ADVERTISEMENT

ಅನ್ಯಾಯ: ಹೆಣ್ಣು ಹೋರಾಟ ನಡೆಸಲಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಬಿ.ಟಿ.ಲಲಿತಾ ನಾಯಕ್‌ ಕರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:02 IST
Last Updated 1 ಮಾರ್ಚ್ 2021, 4:02 IST
ಸಮ್ಮೇಳನದಲ್ಲಿ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಅವರನ್ನು ಸನ್ಮಾನಿಸಲಾಯಿತು
ಸಮ್ಮೇಳನದಲ್ಲಿ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಅವರನ್ನು ಸನ್ಮಾನಿಸಲಾಯಿತು   

ಸದ್ಗರು ಕಾಲಜ್ಞಾನಿ ಕೈವಾರ ತಾತಯ್ಯ ವೇದಿಕೆ (ಚಿಕ್ಕಬಳ್ಳಾಪುರ): ‘ಬಸವಣ್ಣ, ಶರಣರ ಕಾಲದಲ್ಲಿ ಹೆಣ್ಣಿಗೆ ಹೆಚ್ಚು ಗೌರವ ಮತ್ತು ಮಹತ್ವ ನೀಡಲಾಗಿತ್ತು. ಆದರೆ, ಇಂದು ಅನ್ಯಾಯದ ವಿರುದ್ಧ ಹೆಣ್ಣು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್‌ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಭಾನುವಾರ ಆಯೋಜಿಸಿದ್ದ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ದೈನಂದಿನ ಆಚರಣೆಗಳು ಸಂಕೇತಿಕವಾಗಿವೆ. ನಿಜಕ್ಕೂ ಸಂವಿಧಾನವೇ ನಮ್ಮ ದೇವರು. ಮೌಢ್ಯ ಬಿತ್ತಿ ಜನರ ನಡುವೆ ಅಸಮಾನತೆ ತುಂಬುವ ಪುರೋಹಿತಶಾಹಿಗಳಿಂದ ದೂರ ಇಡುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಿದೆ’ ಎಂದು ಹೇಳಿದರು.

ADVERTISEMENT

‘ಮಕ್ಕಳು ಪೋಷಕರಿಗಿಂತಲೂ ಶಿಕ್ಷಕರ ಮಾತು ಹೆಚ್ಚು ಕೇಳುತ್ತಾರೆ. ಜಾತೀಯತೆ, ಕೋಮುವಾದ ದೂರ ಮಾಡುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಪ್ರೀತಿ, ವಿಶ್ವಾಸ, ನಂಬಿಕೆಯ ಬೀಜವನ್ನು ಬಿತ್ತಬೇಕು. ಆ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ಸ್ತ್ರಿಯರನ್ನು ದೇವತೆ ಎಂದು ಭಾವಿಸಿ ಪೂಜಿಸಿದರೆ ಮಾತ್ರ ಪ್ರಯೋಜನವಿಲ್ಲ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಕ್ಷೇತದಲ್ಲೂ ಸಮಾನತೆಯನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಎಂ.ವಿ.ಉಷಾದೇವಿ ಮಾತನಾಡಿ, ‘ಹೆಣ್ಣು ಸಂಸಾರದ ಕಣ್ಣು. ಹೀಗಾಗಿ ಸಮಾಜದಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೆ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು. ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಅವರನ್ನು ಸಹ ಸಮಾನ ರೀತಿಯಲ್ಲಿ ಕಾಣಬೇಕು’ ಎಂದು ವಾದಿಸಿದರು.

‘ಚರಿತ್ರೆ ಕಟ್ಟುವುದಕ್ಕೆ ಸಾಹಿತ್ಯ ಪ್ರಮುಖ ಪಾತ್ರವಹಿಸುತ್ತದೆ. ಮಹಿಳೆಯನ್ನು ಒಂದು ವಸ್ತುವಿನಂತೆ ಕಾಣುವುದುಂಟು. ಗ್ರಾಮೀಣಮಟ್ಟದಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದವರೆಗೂ ಮಹಿಳೆಗೆ ದ್ವಿತೀಯ ದರ್ಜೆ ಸ್ಥಾನವನ್ನು ನೀಡಲಾಗಿದೆ. ಪ್ರಾಚೀನ ಕಾಲದಿಂದಲ್ಲೂ ಮಹಿಳೆಯರ ಕೊಡುಗೆ ಅಪಾರವಾಗಿದೆ’ ಎಂದು ವಿವರಿಸಿದರು.

‘ಶಿಕ್ಷಣ ಪಡೆದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ದೇಶದಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಶಿಕ್ಷಣದ ಮೂಲಕ ಪರಿವರ್ತನೆ ತರಬೇಕಿದೆ. ಪುರುಷರು ಮಹಿಳೆಯರಿಗೆ ಸಮಾನತೆ, ಸಬಲೀಕರಣ ಹಾಗೂ ಸಮಾನ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಬೇಕು’ ಎಂದರು.

‘ಕನ್ನಡದ ಅಸ್ಮಿತೆ, ಇಲ್ಲಿನ ಪರಂಪರೆ ಹಾಗೂ ವೈವಿಧ್ಯತೆಯ ವಿಶೇಷತೆಯನ್ನು ಕಾಪಾಡುತ್ತಾ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ. ನಾಡಿನ ಕೀರ್ತಿ ಪತಾಕೆಯನ್ನು ಉಳಿಸಿ‌ ಬೆಳೆಸಬೇಕಾದರೆ ಇಲ್ಲಿನ ಮಣ್ಣಿನಲ್ಲಿ‌ ಹುಟ್ಟಿ ಬೆಳೆದು ಪರಂಪರೆಯನ್ನು ಅರಿಯುವ ಕಾರ್ಯವಾಗಬೇಕು. ಜಾನಪದ ಕಲೆ, ನಾಡಿನ ಸಂಸ್ಕೃತಿ, ಅಕ್ಷರ ಪರಂಪರೆ ಹಾಗೂ ವೈವಿಧ್ಯಮಯ ಜಗತ್ತನ್ನು ಒಳಗೊಂಡಿರುವ ರಾಜ್ಯವು ಇವೆಲ್ಲವುಗಳ‌ ಸಂಗಮದಿಂದ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಮಾತನಾಡಿ, ‘ನಾಡಿನ ಗಡಿ ಭಾಗವಾದ ಜಿಲ್ಲೆಯಲ್ಲಿ ಕನ್ನಡವನ್ನು‌ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ‌ ಕಾರ್ಯಕ್ಕೆ ಹಗಲಿರುಳು ಶ್ರಮಿಸಿರುವ ಎಲ್ಲ ಕನ್ನಡಾಸಕ್ತರಿಗೆ ಋಣಿಯಾಗಿರುತ್ತೇವೆ. ತಿಂಗಳಿನ ಎಲ್ಲ ವಾರಗಳು ಹಾಗೂ ವಾರದ ಏಳು ದಿನಗಳಲ್ಲಿಯೂ ಕನ್ನಡ ಕಾರ್ಯಕ್ರಮಗಳು ಸತತವಾಗಿ ನಡೆಯುವ ಮೂಲಕ ಕನ್ನಡವು ನಿಂತ ನೀರಾಗದೆ ಹರಿಯುವಂತೆ ಮಾಡುವ ಪ್ರಯತ್ನವನ್ನು ಮಾಡಿದ್ದೇವೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನಾಡು ನುಡಿ ಮತ್ತು ನೆಲಕ್ಕೆ ಮತ್ತಷ್ಟು ಶಕ್ತಿ‌ತುಂಬುವ ಕಾರ್ಯವನ್ನು ಎಲ್ಲರೂ ಒಮ್ಮತದಿಂದ ಮಾಡಬೇಕಾಗಿದೆ’ ಎಂದು ಹೇಳಿದರು.

ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಡಾ.ರಂಗಾರೆಡ್ಡಿ, ಎನ್‌.ಸಂಜೀವಪ್ಪ, ಆರ್.ವಿ.ವಿನೋದ್‌ ಕುಮಾರ್, ಗುಡಿಬಂಡೆ ಎನ್.ನಾರಾಯಣಸ್ವಾಮಿ, ಬಾಬಾಜಾನ್, ಎಂ.ನಂಜುಂಡಪ್ಪ, ಅನುರಾಧಾ ಆನಂದ್, ಉಷಾ ಶ್ರೀನಿವಾಸ್, ಎ.ಜಿ.ಸುಧಾಕರ್, ರವೀಂದ್ರನಾಥ್, ಟಿ.ಎಂ.ಪ್ರಸಾದ್, ಎ.ಎಂ.ತ್ಯಾಗರಾಜ್, ಜಿ.ಆರ್.ಜನಾರ್ಧನಮೂರ್ತಿ, ಜಿಲಾನ್ ಬಾಷ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.