ಚಿಕ್ಕಬಳ್ಳಾಪುರ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಸೂಕ್ತ ಪರಿಹಾರ ಒದಗಿಸಲು ಪ್ರತಿ ತಿಂಗಳು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ 15 ದಿನಗಳಿಗೆ ಒಮ್ಮೆ ‘ಜನತಾ ದರ್ಶನ’ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
ಆದರೆ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನಗಳು ಸ್ಥಗಿತವಾಗಿವೆ. ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಎರಡೇ ಎರಡು ಬಾರಿ ಜನತಾದರ್ಶನ ನಡೆಸಿದ್ದಾರೆ. ಜಿಲ್ಲಾಧಿಕಾರಿ ಅವರ ಜನತಾ ದರ್ಶನವೂ ಕೆಲವು ತಿಂಗಳಿನಿಂದ ಬಂದ್ ಆಗಿದೆ. ಹೀಗೆ ಮಹತ್ವದ ಕಾರ್ಯಕ್ರಮ ಎನಿಸಿದ್ದ ‘ಜನತಾ ದರ್ಶನ’ ಸ್ಥಗಿತವಾಗಿದೆ.
2023ರ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾ ದರ್ಶನದ ಬಗ್ಗೆ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ಸಹ ನೀಡಿದ್ದರು. ಸೆ. 25ರಂದು ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯಾ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳನ್ನು ಸೇರಿಸಿಕೊಂಡು ಜನತಾ ದರ್ಶನ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದ್ದರು.
ಆ ಪ್ರಯುಕ್ತ 2023ರ ಸೆ.25ರಂದು ಚಿಕ್ಕಬಳ್ಳಾಪುರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ‘ಜನತಾ ದರ್ಶನ’ ನಡೆಸಿದ್ದರು. ಆದರೆ ನಂತರದ ತಿಂಗಳಲ್ಲಿ ಸಚಿವರು ಜಿಲ್ಲಾ ಮಟ್ಟದಲ್ಲಿ ಮತ್ತೆ ಜನತಾ ದರ್ಶನ ನಡೆಸಲಿಲ್ಲ.
2024ರ ಜ. 17ರಂದು ಬಾಗೇಪಲ್ಲಿಯಲ್ಲಿ ಸಚಿವರಿಂದ ಜನತಾ ದರ್ಶನ ನಡೆದಿತ್ತು. ಅಲ್ಲಿಂದ ಈ ಒಂದೂವರೆ ವರ್ಷದಲ್ಲಿ ಮತ್ತೊಂದು ಜನತಾ ದರ್ಶನವನ್ನು ಜಿಲ್ಲೆಯಲ್ಲಿ ಸಚಿವರ ನಡೆಸಿಲ್ಲ.
ಆಯಾ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮನ್ವಯ ಸಾಧಿಸಿ ಜನತಾ ದರ್ಶನಕ್ಕೆ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು. ಜಿಲ್ಲಾಡಳಿತವು ಆಯಾ ಜಿಲ್ಲೆಯ ಜನರಿಗೆ ಜನತಾ ದರ್ಶನ ನಡೆಯುವ ಸ್ಥಳ, ಸಮಯ ಇತ್ಯಾದಿ ಮಾಹಿತಿಯನ್ನು ಜಾಹೀರಾತು ಮೂಲಕ ಮೊದಲೇ ನೀಡಬೇಕು ಎಂದು ಮುಖ್ಯಮಂತ್ರಿ ಈ ಹಿಂದೆ ಸೂಚಿಸಿದ್ದರು.
ಜಿಲ್ಲಾ ಕೇಂದ್ರದಲ್ಲಿ ನಡೆದ ಸಚಿವರ ಮೊದಲ ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳಾ, ಡಿಸಿ, ಎಸ್ಪಿ, ಜಿ.ಪಂ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಹ ಭಾಗವಹಿಸಿದ್ದರು.
ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು 6 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಒಟ್ಟು 237 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಸ್ವೀಕೃತ ಅರ್ಜಿಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಶೇ 30ರಷ್ಟು ಅಂದರೆ 65ಕ್ಕೂ ಹೆಚ್ಚು ಅರ್ಜಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂದಿಸಿದಂತೆ 32 ಅರ್ಜಿಗಳು ಬಂದಿದ್ದವು.
ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಲಾಯಿತು. ಅಂಗವಿಲಕರು, ವೃದ್ಧರು, ಅಶಕ್ತರು ಮತ್ತು ಮಹಿಳೆಯರು ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿದರು. ಹೀಗೆ ಸಾಮಾನ್ಯ ಜನರು ಸಹ ಸಚಿವರನ್ನು ನೇರವಾಗಿ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ಜನತಾ ದರ್ಶನದಲ್ಲಿ ಅವಕಾಶವಿದೆ. ಇದು ಜನರಿಗೆ ಹೆಚ್ಚು ಅನುಕೂಲವಾಗಿದೆ. ಬಾಗೇಪಲ್ಲಿಯಲ್ಲಿ ಜನತಾ ದರ್ಶನ ನಡೆಸಿದಾಗಲೂ ದೊಡ್ಡ ಮಟ್ಟದಲ್ಲಿಯೇ ಅರ್ಜಿಗಳು ಬಂದಿದ್ದವು.
ಸಾಮಾನ್ಯ ಜನರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಆಗಬೇಕು ಎಂದರೆ, ರಾಜಕೀಯ ನಾಯಕರು ಅಥವಾ ಪ್ರಭಾವಿಗಳನ್ನು ಆಶ್ರಯಿಸಬೇಕು. ಆದರೆ ಜನತಾ ದರ್ಶನದಲ್ಲಿ ನೇರವಾಗಿ ಸಚಿವರಿಗೆ ತಮ್ಮ ಅಹವಾಲನ್ನು ಜನರು ಸಲ್ಲಿಸಬಹುದು. ಇಂತಹ ಮಹತ್ವದ ಕಾರ್ಯಕ್ರಮ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ಜಿಲ್ಲೆಯ ಹೋರಾಟಗಾರರು.
ಜಿಲ್ಲೆಗೆ ಇತ್ತೀಚೆಗೆ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಭೇಟಿ ನೀಡಿದ ವೇಳೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಅಧಿಕವಾಗಿ ಪ್ರಸ್ತಾಪವಾಗಿವೆ. ಈ ವಿಚಾರವಾಗಿ ಹೆಚ್ಚು ದೂರುಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಒಂದು ವೇಳೆ ಜನತಾ ದರ್ಶನಗಳು ನಡೆದಿದ್ದರೆ ಜನ ಸಾಮಾನ್ಯರು ತಮಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರುತ್ತಿದದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಅವರು ನಿಯಮಿತವಾಗಿ ಜನತಾ ದರ್ಶನಗಳನ್ನು ನಡೆಸಿದರೆ ಜನ ಸಾಮಾನ್ಯರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಅವಕಾಶವಾಗುತ್ತದೆ. ಖುದ್ದು ಸಚಿವರನ್ನೇ ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಆಡಳಿತಕ್ಕೂ ಇದು ಚುರುಕು ನೀಡುವ ಮಾರ್ಗ.
ಆದರೆ ಜಿಲ್ಲೆಯಲ್ಲಿ ಜನತಾ ದರ್ಶನಗಳು ಆರಂಭದಲ್ಲಿ ಮಾತ್ರ ಬಿರುಸಿನಿಂದ ನಡೆದವು. ಈಗ ಸ್ಥಗಿತವಾಗಿವೆ.
ಜಿಲ್ಲಾಧಿಕಾರಿ ದರ್ಶನವೂ ಇಲ್ಲ ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ನಡೆಯಲಿದೆ. ಸಾರ್ವಜನಿಕರು ಅಲ್ಲಿಯೇ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸರ್ಕಾರ ತಿಳಿಸಿತ್ತು. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸಹ ಆಗಾಗ್ಗೆ ಜನತಾ ದರ್ಶನ ನಡೆಸುತ್ತಿದ್ದರು. ಹೊಸ ತಾಲ್ಲೂಕುಗಳು ಎನಿಸಿರುವ ಚೇಳೂರು ಮಂಚೇನಹಳ್ಳಿಯಲ್ಲಿಯೂ ಜನತಾ ದರ್ಶನ ನಡೆಸಿದ್ದರು. ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡುತ್ತಿದ್ದರು. ಡಿ.ಸಿ ಅವರ ಜನತಾ ದರ್ಶನ ಜನಪ್ರಿಯವಾಗಿತ್ತು. ಆದರೆ ಕೆಲವು ತಿಂಗಳುಗಳಿಂದ ಜಿಲ್ಲಾಧಿಕಾರಿ ಅವರ ಜನತಾ ದರ್ಶನವೂ ನಿಂತಿದೆ.
ಶಾಸಕರದ್ದೂ ಇದೇ ಕಥೆ! ಬಾಗೇಪಲ್ಲಿಯಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಆಗಾಗ್ಗೆ ತಾಲ್ಲೂಕು ಕಚೇರಿಯಲ್ಲಿ ಜನತಾ ದರ್ಶನ ನಡೆಸುತ್ತಿದ್ದಾರೆ. ಇವರನ್ನು ಹೊರತುಪಡಿಸಿದರೆ ಉಳಿದ ವಿಧಾನಸಭಾ ಕ್ಷೇತ್ರದಲ್ಲಿ ನಿಯಮಿತವಾಗಿ ಶಾಸಕರ ಜನತಾ ದರ್ಶನ ಕಾರ್ಯಕ್ರಮಗಳು ನಡೆಯುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.