ಶಿಡ್ಲಘಟ್ಟ: ಶಿಡ್ಲಘಟ್ಟ ರೇಷ್ಮೆ ಮತ್ತು ಹಾಲು ಉತ್ಪಾದನೆಗೆ ಪ್ರಸಿದ್ಧಿ ಪಡೆದಿವೆ. ಈ ಎರಡೂ ಕ್ಷೇತ್ರಕ್ಕೆ ಉತ್ತೇಜನ ಸಿಗುವ ಯೋಜನೆ ಈ ಬಾರಿಯ ಬಜೆಟ್‌ನಲ್ಲದರೂ ರೂಪುಗೊಳ್ಳಬಹುದೆಂದು ತಾಲ್ಲೂಕಿನ ಜನತೆ ದೃಷ್ಟಿ ರಾಜ್ಯ ಬಜೆಟ್‌ನತ್ತ ನೆಟ್ಟಿದೆ. ಇದಕ್ಕಿಂತ ಬಹುಮುಖ್ಯವಾಗಿ ತಾಲ್ಲೂಕಿನ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ತುರ್ತಾಗಿ ಬಲ ಪಡಿಸಬೇಕಿದೆ.
ತಾಲ್ಲೂಕಿನಲ್ಲಿ ಸುಮಾರು 200–220 ಹಳ್ಳಿಗಳಿವೆ. ತಾಲ್ಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿದೆ. ಕೆಲವು ಗ್ರಾಮಗಳ ರಸ್ತೆಗಳು ರಸ್ತೆ ಎನ್ನಿಸಿಕೊಳ್ಳುವ ಯೋಗ್ಯತೆ ಕಳೆದುಕೊಂಡಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸಂಚಾರ ಸಂಕಷ್ಟವಾಗಿದೆ. ಹಲವು ವರ್ಷಗಳಿಂದ ಸುಸಜ್ಜಿತ ರಸ್ತೆ ಗ್ರಾಮೀಣರಿಗೆ ಕನಸಾಗಿ ಪರಿಣಮಿಸಿದೆ.
ತಾಲ್ಲೂಕಿನ 250 ಕಿ.ಮೀ ರಸ್ತೆ ಹದಗೆಟ್ಟಿದ್ದು, 100 ಕಿ.ಮೀ ರಸ್ತೆ ಸಂಚರಿಸುವ ಯೋಗ್ಯತೆ ಕಳೆದುಕೊಂಡಿದೆ. 150 ಕಿ.ಮೀ ರಸ್ತೆಯನ್ನು ಅಗತ್ಯವಾಗಿ ಹೊಸದಾಗಿ ನಿರ್ಮಾಣವಾಗಬೇಕಿದೆ. ಅದರಲ್ಲಿ 100 ಕಿ.ಮೀ ರಸ್ತೆ ಅತಿ ತುರ್ತಾಗಿ ನಿರ್ಮಾಣವಾಗಬೇಕಿದೆ.
ರೇಷ್ಮೆಗೆ ಸಂಬಂಧಿಸಿದಂತೆ ಹೈಟೆಕ್ ಮಾರುಕಟ್ಟೆಗೆ ಅನುದಾನದ ಬಿಡುಗಡೆ, ಹೈನುಗಾರಿಕೆಗೆ ನೀರಾವರಿ ಯೋಜನೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆ, ತಾಯಿ ಮಗು ಆಸ್ಪತ್ರೆ, ಕ್ರೀಡೆಗೆ ಸಂಬಂಧಿಸಿದಂತೆ ನೆಹರೂ ಕ್ರೀಡಾಂಗಣದ ಅಭಿವೃದ್ಧಿ, ತಾಲ್ಲೂಕಿನ 250 ಕಿ.ಮೀ ಹಳ್ಳಿ ರಸ್ತೆಗಳ ಅಭಿವೃದ್ಧಿ ತುರ್ತಾಗಿ ಆಗಬೇಕಿದೆ. ಇವುಗಳೊಂದಿಗೆ ಗ್ರಂಥಾಲಯ, ಅಂಬೇಡ್ಕರ್ ಭವನ, ಕೆರೆ ಸಂರಕ್ಷಣೆ ಸೇರಿದಂತೆ ಸಾಕಷ್ಟು ನಿರೀಕ್ಷೆಗಳು ಜನರಲ್ಲಿ ಇವೆ.
ಕಳೆದ ಮೂರು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ವಿವಿಧ ಸಚಿವರಿಗೆ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ. ಆ ಭರವಸೆಗಳು ಈ ಬಜೆಟ್‌ನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುವುದೇ ಎಂಬ ಕಾತರ ಎಲ್ಲರ ಕಣ್ಣುಗಳಲ್ಲಿದೆ.
ತಾಲ್ಲೂಕಿನ ರಾಮಸಮುದ್ರ ಕೆರೆಯಿಂದ ನಗರ ಪ್ರದೇಶದ ಪ್ರತಿ ಮನೆಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನವಾಗಬೇಕೆಂಬುದು ನಗರ ವ್ಯಾಪ್ತಿಯ ಜನರ ಬಹು ನಿರೀಕ್ಷಿತ ಕನಸಾಗಿದೆ. ಈ ಬಜೆಟ್ ಈ ಕನಸನ್ನು ಸಾಕಾರಗೊಳಿಸುವುದೇ ಎಂದು ಜನರು ಕಾತರರಾಗಿರುವರು.
ಈ ಎಲ್ಲ ಬೇಡಿಕೆಗಳು ಒಂದೆರಡು ವರ್ಷದಲ್ಲ. 30–40 ವರ್ಷಗಳಿಂದ ಸ್ಥಳೀಯರು ಈ ಬೇಡಿಕೆ ಈಡೇರಿಕೆಗಾಗಿ ಮನವಿ ಮಾಡುತ್ತಾಲೇ ಬರುತ್ತಿದ್ದಾರೆ. ಯಾವ ಬಜೆಟ್‌ನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಈಡೇರಿವುದೇ ಎಂದು ಕಾದು ನೋಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.