
ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಹೊಸಹುಡ್ಯ ಹಾಗೂ ಕೊಂಡರೆಡ್ಡಿಪಲ್ಲಿ ಗ್ರಾಮಗಳ ಬಳಿಯ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದ ರೈತರ ಜಮೀನುಗಳ ಪಹಣಿಯಲ್ಲಿ ಏಕಾಏಕಿ ‘ಕೆಐಎಡಿಬಿ’ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಹೆಸರು ನಮೂದಾಗಿದೆ.
ಡಿ.18ಕ್ಕೂ ಮೊದಲು ಪಹಣಿಗಳಲ್ಲಿ ರೈತರ ಹೆಸರು ಇತ್ತು. ಈಗ ಎರಡೂ ಗ್ರಾಮಗಳ 43 ರೈತರ ಜಮೀನುಗಳ ಪಹಣಿಗಳಲ್ಲಿ ಹೊಸದಾಗಿ ಕೆಐಎಡಿಬಿ ಹೆಸರು ಸೇರಿಕೊಂಡಿದೆ ಎನ್ನುತ್ತಾರೆ ಸಂತ್ರಸ್ತ ರೈತರು.
ರೈತರಿಗೆ ಗೊತ್ತಿಲ್ಲದಂತೆ ಪಹಣಿಯಲ್ಲಿ ಕೆಐಎಡಿಬಿ ಹೆಸರು ಸೇರಿಸಲಾಗಿದೆ. ಕೂಡಲೇ ಕೆಐಎಡಿಬಿ ಹೆಸರು ತೆಗೆದು ಹಾಕಿ ರೈತರ ಹೆಸರು ಸೇರಿಸಬೇಕು ಎಂದು ತಹಶೀಲ್ದಾರ್ ಮನೀಷಾ ಎನ್. ಪತ್ರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
‘ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನಕ್ಕೆ ಬಿಡುವುದಿಲ್ಲ. ಪಹಣಿಯಲ್ಲಿ ನಮ್ಮ ಹೆಸರಿನ ಬದಲು ಕೆಐಎಡಿಬಿ ಹೆಸರು ಸೇರಿರುವುದು ಈಚೆಗೆ ಗಮನಕ್ಕೆ ಬಂದಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಪಹಣಿಯಲ್ಲಿ ಮೊದಲಿನಂತೆ ನಮ್ಮ ಹೆಸರು ಬರಬೇಕು. ಇಲ್ಲವಾದರೆ ತಾಲ್ಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ’ ಎಂದು ರೈತರಾದ ಹೇಮಚಂದ್ರ ಹಾಗೂ ಓಬನ್ನಗಾರಿಪಲ್ಲಿಯ ಭಾಗ್ಯಮ್ಮ ಹೇಳಿದರು.
‘ಅಧಿಕಾರಿಗಳಿಗೆ ತಿಳಿಯದೇ ಪಹಣಿಯಲ್ಲಿ ಕೆಐಎಡಿಬಿ ಎಂದು ಹೆಸರು ಸೇರಿಸಲು ಸಾಧ್ಯವೇ ಇಲ್ಲ. ರೈತರು ಪ್ರತಿಭಟನೆ ನಡೆಸುವ ಮುನ್ನವೇ ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದು ರೈತ ಮುಖಂಡ ಪಿ.ಮಂಜುನಾಥರೆಡ್ಡಿ ಆಗ್ರಹಿಸಿದರು.
‘ರಾಷ್ಟ್ರೀಯ ಹೆದ್ದಾರಿ ರಸ್ತೆ 44ರಲ್ಲಿ 1,200 ಎಕರೆ ಕರಾಬು, ಗೋಮಾಳ, ಸರ್ಕಾರಿ ಜಾಗ ಇದೆ. ಸರ್ಕಾರಿ ಜಾಗದಲ್ಲಿ ಕೈಗಾರಿಕೆ ಆರಂಭಿಸಲು ನಮ್ಮ ತಕರಾರು ಇಲ್ಲ. ಆದರೆ ರೈತರ ಜಮೀನು ಸ್ವಾಧೀನ ಎಷ್ಟರ ಮಟ್ಟಿಗೆ ಸರಿ’ ಎಂದು ಕಾಶಾಪುರದ ರೈತ ಅಶ್ವತ್ಥಪ್ಪ ಪ್ರಶ್ನಿಸಿದರು.
17 ವರ್ಷ ಹಿಂದಿನ ಅಧಿಸೂಚನೆಗೆ ಮರುಜೀವ:
ಆಂಧ್ರಪ್ರದೇಶದ ಗಡಿಯಲ್ಲಿರುವ ತಾಲ್ಲೂಕಿನ ಹೊಸಹುಡ್ಯ, ಕೊಂಡರೆಡ್ಡಿಪಲ್ಲಿ ಗ್ರಾಮದ ರೈತರ ನೂರಾರು ಎಕರೆ ಜಮೀನುಗಳು ಇವೆ. ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ ಈ ಎರಡೂ ಗ್ರಾಮಗಳ ರೈತರ ಜಮೀನು ಸೇರಿದಂತೆ ಸರ್ಕಾರಿ ಜಮೀನು, ಗೋಮಾಳ ಜಾಗ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.
ಮೊದಲ ಹಂತದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ 192 ಎಕರೆ ಜಮೀನು ಸ್ವಾಧೀನಕ್ಕೆ 2007ರಲ್ಲಿ ಕೆಐಎಡಿಬಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಎಕರೆಗೆ ₹15 ಲಕ್ಷ ಪರಿಹಾರ ನಿಗದಿಪಡಿಸಿತ್ತು. ಆದರೆ, ರೈತರ ವಿರೋಧದ ನಂತರ ಭೂಸ್ವಾಧೀನ ಪ್ರಕ್ರಿಯೆ ಸ್ಧಗಿತಗೊಂಡಿದ್ದವು.
ಈಗ ಮತ್ತೆ ಕೆಐಎಡಿಬಿ ಭೂಸ್ವಾಧೀನಕ್ಕೆ ಮುಂದಾಗಿದೆ. ರೈತರಿಗೆ ನೋಟಿಸ್ ಜಾರಿಗೊಳಿಸಿದೆ. ತಮ್ಮ ಬೇಡಿಕೆಯಂತೆ ಬೆಲೆ ನಿಗದಿಗೊಳಿಸಿದರೆ ಮಾತ್ರ ಜಮೀನು ನೀಡುತ್ತೇವೆ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈ ನಡುವೆ ಏಕಾಏಕಿ ರೈತರ ಜಮೀನು ಪಹಣಿಗಳಲ್ಲಿ ಕೆಐಎಡಿಬಿ ಹೆಸರು ಪ್ರತ್ಯಕ್ಷವಾಗಿದೆ.
ಪಹಣಿಯಲ್ಲಿ ಮತ್ತೆ ರೈತರ ಹೆಸರು: ತಹಶೀಲ್ದಾರ್ ಅಭಯ
ರೈತರ ಜಮೀನು ಪಹಣಿಗಳಲ್ಲಿ ಕೆಐಎಡಿಬಿ ಹೆಸರು ನಮೂದು ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ರೈತರ ಹೆಸರನ್ನು ಪಹಣಿಯಲ್ಲಿ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ಮನೀಷ್ ಎನ್.ಪತ್ರಿ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.