ADVERTISEMENT

ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಸ್ಫೋಟಕ ಸಾಮಗ್ರಿಗಳ ದಾಸ್ತಾನು ಕಟ್ಟಡ ನಿರ್ಮಾಣ; ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:17 IST
Last Updated 6 ಆಗಸ್ಟ್ 2025, 5:17 IST
ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿ ಗ್ರಾಮಸ್ಥರ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ
ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿ ಗ್ರಾಮಸ್ಥರ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ   

ಗುಡಿಬಂಡೆ: ತಾಲ್ಲೂಕಿನ ಪುಲಸಾನಿವೊಡ್ಡು ಗ್ರಾಮದ ಸರ್ವೆ ನಂ. 34/5 ರ 1.12ಗುಂಟೆ ಜಮೀನಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸ್ಫೋಟಕ ಸಾಮಗ್ರಿಗಳ ದಾಸ್ತಾನು ಮ್ಯಾಗಜಿನ್ ಕಟ್ಟಡ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳ ಗ್ರಾಮಸ್ಥರು ಹೈಕೋರ್ಟ್ ಮೊರೆಹೋಗಿದ್ದಾರೆ.

ಗ್ರಾಮಸ್ಥರ ಸುರಕ್ಷೆಯ ದೃಷ್ಟಿಯಿಂದ ಮತ್ತೊಮ್ಮೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ಈ ಮೇರೆಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಬಾ ಹೋಬಳಿಯ ಪುಲಸಾನಿವೊಡ್ಡು ಗ್ರಾಮದ ಸರ್ವೆ ನಂ. 34/5ರ 1.12 ಗುಂಟೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಅರ್ಜಿಸಲ್ಲಿಸಿದ್ದರು. ವಿವಿಧ ಇಲಾಖೆಗಳಿಂದ ನೀಡಿದ್ದ ಎನ್.ಓ.ಸಿ ಆಧಾರದ ಮೇಲೆ ಮ್ಯಾಗಜಿನ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ನಂತರ ಗ್ರಾಮಸ್ಥರು ಇದರ ವಿರುದ್ಧ ಹೈಕೋರ್ಟ್ ಮೊರೆ ಹೋದರು ಎಂದು ಹೇಳಿದರು.

ನ್ಯಾಯಾಲಯವು ಮತ್ತೊಮ್ಮೆ ವಾದಿಗಳ ಮತ್ತು ಪ್ರತಿವಾದಿಗಳಿಗೆ ಅವಕಾಶ ಕೊಟ್ಟು ಎರಡು ಕಡೆಯವರ ಸಮಕ್ಷಮದಲ್ಲಿ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಆ ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಇಒ, ಲೋಕೋಪಯೋಗಿ ಇಲಾಖೆ, ಭೂ ಮಾಪನಾ ಇಲಾಖೆ, ಪರಿಸರ ಇಲಾಖೆ ಸೇರಿದಂತೆ ಇತರ ಇಲಾಖೆ  ಅಧಿಕಾರಿಗಳು ಪರಿಶೀಲನೆ ನಡೆಸಿದೆವು ಎಂದು ಹೇಳಿದರು.

ವಾದಿಗಳ ಮತ್ತು ಪ್ರತಿವಾದಿಗಳ ಇಬ್ಬರು ನೀಡಿರುವ ಹೇಳಿಕೆಗಳನ್ನು ದಾಖಲು ಮಾಡಿ ಹೈಕೋರ್ಟ್‌ಗೆ ವರದಿ ಸಲ್ಲಿಸುತ್ತೇವೆ ಎಂದರು.

 ಸ್ಥಳದಲ್ಲಿ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿತ್ತು. ತಹಶೀಲ್ದಾರ್ ಸಿಗ್ಬತುಲ್ಲ, ತಾಲ್ಲೂಕು ಪಂಚಾಯತಿ ಇಒ ನಾಗಮಣಿ, ಎಡಿಎಲ್ ಆರ್. ಸುಬ್ರಮಣಿ, ಲೋಕೋಪಯೋಗಿ ಇಲಾಖೆಯ ಪೂಜಪ್ಪ, ಗುಡಿಬಂಡೆ ಸಬ್ ಇನ್‌ಸ್ಪೆಕ್ಟರ್ ಗಣೇಶ್, ರಮೇಶ್, ಹಂಪಸಂದ್ರ ಗ್ರಾಮ ಪಂಚಾಯತಿ ಪಿಡಿಒ ಮಮತಾ, ಪರಿಸರ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ಪುಲಸಾನಿವೊಡ್ಡು, ನಲ್ಲಗೊಂಡಯ್ಯಗಾರಹಳ್ಳಿ, ಹಂಪಸಂದ್ರ ಗ್ರಾಮಸ್ಥರು ಸ್ಥಳದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.