ADVERTISEMENT

ಕೆರೆ ಬಳಿ ಶುದ್ಧೀಕರಣ ಘಟಕ ಸ್ಥಾಪಿಸಿ: ರೈತರ ಆಗ್ರಹ

ಭಕ್ತರಹಳ್ಳಿ-ಅರಸೀಕೆರೆ ಯೋಜನೆ; ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:31 IST
Last Updated 20 ಸೆಪ್ಟೆಂಬರ್ 2020, 2:31 IST
ಚಿಂತಾಮಣಿ ತಾಲ್ಲೂಕಿನ ಲಕ್ಷ್ಮೀದೇವನಕೋಟೆ ಕ್ರಾಸ್ ಬಳಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು
ಚಿಂತಾಮಣಿ ತಾಲ್ಲೂಕಿನ ಲಕ್ಷ್ಮೀದೇವನಕೋಟೆ ಕ್ರಾಸ್ ಬಳಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು   

ಚಿಂತಾಮಣಿ: ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ರೂಪಿಸಿರುವ ಭಕ್ತರಹಳ್ಳಿ ಅರಸೀಕೆರೆ ಯೋಜನೆಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಲಕ್ಷ್ಮಿದೇವನಕೋಟೆ ಕ್ರಾಸ್ ಬಳಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ಕತ್ತರಿಗುಪ್ಪೆ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳು, ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಕೇತನಾಯಕನಹಳ್ಳಿ, ಯಶವಂತಪುರ ಹಾಗೂ ಪೈಪ್‌ಲೈನ್ ಹಾದುಹೋಗುವ ಹಾದಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ಒದಗಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ಮುಖಂಡ ಹಾಲು ನಾರಾಯಣಸ್ವಾಮಿ ಮಾತನಾಡಿ, ನಮ್ಮ ಪ್ರದೇಶದ ಕೆರೆಯ ನೀರನ್ನು ನಗರಕ್ಕೆ ಪೂರೈಸಲು ಯೋಜನೆ
ರೂಪಿಸಲಾಗಿದೆ. ಶುದ್ಧೀಕರಣ ಘಟಕವನ್ನು ನಗರದ ನೆಕ್ಕುಂದಿ ಕೆರೆಯಲ್ಲಿ ಸ್ಥಾಪನೆ ಮಾಡಿದರೆ ಪ್ರಯೋಜನವಿಲ್ಲ. ಶುದ್ಧೀಕರಣದ ನಂತರ ಉಳಿದ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಥಾಪಿಸಿದರೆ ಗ್ರಾಮಗಳ ಜನರು ಕೃಷಿಗೆ ಬಳಸಿಕೊಂಡು ಹಸರೀಕರಣ ಮಾಡುತ್ತಾರೆ. ನಮ್ಮ ಕೆರೆಯ ನೀರನ್ನು ಕೊಡುತ್ತಿರುವುದರಿಂದ ನಮಗೂ ಸಹಾಯವಾಗುತ್ತದೆ ಎಂದರು.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಗಮನಹರಿಸುತ್ತಿಲ್ಲ. ಕನಿಷ್ಠ ಸುತ್ತಮುತ್ತಲ ಗ್ರಾಮಗಳ ರೈತರ ಸಭೆ ಕರೆದು ಯೋಜನೆ ಕುರಿತು ಮಾಹಿತಿ ನೀಡಿಲ್ಲ. ಶುದ್ಧೀಕರಣ ಘಟಕವನ್ನು ಕೆರೆಯ ಬಳಿಯಲ್ಲೇ ಸ್ಥಾಪಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಶ್ರೀನಿವಾಸರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಮಟ್ಟದಲ್ಲಿ ಈ ವಿಚಾರವನ್ನು ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಭರವಸೆಯನ್ನು ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂಬ ಷರತ್ತಿನೊಂದಿಗೆ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು.

ಮುಖಂಡ ಭಕ್ತರಹಳ್ಳಿ ತಿಮ್ಮಾರೆಡ್ಡಿ, ವೆಂಕಟೇಶ್, ನಾರಾಯಣಸ್ವಾಮಿ, ಕತ್ತರಿಗುಪ್ಪೆ ಅಲ್ಲಾಬಕಾಷ್, ಕೇತನಾಯಕನಹಳ್ಳಿ ಕದಿರಪ್ಪ, ಲಕ್ಷ್ಮಿದೇವನಕೋಟೆ ನರಸಿಂಹರೆಡ್ಡಿ, ಮುನಿರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.