ADVERTISEMENT

ಹೋರಾಟ ಹತ್ತಿಕ್ಕಲು ಷಡ್ಯಂತ್ರ

ಕೇಂದ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 2:21 IST
Last Updated 30 ಮಾರ್ಚ್ 2022, 2:21 IST
ಚಿಂತಾಮಣಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ನಾಯಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಚಿಂತಾಮಣಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ನಾಯಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು   

ಚಿಂತಾಮಣಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕ ವರ್ಗವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ನೀತಿಗಳನ್ನು ರೂಪಿಸುತ್ತಿದೆ. ಕಾರ್ಮಿಕ ಚಳವಳಿಯನ್ನು ತುಳಿಯುವ ಸಂಚು ಹೂಡಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗವು ಮಂಗಳವಾರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಬಿಜೆಪಿ ಅವಧಿಯಲ್ಲಿ ಸಾಮಾನ್ಯ ಮತ್ತು ಬಡ ಜನರ ಬದುಕು ಕೆಳಮಟ್ಟಕ್ಕೆ ಕುಸಿಯುತ್ತಿದೆ. ನಿರಂತರ ಬೆಲೆ ಏರಿಕೆ, ನಿರುದ್ಯೋಗ, ಸಾಮಾಜಿಕ ಅಭದ್ರತೆ, ಕುಸಿದ ಆರ್ಥಿಕ ವ್ಯವಸ್ಥೆ ಮುಂತಾದ ಸಮಸ್ಯೆಗಳಿಂದ ದೇಶ ತತ್ತರಿಸುತ್ತಿದೆ ಎಂದು ದೂರಿದರು.

‘ಕೈಗಾರಿಕಾ ಅಭಿವೃದ್ಧಿಗೆ ಶ್ರಮಿಸಿದ ಕಾರ್ಮಿಕ ವರ್ಗದವರ ಅಭಿವೃದ್ಧಿಗೆ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ನಷ್ಟದಲ್ಲಿರುವಂತೆ ತೋರಿಸಿ ಶಾಶ್ವತವಾಗಿ ಮುಚ್ಚಲು ಅಥವಾ ಖಾಸಗೀಕರಣ ಮಾಡುವುದರಿಂದ ಲಕ್ಷಾಂತರ ಕಾರ್ಮಿಕರ ಜೀವನ ಅತಂತ್ರವಾಗಲಿದೆ. ದೇಶಕ್ಕೆ ಕಾರ್ಮಿಕರು ನೀಡಿರುವ ಕೊಡುಗೆಯನ್ನು ಸಾರಾಸಗಟಾಗಿ ತಿರಸ್ಕರಿಸಿ ಬೀದಿಪಾಲು ಮಾಡಲು ಹೊರಟಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೋನಪ್ಪಲ್ಲಿ ಕೋದಂಡ
ಟೀಕಿಸಿದರು.

ADVERTISEMENT

ಬೃಹತ್ ಸಾರ್ವಜನಿಕ ಸಾರಿಗೆಯಾದ ರೈಲ್ವೆಯನ್ನೂ ಖಾಸಗೀಕರಣ ಮಾಡಲು ಚಿಂತನೆ ನಡೆಯುತ್ತಿದೆ. ಬಹುತೇಕ ಎಲ್ಲಾ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಮಿಕರ ಭವಿಷ್ಯಕ್ಕೆ ಧಕ್ಕೆ ಉಂಟು ಮಾಡಲು ಮುಂದಾಗಿದೆ ಎಂದು
ಆರೋಪಿಸಿದರು.

ಕೇಂದ್ರ ಕಾರ್ಮಿಕ ನೀತಿಗಳನ್ನು ವಿರೋಧಿಸಿ ದೇಶದಾದ್ಯಂತ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನಗರಸಭೆಮಾಜಿ ಸದಸ್ಯ ಸುಬ್ರಮಣ್ಯಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ತಳಗವಾರ ಮುನಿರಾಜು, ಅಶೋಕ, ಶಿವಕುಮಾರ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.