ADVERTISEMENT

ವಾಹನಗಳು ಸುಸ್ಥಿಯಲ್ಲಿಟ್ಟು ಪರಿಸರ ಕಾಪಾಡಿ

ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 15:36 IST
Last Updated 5 ನವೆಂಬರ್ 2020, 15:36 IST
ಕಾರ್ಯಕ್ರಮದಲ್ಲಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಪ್ರಾದೇಶಿಕ ಸಾರಿಗೆ ಇಲಾಖೆ ಕೈಪಿಡಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಪ್ರಾದೇಶಿಕ ಸಾರಿಗೆ ಇಲಾಖೆ ಕೈಪಿಡಿ ಬಿಡುಗಡೆಗೊಳಿಸಿದರು.   

ಚಿಕ್ಕಬಳ್ಳಾಪುರ: ‘ಸಾರ್ವಜನಿಕರು ವಾಹನಗಳನ್ನು ಸುಸ್ಥಿಯಲ್ಲಿಟ್ಟುಕೊಂಡು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಪರಿಸರ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕರಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.

ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಾಹನಗಳು ಹೊರಸೂಸುವ ಹೊಗೆಯಲ್ಲಿರುವ ವಿಷಕಾರಿ ಅನಿಲಗಳು ಶುದ್ಧ ಗಾಳಿಯೊಡನೆ ಸೇರಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ದೃಷ್ಟಿ ಮಂಜಾಗುವುದು, ಶ್ವಾಸಕೋಶ ಕ್ಯಾನ್ಸರ್, ಅಸ್ತಮಾ, ಉಸಿರಾಟದ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗಲಿವೆ’ ಎಂದು ತಿಳಿಸಿದರು.

ADVERTISEMENT

‘ಈಗಾಗಲೇ ಹೆಚ್ಚು ಹೊಗೆ ಸೂಸಿ ಪರಿಸರವನ್ನು ಮಾಲಿನ್ಯಗೊಳಿಸುವ ಮೋಟಾರು ವಾಹನಗಳ ತಪಾಸಣೆ ನಡೆಸಿ ವಶಪಡಿಸಿಕೊಳ್ಳಲಾಗುತ್ತಿದೆ. ಕಲಬೆರಕೆ ಇಂಧನವನ್ನು ಬಳಸದೇ, ಸಕಾಲದಲ್ಲಿ ಎಂಜಿನ್‌ ಪರೀಕ್ಷೆ ಮಾಡಿಸಬೇಕು. ದಟ್ಟವಾದ ಹೊಗೆ ಬರುತ್ತಿದ್ದರೆ ತಪಾಸಣೆ ಮಾಡಿಸಬೇಕು. ವಾಹನಗಳನ್ನು ಸುಸ್ಥಿಯಲಿಟ್ಟುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ವಿಜಯಲಕ್ಮೀ ಮಾತನಾಡಿ, ‘ನಾಗರಿಕರು ತಮ್ಮ ವಾಹನಗಳನ್ನು ಕಡ್ಡಾಯವಾಗಿ ಮಾಲಿನ್ಯ ತಪಾಸಣೆ ಮಾಡಿಸಿ ಸುಸ್ಥಿತಿಯಲ್ಲಿಟ್ಟು ಕೊಂಡು ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕರಿಸಬೇಕು. ವಿಷಯುಕ್ತ ಗಾಳಿ ಸೇವೆನೆ ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಧ್ಯತೆಗಳಿರುತ್ತದೆ. ಹಾಗಾಗಿ, ಹೆಚ್ಚಾಗಿ ಗಿಡ ಮರ ಬೆಳೆಸಿ ಪರಿಸರ ಕಾಪಾಡಿಕೊಳ್ಳಲು ಕೈಜೋಡಿಸಬೇಕು’ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್‌.ಡಿ.ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.