ADVERTISEMENT

ಚಿಕ್ಕಬಳ್ಳಾಪುರ: ಕರ ಕಟ್ಟದಿದ್ದರೆ ನೀರಿಗೆ ಕತ್ತರಿ

ಬಾಕಿ ಇರುವ ಕಂದಾಯ ವಸೂಲಿಗೆ ವಿಶೇಷ ಅಭಿಯಾನ ಕೈಗೊಂಡ ನಗರಸಭೆ

ಈರಪ್ಪ ಹಳಕಟ್ಟಿ
Published 29 ಸೆಪ್ಟೆಂಬರ್ 2020, 19:30 IST
Last Updated 29 ಸೆಪ್ಟೆಂಬರ್ 2020, 19:30 IST
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ನೀರಿನ ಕರ ವಸೂಲಿಗೆ ಮನೆ ಮನೆ ಅಭಿಯಾನ ನಡೆಸಿದ ನಗರಸಭೆ ಸಿಬ್ಬಂದಿ
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ನೀರಿನ ಕರ ವಸೂಲಿಗೆ ಮನೆ ಮನೆ ಅಭಿಯಾನ ನಡೆಸಿದ ನಗರಸಭೆ ಸಿಬ್ಬಂದಿ   

ಚಿಕ್ಕಬಳ್ಳಾಪುರ: ನಗರದಲ್ಲಿ ಬಾಕಿ ಇರುವ ಕೋಟ್ಯಂತರ ರೂಪಾಯಿ ಕಂದಾಯ ವಸೂಲಾತಿಗೆ ನಗರಸಭೆ ‘ಮನೆ ಮನೆಗೆ ತೆರಳಿ ಕಂದಾಯ ಸಂಗ್ರಹ’ ಎಂಬ ವಿಶೇಷ ಅಭಿಯಾನ ಶುರುವಿಟ್ಟುಕೊಂಡಿದೆ.

ಮೊದಲಿನಿಂದಲೂ ನಗರಸಭೆ ಸಿಬ್ಬಂದಿ ಕಂದಾಯ ಅಭಿಯಾನ ನಡೆಸುತ್ತಿದ್ದರಾದರೂ ಅದು ಕೋವಿಡ್‌ ಕಾಣಿಸಿಕೊಂಡ ನಂತರದಲ್ಲಿ ಬಂದ್‌ ಆಗಿತ್ತು. ಕೆಲವೇ ನಾಗರಿಕರು ಮಾತ್ರ ಕೊರೊನಾ ಸಂಕಷ್ಟದ ನಡುವೆಯೂ ಸ್ವಯಂ ಪ್ರೇರಿತರಾಗಿ ಸರಿಯಾಗಿ ಕಂದಾಯ ಪಾವತಿಸುತ್ತ ಬಂದಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಕೆಲವರು ಕಳೆದ ಹಲವು ವರ್ಷಗಳಿಂದ ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಈ ಕಾರಣ ಆದಾಯ ಸಂಗ್ರಹಕ್ಕೆ ಹಿನ್ನಡೆ ಉಂಟಾಗಿದೆ. ಕಂದಾಯ ಸಂಗ್ರಹವಾಗದ ಕಾರಣ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಹಣದ ಕೊರತೆ ಉಂಟಾಗಿದೆ.

ADVERTISEMENT

ಕಂದಾಯ ಬಾಕಿ ಉಳಿಸಿದವರನ್ನು ಪತ್ತೆಹಚ್ಚುವ ಉದ್ದೇಶದೊಂದಿಗೆ ಮನೆ ಮನೆ ಅಭಿಯಾನಕ್ಕೆ ಇದೀಗ ಚಾಲನೆ ನೀಡಿರುವ ನಗರಸಭೆ ಆಯುಕ್ತರು, ನೀರಿನ ಕರ ಕಟ್ಟದವರಿಗೆ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ನಗರದಲ್ಲಿ ಮಂಗಳವಾರ ಕೆಲ ಮನೆಗಳ ನೀರಿನ ಸಂಪರ್ಕಗಳನ್ನು ನಗರಸಭೆ ಸಿಬ್ಬಂದಿ ಕಡಿತಗೊಳಿಸುವ ಮೂಲಕ ಕಠಿಣ ಕ್ರಮದ ಸಂದೇಶ ರವಾನಿಸಿದರು.

ನಗರದಲ್ಲಿ ವಾರ್ಷಿಕವಾಗಿ ನಿವೇಶನಗಳು ಮತ್ತು ಮನೆ ಕಂದಾಯದಿಂದ ನಗರಸಭೆಗೆ ₹5.93 ಕೋಟಿ ಸಂಗ್ರಹವಾಗಬೇಕು. ಈ ಪೈಕಿ ಕಳೆದ ಐದು ತಿಂಗಳಲ್ಲಿ ₹2.60 ಕೋಟಿ ಕಂದಾಯ ವಸೂಲಾಗಿದೆ. ಇನ್ನೂ ₹3.33 ಕೋಟಿ ಕರ ಬಾಕಿ ಪಾವತಿಯಾಗಬೇಕಿದೆ.

ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ₹14 ಸಾವಿರಕ್ಕೂ ಅಧಿಕ ನಲ್ಲಿಗಳ ಸಂಪರ್ಕವಿದ್ದು ವಾರ್ಷಿಕವಾಗಿ ₹1.35 ಕೋಟಿ ನೀರಿನ ಕರ ಸಂಗ್ರಹವಾಗಬೇಕು. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ ₹50 ಲಕ್ಷ ಮಾತ್ರ ಸಂಗ್ರಹವಾಗಿದ್ದು, ನಗರಸಭೆಯ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತಿದೆ.

ನಗರದಲ್ಲಿ ನೀರಿನ ಪೂರೈಕೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ನೀರಿನ ಕರ ಪಾವತಿಯಾಗುತ್ತಿಲ್ಲ ಎಂಬ ಬೇಸರ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಆದ್ದರಿಂದ ವಿಶೇಷವಾಗಿ ನೀರಿನ ಕರ ವಸೂಲಿಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.

ಈ ಸಿಬ್ಬಂದಿ ಮನೆ ಮನೆಗೆ ತೆರಳಿ ನೀರಿನ ಕರ ಬಾಕಿ ಲೆಕ್ಕ ಪರಿಶೀಲಿಸಿ ತುಂಬಾ ದಿನಗಳಿಂದ ಬಾಕಿ ಉಳಿಸಿಕೊಂಡವರು, ದೊಡ್ಡ ಮೊತ್ತದ ಪಾವತಿಸದವರ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸುವ ಮೂಲಕ ಇತರರಿಗೂ ಬಾಕಿ ಪಾವತಿಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ.

‘ನಗರದಲ್ಲಿ ಮನೆ, ನಿವೇಶನಗಳ ಕಂದಾಯ ಸಂಗ್ರಹ ಸಮಾಧಾನಕರ ರೀತಿಯಲ್ಲಿದೆ. ಆದರೆ, ನೀರಿನ ಕರ ಪಾವತಿ ಕುಂಠಿತಗೊಂಡಿದೆ. ಮಾನವೀಯತೆ ದೃಷ್ಟಿಯಿಂದ ಬಾಕಿ ಪಾವತಿಗೆ ಅವಕಾಶ ನೀಡಿದರೆ ಜನ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ, ನೀರಿನ ಕರ ಬಾಕಿ ಉಳಿಸಿಕೊಂಡವರ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ನಗರಸಭೆ ಆಯುಕ್ತ ಡಿ.ಲೋಹಿತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.