ADVERTISEMENT

ಚಿಕ್ಕಬಳ್ಳಾಪುರ: ‘ಬಲಿಜಿಗ’ ದಾಳ ಉರುಳಿಸುವುದೇ ಕಾಂಗ್ರೆಸ್?

ಜೋರಾದ ಜಾತಿ ಲೆಕ್ಕಾಚಾರ; ಗರಿಗೆದರಿದ ಒಗ್ಗಟ್ಟು– ಒಡಕಿನ ಚರ್ಚೆ

ಡಿ.ಎಂ.ಕುರ್ಕೆ ಪ್ರಶಾಂತ
Published 2 ಏಪ್ರಿಲ್ 2023, 6:19 IST
Last Updated 2 ಏಪ್ರಿಲ್ 2023, 6:19 IST

ಚಿಕ್ಕಬಳ್ಳಾಪುರ: ಬಲಿಜಿಗ ಸಮುದಾಯದ ಮುಖಂಡ ಪ್ರದೀಪ್ ಈಶ್ವರ್ ಹೆಸರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಮುನ್ನಲೆಯಲ್ಲಿ ಇದೆ. ‌ಈ ಮೂಲಕ ಕಾಂಗ್ರೆಸ್ ಪಕ್ಷ ಜಿಲ್ಲೆಯ ರಾಜಕಾರಣದಲ್ಲಿ ಬಲಿಜ ಸಮುದಾಯದ ದಾಳ ಉರುಳಿಸಿದೆ ಎನ್ನುವ ಲೆಕ್ಕಾಚಾರಗಳು ಜೋರಾಗಿವೆ.

ರಾಜ್ಯದಲ್ಲಿ ಬಲಿಜ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆ ಚಿಕ್ಕಬಳ್ಳಾಪುರ. ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಮುದಾಯ ನಿರ್ಣಾಯಕವಾಗಿವೆ. ಬಲಿಜ ಸಮುದಾಯದ ಮನ ಗೆಲ್ಲಲು ಬಿಜೆಪಿ ಸರ್ಕಾರ ಕೈವಾರ
ತಾತಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿದೆ. ಕೈವಾರ ತಾತಯ್ಯ ಅಧ್ಯಯನ ಪೀಠ
ರಚನೆ, ಬಲಿಜ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಯ ಮೂಲಕ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ಕೈವಾರ ತಾತಯ್ಯ ಜಯಂತಿಯಲ್ಲಿ ‘ಬಲಿಜ ಸಮುದಾಯಕ್ಕೆ ಜಿಲ್ಲೆಯ
ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತೇವೆ’ ಎಂದು ಸಚಿವ ಡಾ.ಕೆ.ಸುಧಾಕರ್ ಬಹಿರಂಗವಾಗಿ ಘೋಷಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಸಹ ಹಾಕಿದ್ದಾರೆ. ಬಿಜೆಪಿ ಸಮುದಾಯದ
ಹಿತ ಕಾಪಾಡುತ್ತಿದೆ ಎನ್ನುವ ಮಾತನಾಡಿದ್ದಾರೆ. ಸಚಿವರ ಮಾತಿನ ಹಿನ್ನೆಲೆ ನೋಡುವುದಾದರೆ ಬಾಗೇಪಲ್ಲಿಯಲ್ಲಿ ಬಿಜೆಪಿಯಿಂದ ಬಲಿಜ ಸಮುದಾಯಕ್ಕೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ.

ADVERTISEMENT

ಚುನಾವಣೆಯ ಈ ಹೊತ್ತಿನಲ್ಲಿ ಕಾಂಗ್ರೆಸ್‌ ಸಹ ಬಲಿಜ ಸಮುದಾಯಕ್ಕೆ ಮನ್ನಣೆ ನೀಡಬೇಕಾದ ತುರ್ತು ಇದೆ. ಬಾಗೇಪಲ್ಲಿಯಲ್ಲಿ ಬಲಿಜ ಸಮುದಾಯದವರಾದ ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಸಂಪಂಗಿ ಅವರಿಗೆ ಟಿಕೆಟ್ ತಪ್ಪಿದೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಿದರೆ ಅದು ತಪ್ಪು ಸಂದೇಶ ಹೋಗುತ್ತದೆ, ಕಾಂಗ್ರೆಸ್‌ನ ‘ಸಾಮಾಜಿಕ ನ್ಯಾಯ’ ಪ್ರತಿಪಾದನೆಗೆ ವಿರುದ್ಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಲಿಜ ಸಮುದಾಯದ ವ್ಯಕ್ತಿಯನ್ನೇ ಅಭ್ಯರ್ಥಿ ಮಾಡಬೇಕು ಎನ್ನುವ ಲೆಕ್ಕಾಚಾರಗಳು ಕೈ ಪಾಳಯದಲ್ಲಿ ಜೋರಾಗಿವೆ.

ಮತ್ತೊಂದು ಕಡೆ 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೆ ಬಲಿಜ ಸಮುದಾಯದ
ಎಂ.ಆರ್.ಸೀತಾರಾಂ ದೃಷ್ಟಿನೆಟ್ಟಿದ್ದಾರೆ. ಚಿಕ್ಕಬಳ್ಳಾಪುರ
ಕ್ಷೇತ್ರದಲ್ಲಿ ಅವರಿಗೆ ಹತ್ತಿರವಿದ್ದ ಸಮುದಾಯದ ಮುಖಂಡ ನವೀನ್ ಕಿರಣ್ ಈಗ ಬಿಜೆಪಿಯಲ್ಲಿ ಇದ್ದಾರೆ. ಲೋಕಸಭಾ ಚುನಾವಣೆಗೆ ಈಗಲೇ ಭೂಮಿಕೆ ಸಿದ್ಧಗೊಳಿಸಿಕೊಳ್ಳಬೇಕು. ಅದಕ್ಕೆ ಸಮುದಾಯಕ್ಕೆ ಟಿಕೆಟ್ ಕೊಡಿಸಬೇಕು ಎನ್ನುವ ಲೆಕ್ಕಾಚಾರಗಳು ಸೀತಾರಾಂ ಅವರಿಗೆ ಇದ್ದಂತಿದೆ.

ಮೂಲಗಳ ಪ್ರಕಾರ ಬಲಿಜ ಸಮುದಾಯದ ಪ್ರದೀಪ್ ಈಶ್ವರ್‌ಗೆ ಟಿಕೆಟ್ ದೊರೆತರೆ ಅವರ ಪರವಾಗಿ ಈ ಕುಟುಂಬ ಹೂಡಿಕೆ ಮಾಡುತ್ತದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ.

ರಾಜ್ಯದಲ್ಲಿ ಬಲಿಜ ಸಮುದಾಯದ ಒಬ್ಬ ಶಾಸಕರೂ ಇಲ್ಲ. ‌ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಸಮುದಾಯಕ್ಕೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಗೆಲ್ಲುವ ಶಕ್ತಿ ಇದ್ದರೂ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1962ರಲ್ಲಿ ಮತ್ತು 1972ರಲ್ಲಿ ಸಮುದಾಯದ ಸಿ.ವಿ.ವೆಂಕಟರಾಯಪ್ಪ ಅವರು ಶಾಸಕರಾಗಿ ಆಯ್ಕೆ ಆಗಿದ್ದರು. ಆ ನಂತರ ಚಿಕ್ಕಬಳ್ಳಾಪುರ ಮೀಸಲು ಕ್ಷೇತ್ರವಾಯಿತು. 2008ರ ಚುನಾವಣೆಯ ನಂತರ ಸಾಮಾನ್ಯ ಕ್ಷೇತ್ರವಾಯಿತು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷದಿಂದ ಬಲಿಜ ಸಮುದಾಯದ ಅಭ್ಯರ್ಥಿ ಚಿಕ್ಕಬಳ್ಳಾಪುರದಲ್ಲಿ ಕಣಕ್ಕೆ ಇಳಿದಿಲ್ಲ.

ಅಭಿವೃದ್ಧಿಯ ವಿಷಯದ
ಜತೆಯಲ್ಲಿಯೇ ಜಾತಿ ಲೆಕ್ಕಾಚಾರಗಳು ಹಳ್ಳಿ ಹಳ್ಳಿಗಳಲ್ಲಿ ಪ್ರಬಲವಾಗಿಯೇ ಪ್ರವಹಿಸಿದೆ. ಜಾತಿ ರಾಜಕಾರಣ ಜೋರಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಾತಿಯ ಆಧಾರದಲ್ಲಿಯೇ ಟಿಕೆಟ್ ನೀಡಲು ಮುಂದಾಗಿದೆ.

ಬೆಂಗಳೂರಿನಲ್ಲಿ ಮತ್ತು ದೇವನಹಳ್ಳಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಟಿಕೆಟ್ ವಿಚಾರವಾಗಿ ನಡೆದ ಸಭೆಯಲ್ಲಿಯೂ ಜಾತಿ ಲೆಕ್ಕಾಚಾರವನ್ನು ಮುಖಂಡರು ಅಳೆದುತೂಗಿದ್ದಾರೆ. ಈ ಪರಿಣಾಮ ಟಿಕೆಟ್ ವಿಚಾರದಲ್ಲಿ ಹೆಸರೇ ಇಲ್ಲದಿದ್ದ ಮುಖಂಡ ಪ್ರದೀಪ್ ಈಶ್ವರ್ ಮುನ್ನಲೆಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.