ಬಾಗೇಪಲ್ಲಿ: ಗಣೇಶ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭಾಗಿದೆ. ಇದಕ್ಕೆ ಪೂರಕವೆಂಬಂತೆ ಪಟ್ಟಣದ ಹಳೆಯ ಶಾದಿ ಮಹಲ್ ಮುಂಭಾಗದಲ್ಲಿ ಕಲಾವಿದರು ಮೂರು ತಿಂಗಳಿನಿಂದ ತಯಾರಿಸಿರುವ ವಿಭಿನ್ನ ಶೈಲಿಯ ಗಣಪನ ಮೂರ್ತಿಗೆ ಭಾರಿ ಬೇಡಿಕೆ ಬಂದಿದೆ.
ಪಟ್ಟಣ, ಗ್ರಾಮಗಳು ಹಾಗೂ ನೆರೆಯ ಆಂಧ್ರಪ್ರದೇಶದಿಂದ ಬರುತ್ತಿರುವ ಗ್ರಾಹಕರು, ಈಶ್ವರ, ಭೂದೇವಿ, ಹಾವಿನ, ಆನೆ, ತಾವರೆ ಹೂವು, ಗರುಡಾದ್ರಿ, ಆಂಜನೇಯ, ಗಂಡಬೇರುಂಡ, ಸೊಂಡಿಲು, ಋಷಿ ಮುನಿಗಳು ಸೇರಿದಂತೆ ವಿವಿಧ ಭಂಗಿಯಲ್ಲಿರುವ ಆಕರ್ಷಕ ಗಣಪನ ಮೂರ್ತಿಗಳನ್ನು ಖರೀದಿ ಮಾಡುತ್ತಿದ್ದಾರೆ. ಪಿಒಪಿ ಗಣೇಶ ಮೂರ್ತಿ ಬಳಕೆಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಜೇಡಿಮಣ್ಣಿನಲ್ಲಿ ಮೂಡಿಬಂದಿರುವ ವಿವಿಧ ಬಗೆಯ ಗಣಪನ ಮೂರ್ತಿಗಳಿಗೆ ಜನರು ಮುಗಿಬಿದಿದ್ದಾರೆ.
ಗೌರಿ-ಗಣೇಶ ಹಬ್ಬದ 3 ತಿಂಗಳ ಮುಂಚೆ ಕೋಲ್ಕತ್ತದಿಂದ ಬಂದ ಸುದೀಪ್, ರಾಜು, ರೋಜನ್, ರಾಮಪ್ರಸಾದ್, ಸೋನಾ, ರೊಜೋತ್, ಮಿಥುನ್, ಔರಬ್ ಸೇರಿದಂತೆ 10 ಕಲಾವಿದರು, ಹಳೆಯ ಶಾದಿ ಮಹಲ್ ಮುಂದೆ ದೊಡ್ಡ ಚಪ್ಪರ, ಟಾರ್ಪಲ್‌ಗಳನ್ನು ಹಾಕಿಕೊಂಡಿದ್ದಾರೆ. ಒಳಗೆ ನಾಲ್ಕು ಕಡೆಯ ಸಾಲುಗಳನ್ನು ಗಣಪತಿ ಮೂರ್ತಿ ತಯಾರಿಸಲು ಜಾಗ ಮಾಡಿಕೊಂಡಿದ್ದು, ಬೆಳಗಿನ ತಿಂಡಿ, ಊಟ, ಕಾಫಿ ಎಲ್ಲವನ್ನೂ ಈ ಸಣ್ಣ ಜಾಗದಲ್ಲೇ ಮಾಡುತ್ತಾರೆ.
ವಿಘ್ನ ನಿವಾರಕನ ತಯಾರಿಸಲು 3 ಟ್ರ್ಯಾಕ್ಟರ್‌ಗಳಷ್ಟು ಜೇಡಿಮಣ್ಣನ್ನು ₹30 ಸಾವಿರಕ್ಕೆ ಖರೀದಿಸಿದ್ದಾರೆ. ನೆರೆಯ ಹೊಲದಿಂದ ಪೈಪ್ ಮೂಲಕ ನೀರಿನ ಸಂಪರ್ಕ ಪಡೆದಿದ್ದಾರೆ. ಯಾವುದೇ ರಾಸಾಯನಿಕ ವಸ್ತು ಬಳಸದೆ, ಜೇಡಿಮಣ್ಣಿನಿಂದ ವಿಭಿನ್ನ ರೀತಿಯ 2 ಅಡಿಗಳಿಂದ 15 ಅಡಿಗಳಷ್ಟು ಎತ್ತರದ ಗಣೇಶನ ಮೂರ್ತಿಗಳನ್ನು ತಯಾರಿಸಿದ್ದಾರೆ. ಈ ಗಣಪನ ಮೂರ್ತಿಗೆ ವಸ್ತ್ರ, ಈಶ್ವರನ ತೊಡೆ ಮೇಲೆ ಗಣೇಶ ಕುಳಿತಂತೆ ಸೇರಿದ ಹಲವು ಬಗೆಯ ಮೂರ್ತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಗಣಪತಿ ಪ್ರತಿಷ್ಠಾಪನೆ ಮಾಡುವ ಯುವಕರು ಮುಂಗಡ ಹಣ ನೀಡಿ, ಗಣಪತಿ ಮೂರ್ತಿಗಳನ್ನು ಕಾಯ್ದಿರಿಸಿದ್ದಾರೆ. ಪಟ್ಟಣದ ವಾರ್ಡ್‍ಗಳು, ಗ್ರಾಮಗಳು ಹಾಗೂ ನೆರೆಯ ಆಂಧ್ರಪ್ರದೇಶದ ಕೊಡೋರು, ಚೆಕ್‍ಪೋಸ್ಟ್, ಗೋರಂಟ್ಲ, ಚಿಲಮತ್ತೂರು, ಕೊಡಿಕೊಂಡ ಸೇರಿದಂತೆ ವಿವಿಧ ಗ್ರಾಮಗಳ ಯುವಕರು ಬಂದು ಗಣೇಶ ಮೂರ್ತಿ ಖರೀದಿಸುತ್ತಿದ್ದಾರೆ.
ಪಟ್ಟಣದ ಡಿವಿಜಿ ಮುಖ್ಯರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ವ್ಯಾಪಾರಿಗಳು ಬೇರೆ ಕಡೆಗಳಿಂದ ಗಣೇಶ ಮೂರ್ತಿಗಳನ್ನು ಖರೀದಿಸಿ ತಂದು ಮಾರಾಟ ಮಾಡುತ್ತಾರೆ. ಆದರೆ, ಕೋಲ್ಕತ್ತದ ಕಲಾವಿದರು ಜೇಡಿಮಣ್ಣಿನಿಂದ ತಾವೇ ವಿಭಿನ್ನ ಶೈಲಿಯ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಎಂದು ಜಿಲಕರಪಲ್ಲಿ ಗ್ರಾಮದ ಛಾಯಾಗ್ರಾಹಕ ಮೂರ್ತಿ ತಿಳಿಸಿದರು.
ಮೂರ್ತಿ ಮಾರಾಟವೇ ಜೀವನಕ್ಕೆ ಆಸರೆ
ಪ್ರತಿ ವರ್ಷವು ಗಣಪತಿ ಹಬ್ಬದ ಮೂರು ತಿಂಗಳಿನ ಮುಂಚೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಿಂದ ಪಟ್ಟಣಕ್ಕೆ ಕುಟುಂಬ ಸದಸ್ಯರ ಸಮೇತವಾಗಿ ಬರುತ್ತೇವೆ. ಈ ಭಾಗದಲ್ಲೇ ಜೇಡಿಮಣ್ಣು ಖರೀದಿಸಿ ನಮ್ಮ 10 ಮಂದಿಯ ಕಲಾವಿದರ ತಂಡದೊಂದಿಗೆ ಜೊತೆಗೂಡಿ ವಿವಿಧ ಬಗೆಯ ಗಣಪತಿ ಮೂರ್ತಿಗಳನ್ನು ತಯಾರಿಸುತ್ತೇವೆ ಎಂದು ಮೂರ್ತಿಗಳ ವ್ಯಾಪಾರಿ ಸುದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ವರ್ಷದ ಉಳಿದ ತಿಂಗಳು ಕೊಲ್ಕತ್ತ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಳಿಮಾತೆ ಕೃಷ್ಣ ಸೇರಿದಂತೆ ವಿವಿಧ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವುದೇ ನಮ್ಮ ಕಾಯಕ. ನಮ್ಮ ತಂದೆ ರಾಮಪ್ರಸಾದ್ ಅವರಿಂದ ಮೂರ್ತಿ ತಯಾರಿಸುವುದನ್ನು ಕಲಿತಿದ್ದೇನೆ. ಮೂರ್ತಿ ಮಾರಾಟವೇ ನಮ್ಮ ಬದುಕಿಗೆ ಆಸರೆಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.