದ್ದಾನೆ.

ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಪೂರೈಸುವ ಜಕ್ಕಲಮಡಗು ಜಲಾಶಯ ಬರಿದಾಗಿ, ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿ ತಲೆದೋರಿತ್ತು. ಸೋಮವಾರ ಸುರಿದ ಮಳೆಗೆ ಒಂದೇ ರಾತ್ರಿಗೆ ಜಕ್ಕಲಮಡಗು ಜಲಾಶಯಕ್ಕೆ ಸುಮಾರು 20 ಅಡಿಗಳಿಗಿಂತಲೂ ಹೆಚ್ಚು ನೀರು ಹರಿದು ಬಂದಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ತಾಲ್ಲೂಕಿನ ಪ್ರಮುಖ ಕೆರೆಗಳಲ್ಲಿ ಒಂದಾದ ಕಂದವಾರ ಕೆರೆ ಸೇರಿದಂತೆ ಸಾಕಷ್ಟು ಕೆರೆಗಳಿಗೆ ನೀರು ಹರಿದು ಬಂದಿದೆ. ಇತ್ತೀಚೆಗೆ ಸ್ವಚ್ಛಗೊಂಡಿದ್ದ ಕಲ್ಯಾಣಿಗಳಲ್ಲಿ ಜಲರಾಶಿ ನೋಡುವಂತಾಗಿದೆ. ಜತೆಗೆ ಕೆರೆಗಳ ಸಂಪರ್ಕ ಕಾಲುವೆಗಳು ಒತ್ತುವರಿಗೆ ಅಸ್ತಿತ್ವ ಕಳೆದುಕೊಂಡ ಕಡೆಗಳಲ್ಲೆಲ್ಲ ಜಮೀನುಗಳು ಕೆರೆಗಳ ರೀತಿ ಭಾಸವಾಗುತ್ತಿವೆ.

ಜಿಲ್ಲೆಯಲ್ಲಿ ಜುಲೈನಲ್ಲಿ ವಾಡಿಕೆಯಂತೆ 148.7 ಮಿ.ಮೀ ಮಳೆ ಆಗಬೇಕಿತ್ತು. ಆದರೆ 142.6 ಮಿ.ಮೀ ಮಳೆ ಸುರಿದಿತ್ತು. ಆಗಸ್ಟ್‌ನಲ್ಲಿ 100 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. 65.3 ಮಳೆಯಾಗಿ ಶೇ 26 ರಷ್ಟು ಕೊರತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.