ADVERTISEMENT

ಎಲ್ಲರೂ ಸಂವಿಧಾನದ ಆಶಯ ಗೌರವಿಸಿ: ಕೆ.ಆರ್‌. ರಮೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 5:17 IST
Last Updated 15 ಏಪ್ರಿಲ್ 2022, 5:17 IST
ಗೌರಿಬಿದನೂರು ಹೊರವಲಯದ ಸಮಾನತಾ ಸೌಧದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‌ ರಾಂ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು
ಗೌರಿಬಿದನೂರು ಹೊರವಲಯದ ಸಮಾನತಾ ಸೌಧದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‌ ರಾಂ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು   

ಗೌರಿಬಿದನೂರು: ನಗರದಲ್ಲಿ ಗುರುವಾರ ತಾಲ್ಲೂಕು ‌ಆಡಳಿತ‌ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಹಾಗೂ ಡಾ.ಬಾಬು ಜಗಜೀವನ ರಾಂ ಅವರ 115ನೇ ಜಯಂತ್ಯುತ್ಸವ ನಡೆಯಿತು.

ಶಾಸಕ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಭವಿಷ್ಯದ ಸಮಾಜಕ್ಕಾಗಿ ಅಂಬೇಡ್ಕರ್ ಸಂವಿಧಾನ ರಚಿಸಿ ದೇಶದ ಜನತೆಗೆ ನೀಡಿದ್ದಾರೆ. ಅದನ್ನು ಎಲ್ಲರೂ ಪ್ರಾಮಾಣಿಕತೆ ಮತ್ತು‌ ಬದ್ಧತೆಯಿಂದ ಗೌರವಿಸಿ ಉಳಿಸುವ ಪ್ರಯತ್ನ ಮಾಡಬೇಕಾಗಿದೆ‌ ಎಂದು
ಹೇಳಿದರು.

ಅಂಬೇಡ್ಕರ್ ಕೂಡ ಶ್ರೀರಾಮನ ಭಕ್ತರಾಗಿದ್ದರು. ದೇಶದ ಬಡವರು, ಕಾರ್ಮಿಕರು, ಶೋಷಿತರು,‌ ನೊಂದ ಜೀವಗಳಲ್ಲಿ ಶ್ರೀರಾಮನನ್ನು ಕಾಣುವ ಪ್ರಯತ್ನ ಮಾಡಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಚಿಂತಿಸಿ ಮಾನವೀಯತೆ ತೋರಿದರು. ಜೀವಿತದ ಕೊನೆಯ ದಿನಗಳಲ್ಲಿ ತಾನು ಹಿಂದೂವಾಗಿ ಮಾತ್ರ ಸಾಯಲು ಒಪ್ಪುವುದಿಲ್ಲ ಎಂದು ಹೇಳಿದ ಮಹಾನ್ ಪುರುಷ ಎಂದು
ಹೇಳಿದರು.

ADVERTISEMENT

ನರೇಂದ್ರ‌ ಮೋದಿ ಪ್ರಧಾನಿಯಾಗಲು ಸಂವಿಧಾನದ ಹಕ್ಕುಗಳು‌ ಮತ್ತು ಆಶಯಗಳು ಕಾರಣವಾಗಿವೆ. ಆದರೆ ಅದೇ ಸಂವಿಧಾನದ ಆಶಯ ಬದಲಿಸಲು ಪ್ರಧಾನಿ ಮುಂದಾಗಿರುವುದು‌ ನ್ಯಾಯವೇ? ಈ ನಿಟ್ಟಿನಲ್ಲಿ ‌ಎಲ್ಲರೂ ಜಾಗೃತರಾಗಿ ಭವಿಷ್ಯದ ಉಳಿವು, ಜನರ ನೆಮ್ಮದಿಯ‌ ಬದುಕಿಗಾಗಿ ಸಂವಿಧಾನದ ‌ಆಶಯಗಳಿಗೆ ಪೂರಕವಾಗಿ ಕಾರ್ಯ ‌ನಿರ್ವಹಿಸಲು ಬದ್ಧರಾಗಬೇಕಾಗಿದೆ ಎಂದು ಹೇಳಿದರು.

ಶಾಸಕ ಎನ್‌.ಎಚ್. ಶಿವಶಂಕರರೆಡ್ಡಿ ‌ಮಾತನಾಡಿ, ದೇಶದ ಸುವ್ಯವಸ್ಥೆಗಾಗಿ ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯಗಳನ್ನು ಉಳಿಸುವ ಪ್ರಯತ್ನಕ್ಕೆ ನಾವು ಮುಂದಾಗಬೇಕಿದೆ. ಇಲ್ಲವಾದರೆ ದೇಶದಲ್ಲಿ ಅರಾಜಕತೆ ಆರಂಭವಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚಿನ ‌ದಿನಗಳಲ್ಲಿನ ಕೆಲವು ಬದಲಾವಣೆಗಳಿಂದ ದಲಿತರು, ಶೋಷಿತರು‌ ಹಾಗೂ ಎಲ್ಲಾ ವರ್ಗದ ಜನತೆ ಸಮಾನತೆಯಿಂದ ವಂಚಿತರಾಗುತ್ತಿರುವುದು ವಿಷಾದನೀಯ. ಕ್ಷೇತ್ರದ ‌ಜನತೆಗೆ ಸಂವಿಧಾನದ ಆಶಯಗಳು ಹಾಗೂ‌ ಅಂಬೇಡ್ಕರ್ ಬಗ್ಗೆ ಪರಿಚಯಿಸುವ ದೃಷ್ಟಿಯಿಂದ ಸಮಾನತಾ ಸೌಧದಲ್ಲಿ ‌ಚಿತ್ರಪಟ‌ ಗ್ಯಾಲರಿ ಹಾಗೂ ಗ್ರಂಥಾಲಯ ನಿರ್ಮಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕುಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಮುದಾಯದ ಮುಖಂಡರು ಮತ್ತು ನಾಗರಿಕರು ನೀಲಿ ಬಣ್ಣದ ಧ್ವಜಗಳನ್ನು ಹಿಡಿದು ಕಲಾ ತಂಡಗಳೊಂದಿಗೆ ನಗರದ ಶ್ರೀಶನಿ ಮಹಾತ್ಮ ದೇವಾಲಯದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮೂಲಕ ಸಾಗಿದರು. ಅಲ್ಲಿನ ಅಂಬೇಡ್ಕರ್ ಸ್ತೂಪಕ್ಕೆ ಮಾಲಾರ್ಪಣೆ ಮಾಡಿದರು.

ವೇದಿಕೆಯಲ್ಲಿ ದಲಿತ ಮುಖಂಡರು ಅಂಬೇಡ್ಕರ್ ‌ಹಾಗೂ ಸಂವಿಧಾನದ ಬಗ್ಗೆ ವಿವಿಧ ಕ್ರಾಂತಿಗೀತೆಗಳನ್ನು ಹಾಡಿದರು. ಚಿಂತಕರಾದ ಡಾ.ಅನಿಲ್ ಕುಮಾರ್ ಹಾಗೂ ಡಾ.ಎಚ್.ವಿ. ವಾಸು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿತಹಶೀಲ್ದಾರ್ ‌ಎಚ್. ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ತಾ.ಪಂ. ಇಒ ಆರ್. ಹರೀಶ್, ಪೌರಾಯುಕ್ತ ವಿ. ಸತ್ಯನಾರಾಯಣ, ಸಿಪಿಐ ಎಸ್.ಡಿ. ಶಶಿಧರ್, ಬಿಇಒ ಕೆ.ವಿ. ಶ್ರೀನಿವಾಸಮೂರ್ತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ. ಗಂಗಾಧರಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ. ವೇಣುಗೋಪಾಲರೆಡ್ಡಿ, ನಗರಸಭೆ ಅಧ್ಯಕ್ಷೆ ಎಸ್. ರೂಪಾ, ಮುಖಂಡರಾದ ವೇದಲವೇಣಿ ಎನ್. ವೇಣು, ಹನುಮಂತರೆಡ್ಡಿ, ‌ಕೆ.ಎನ್. ಕೇಶವರೆಡ್ಡಿ, ಎಚ್.ಎನ್. ಪ್ರಕಾಶರೆಡ್ಡಿ, ಬಿ.ಪಿ. ಅಶ್ವತ್ಥನಾರಾಯಣಗೌಡ, ಇಬ್ನಿ ಹಸನ್, ಜಿ. ಸೋಮಯ್ಯ, ಸಿ.ಜಿ. ಗಂಗಪ್ಪ, ನಾಗರಾಜಪ್ಪ, ನರಸಿಂಹಮೂರ್ತಿ, ಇಂದ್ರಕುಮಾರ್, ಬಿ.ಕೆ. ನರಸಿಂಹಮೂರ್ತಿ, ಎಚ್.ಎಲ್. ವೆಂಕಟೇಶ್, ನಂಜುಂಡಪ್ಪ, ಸನಂದಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.