ADVERTISEMENT

‘ಆಡಳಿತದಲ್ಲಿ ಗಂಡಂದಿರ ದರ್ಬಾರ್‌’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 3:19 IST
Last Updated 9 ಮಾರ್ಚ್ 2021, 3:19 IST
ಬಾಗೇಪಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ ಮತ್ತು ರೈತ ಸಂಘದ ರಾಜ್ಯ ಸಂಚಾಲಕಿ ಸಿ. ಉಮಾ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು
ಬಾಗೇಪಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ ಮತ್ತು ರೈತ ಸಂಘದ ರಾಜ್ಯ ಸಂಚಾಲಕಿ ಸಿ. ಉಮಾ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು   

ಬಾಗೇಪಲ್ಲಿ: ಸ್ಥಳೀಯ ಸರ್ಕಾರಗಳಲ್ಲಿ ಮಹಿಳೆಯರು ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರಾದರೂ ಆಡಳಿತದಲ್ಲಿ ಪತಿಯರೇ ದರ್ಬಾರ್ ನಡೆಸುತ್ತಿರುವುದು ದುರಂತ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ. ನಯಾಜ್ ಅಹಮದ್
ವಿಷಾದಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ, ಆಂತರಿಕ ಸಮಿತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಪತಿಯರು ತಮ್ಮ ಸದಸ್ಯೆ ಪತ್ನಿಯರನ್ನು ಮನೆಯಲ್ಲಿ ಇರಿಸಿ ಗೋವಾ ಪ್ರವಾಸ ಮಾಡಿ ಬಂದಿದ್ದಾರೆ. ಅಂದರೆ ಮಹಿಳೆಯರು ಜನಪ್ರತಿನಿಧಿಗಳಾದರೂ ಪತಿಯರೇ ನಿರ್ಣಯ ಮಾಡುತ್ತಿದ್ದಾರೆ ಎಂದರು.

ADVERTISEMENT

ಹೆಣ್ಣುಮಕ್ಕಳು ಮೊದಲು ಜ್ಞಾನವಂತರಾಗಬೇಕು. ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕು. ದಿನಪತ್ರಿಕೆ, ಪುಸ್ತಕಗಳನ್ನು ಓದಬೇಕು. ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಂಡು, ನವ ಸಮಾಜ ಕಟ್ಟಬೇಕು. ಮಹಿಳೆ ಎಂದರೆ ಶಕ್ತಿ. ಆ ಶಕ್ತಿ ಇಡೀ ಪ್ರಪಂಚಕ್ಕೆ ಜ್ಞಾನದೀಪ ಆಗಬೇಕು. ಹೋರಾಟಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.

ಮಹಿಳೆಯರು ಎಲ್ಲಾ ರಂಗದಲ್ಲಿ ಇದ್ದಾರೆ. ಮನೆಗೆ ಸೀಮಿತವಾಗಿರಬಾರದು. ಗೊಡ್ಡು ಸಂಪ್ರದಾಯಗಳಿಂದ ಹೊರಬಂದು ದೇಶ ಕಟ್ಟುವಂತರಾಗಬೇಕು. ಮಹಿಳೆಯರು ದಿಟ್ಟ ಮನೋಭಾವನೆ, ವೈಜ್ಞಾನಿಕ, ದೇಸಿ ಪದ್ಧತಿ ರೂಢಿಸಿಕೊಳ್ಳಬೇಕು. ಮನೆಯೇ, ತಾಯಿಯೇ ಮೊದಲ ಪಾಠಶಾಲೆ ಆಗಿರುವುದರಿಂದ ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಬೇಕು. ಉತ್ತಮ ಸತ್ಪ್ರಜೆಗಳಾಗಿ ಮಾಡಬೇಕು ಎಂದು ಕರೆ ನೀಡಿದರು.

ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ ಮಾತನಾಡಿದರು. ಗುಲ್ನಾಜ್ ಬೇಗಂ, ರೈತ ಸಂಘದ ರಾಜ್ಯ ಮಹಿಳಾ ಸಂಚಾಲಕಿ ಸಿ. ಉಮಾ ಅವರನ್ನು ಸನ್ಮಾನಿಸಲಾಯಿತು.

ರೈತ ಸಂಘದ ತಾಲ್ಲೂಕು ಅಧ್ಯಕ್ಷೆ ಟಿ.ಆರ್. ಪ್ರಮೀಳಾ, ಪ್ರಾಂಶುಪಾಲ ಪ್ರೊ.ವೈ.ನಾರಾಯಣ, ಗ್ರಂಥಪಾಲಕ ಡಾ.ಸಿ.ಎಸ್. ವೆಂಕಟರಾಮರೆಡ್ಡಿ, ಡಾ.ಬಿ.ಎನ್. ಪ್ರಭಾಕರ್, ಪ್ರಾಧ್ಯಾಪಕಿಯರಾದ ನಂದನಾ, ಪೂರ್ಣಂ ಕುವರ್, ಅಧೀಕ್ಷಕಿ ಅನಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.