ಚಿಂತಾಮಣಿ: ಆರ್‌ಸಿಬಿ ವಿಜಯೋತ್ಸವದ ಸಂದರ್ಭ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ತಾಲ್ಲೂಕಿನ ಕುರುಟಹಳ್ಳಿಯ ಕೆ.ಟಿ.ಶ್ರವಣ್ ಹಾಗೂ ಗೋಪಲ್ಲಿ ಗ್ರಾಮದ ಪ್ರಜ್ವಲ್ ಅವರ ಮನೆಗೆ ಭಾನುವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕುರುಟಹಳ್ಳಿಯ ಕೆ.ಟಿ.ಶ್ರವಣ್, ಬೆಂಗಳೂರಿನ ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಕುರುಟಹಳ್ಳಿಯ ಶ್ರವಣ್ ಮನೆಗೆ ಭೇಟಿ ನೀಡಿ ಮೃತನ ತಂದೆ-ತಾಯಿ, ತಾತ ಕೃಷ್ಣಪ್ಪ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಶ್ರವಣ್ ಗ್ರಾಮಕ್ಕೆ ಬಂದಾಗ ಕೃಷಿ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಅವರಿಗೆ ಕ್ರಿಕೆಟ್ ಅಥವಾ ಯಾವುದೇ ಆಟಗಾರನ ಹುಚ್ಚು ಅಭಿಮಾನ ಇರಲಿಲ್ಲ. ಆಕಸ್ಮಿಕವಾಗಿ ಸಂಭ್ರಮಾಚರಣೆ ವೀಕ್ಷಣೆಗೆ ಹೋಗಿದ್ದಾಗ ನಡೆದಿರುವ ದುರಂತದಿಂದ ದು:ಖವಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರದಿಂದ ಸಿಗುವ ಪರಿಹಾರ ಹಾಗೂ ಇತರೆ ಎಲ್ಲ ಸೌಲಭ್ಯ ಒದಗಿಸಿಕೊಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಮೃತನ ಅಣ್ಣ ಕೃಷಿ ಪದವೀಧರನಾಗಿದ್ದು ಸರ್ಕಾರಿ ಉದ್ಯೋಗಕ್ಕಾಗಿ ಮನವಿ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಮುರುಗಮಲ್ಲ ಹೋಬಳಿಯ ಗೋಪಲ್ಲಿಯ ಪ್ರಜ್ವಲ್ ಮನೆಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರಜ್ವಲ್ ಎಂಜಿನಿಯರಿಂಗ್ ಪದವೀಧರರಾಗಿದ್ದು ಇತ್ತೀಚೆಗೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಅವರ ಸಹೋದರಿ ವ್ಯಾಸಂಗ ಮಾಡುತ್ತಿದ್ದು, ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.