ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಶನಿವಾರ ನಡೆದ ಹುಣ್ಣಿಮೆ ರಥೋತ್ಸವ
ಚಿಂತಾಮಣಿ: ತಾಲ್ಲೂಕಿನ ಕೈವಾರದಲ್ಲಿ ಶನಿವಾರ ಸದ್ಗುರು ಯೋಗಿನಾರೇಯಣ ಮಠದಲ್ಲಿ ಚೈತ್ರ ಮಾಸದ ದವನದ ಹುಣ್ಣಿಮೆ ಪ್ರಯುಕ್ತ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ಬೃಂದಾವನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಹುಣ್ಣಿಮೆ ಪೂಜೆಗಾಗಿ ಪೀಠವನ್ನು ಅಲಂಕರಿಸಿ ಶ್ರೀದೇವಿ ಭೂದೇವಿ ಸಮೇತ ಅಮರನಾರೇಯಣಸ್ವಾಮಿ ಹಾಗೂ ತಾತಯ್ಯನವರ ಉತ್ಸವ ಮೂರ್ತಿಗಳನ್ನು ಕುಳ್ಳರಿಸಲಾಗಿತ್ತು. ಉತ್ಸವಮೂರ್ತಿಗಳಿಗೆ ಪಂಚಾಮೃತ ಮತ್ತು ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.
ಶಾಸ್ತ್ರೋಕ್ತವಾಗಿ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಿ ಮಹಾಮಂಗಳಾರತಿಯನ್ನು ಮಾಡಲಾಯಿತು. ತಾತಯ್ಯ ಅವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಗೋವಿಂದ, ಗೋವಿಂದ ನಾಮಸ್ಮರಣೆಯೊಂದಿಗೆ ದೇವಾಲಯದ ಸುತ್ತಲೂ ರಥೋತ್ಸವ ನಡೆಯಿತು. ನೂರಾರು ಜನ ಭಕ್ತರು ರಥದೊಂದಿಗೆ ಸುತ್ತು ಹಾಕಿ ಭಕ್ತಿ ಮೆರೆದರು.
ಮಠದಲ್ಲಿ ಮುಂಜಾನೆಯಿಂದಲೇ ಘಂಟಾನಾದ, ಸುಪ್ರಭಾತದೊಂದಿಗೆ ಗೋಪೂಜೆ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಿತು. ಕೈವಾರ ತಾತಯ್ಯ ವಿರಚಿತ ಶ್ರೀರಾಮ ತಾರಕ ಮಂತ್ರವನ್ನು 108 ಬಾರಿ ಜಪಿಸಲಾಯಿತು.
ಭೀಮ ಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ಸಹಸ್ರ ಬಿಲ್ವಾಚರಣೆ ಮತ್ತು ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.
ಸಂಜೆ ನಾದಸುಧಾರಸ ಸಂಕೀರ್ತನ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಧರ್ಮಾಧಿಕಾರಿ ಎಂ.ಆರ್. ಜಯರಾಂ, ವಾನರಾಶಿ ಬಾಲಕೃಷ್ಣ ಭಾಗವತ್, ಟಿ.ಎಲ್.ಆನಂದ್, ಟ್ರಸ್ಟ್ ಪದಾಧಿಕಾರಿಗಳು, ಲಕ್ಷ್ಮಿ ನಾರಾಯಣ್ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.