ADVERTISEMENT

ಮಾವು ಕೊಯ್ಲೊತ್ತರ ಅಭಿವೃದ್ಧಿ ಕೇಂದ್ರ ನಿಷ್ಕ್ರಿಯ

​ಪ್ರಜಾವಾಣಿ ವಾರ್ತೆ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ಚಿಂತಾಮಣಿಯ ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರದ ಆಡಳಿತ ಕಚೇರಿ.
ಚಿಂತಾಮಣಿಯ ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರದ ಆಡಳಿತ ಕಚೇರಿ.   

ಎಂ.ರಾಮಕೃಷ್ಣಪ್ಪ

ಚಿಂತಾಮಣಿ: ಮಾವಿನ ವಿವಿಧ ತಳಿಗಳ ಕೊಯ್ಲು ನಡೆಯುತ್ತಿದ್ದು ಮಾರುಕಟ್ಟೆಯಲ್ಲಿ ಹಣ್ಣುಗಳು ರಾರಾಜಿಸುತ್ತಿವೆ. ಇಂಥ ಹೊತ್ತಿನಲ್ಲಿ ಹಣ್ಣುಗಳ ಗುಣಮಟ್ಟ ಕಾಪಾಡಲು ವೈಜ್ಞಾನಿಕ ರೀತಿಯಲ್ಲಿ ಮಾವಿನ ಕೊಯ್ಲು ಬಗ್ಗೆ ರೈತರಿಗೆ ಮಾಹಿತಿ, ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕಿದ್ದ ಮಾವು ಕೊಯ್ಲೊತ್ತರ ಅಭಿವೃದ್ಧಿ ಕೇಂದ್ರವು ನಿಷ್ಕ್ರಿಯವಾಗಿರುವುದು ದುರದೃಷ್ಟಕರ. 

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಅನುಕೂಲಕ್ಕಾಗಿ ನಗರದ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿ ಮಾವು ಕೊಯ್ಲೊತ್ತರ ಅಭಿವೃದ್ಧಿ ಕೇಂದ್ರ ಸ್ಥಾಪನೆಯಾಗಿದೆ. ಆದರೆ, ಸರ್ಕಾರ ಮತ್ತು ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ನಿರ್ಲಕ್ಷ್ಯತೆಯಿಂದಾಗಿ ಈ ಕೇಂದ್ರಕ್ಕೆ ಗ್ರಹ ಬಡಿದಿದೆ ಎಂದು ಮಾವು ಬೆಳೆಗಾರರು ಆರೋಪಿಸುತ್ತಾರೆ. 

ADVERTISEMENT

ಬೂರಗಮಾಕಲಹಳ್ಳಿಯ ಬಳಿ 7 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೇಂದ್ರದಲ್ಲಿ ಅನುದಾನ ಮತ್ತು ಅಧಿಕಾರಿ, ಸಿಬ್ಬಂದಿಯ ಕೊರತೆಯಿಂದ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಅನಾಥವಾಗಿದೆ.

ಮಾವಿನ ತಳಿಗಳಿಗೆ ಅನುಸಾರವಾಗಿ ಮೇ ಮಾಹೆಯಿಂದ ಜುಲೈ ಮಾಹೆಯವರೆಗೂ ಕೊಯ್ಲು ನಡೆಯುತ್ತದೆ. ಕಾಯಿಗಳಿಗೆ ಹಾನಿಯಾಗದಂತೆ ಕಟಾವು ಮಾಡುವುದು, ಕಟಾವು ಮಾಡಲು ಅನುಸರಿಸಬೇಕಾದ ವಿಧಾನಗಳು, ಕಟಾವು ಮಾಡಿದ ಹಣ್ಣುಗಳನ್ನು ಆಕಾರಕ್ಕೆ ತಕ್ಕಂತೆ ಬೇರ್ಪಡಿಸಿ ಸಂರಕ್ಷಣೆ ಮಾಡುವುದು. ಮಾಗಿಸುವುದು, ಪ್ಯಾಕಿಂಗ್ ಮಾಡಲು ತರಬೇತಿ ನೀಡಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡರೆ ಮಾತ್ರ ರೈತರಿಗೆ ಲಾಭದಾಯಕ ಬೆಲೆ ಸಿಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹೇಳುತ್ತಾರೆ.

ಮಾಡಿಕೆರೆಯ ಮಾವು ಅಭಿವೃದ್ಧಿ ಕೇಂದ್ರ ನನ್ನ ಕೂಸು. ಅದು ನಿರೀಕ್ಷೆಗೆ ತಕ್ಕಂತೆ ಬಳಕೆಯಾಗುತ್ತಿಲ್ಲ. ಕೇಂದ್ರವನ್ನು ರೈತರಿಗೆ ಉಪಯುಕ್ತವಾಗಿ ಮಾಡಲು ಖಂಡಿತ ಕ್ರಮಕೈಗೊಳ್ಳಲಾಗುವುದು.
ಡಾ.ಎಂ.ಸಿ.ಸುಧಾಕರ್, ಶಾಸಕ

ಮಾವು ಅಭಿವೃದ್ಧಿ ಮಂಡಳಿಯ ಉದ್ದೇಶವು ಇದೇ ಆಗಿತ್ತು. ಮಾವಿನ ಹಣ್ಣಿನ ಕೊಯ್ಲಿನಿಂದ ಹಿಡಿದು ಮಾರುಕಟ್ಟೆಯವರೆಗೆ ಪ್ರತಿ ಹಂತದಲ್ಲೂ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ, ಹಣ್ಣಿನ ರಫ್ತಿಗೆ ಉತ್ತೇಜನ, ಸಹಾಯಧನ ನೀಡುವುದು ಹಾಗೂ ಎಲ್ಲ ರೀತಿಯ ತೋಟಗಾರಿಕೆ ಬೆಳೆಗಳಿಗೆ ತರಬೇತಿ ನೀಡುವುದು ಕೇಂದ್ರದ ಸ್ಥಾಪನೆಯ ಗುರಿಯಾಗಿತ್ತು.

ಡಾ.ಎಂ.ಸಿ.ಸುಧಾಕರ್ ಶಾಸಕರಾಗಿದ್ದಾಗ "ರಾಷ್ಟ್ರೀಯ ಕೃಷಿ ವಿಕಾಸ' ಯೋಜನೆಯಡಿ 14.33 ಕೋಟಿ ವೆಚ್ಚದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕೇಂದ್ರದಿಂದ ಮಂಜೂರಾತಿ ಪಡೆದಿದ್ದರು. ಅಷ್ಟರಲ್ಲಿ ಜಿಲ್ಲೆ ವಿಭಜನೆ ಆಗಿದ್ದರಿಂದ ಕೇಂದ್ರವನ್ನು ವಿಭಜಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳ್ಗೆರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆಯಲ್ಲಿ ತಲಾ 7 ಕೋಟಿ ರೂ ವೆಚ್ಚದಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಯಿತು.

ಮಾಡಿಕೆರೆ ಕೇಂದ್ರದಲ್ಲಿ 2 ಎಕರೆಯಲ್ಲಿ ತರಬೇತಿ ಕೇಂದ್ರ, ಅಧಿಕಾರಿಗಳ ಕೊಠಡಿಗಳು, ಪ್ರಾತ್ಯಕ್ಷಿಕೆ ಕೇಂದ್ರ, ಮಾವಿನ ಗ್ರೇಡಿಂಗ್ ಕೇಂದ್ರ, ಮಾಗಿಸುವ ಘಟಕ, ಬೇರೆ ಬೇರೆ ಜಿಲ್ಲೇಗಳಿಂದ ರೈತರು ಉಳಿದುಕೊಳ್ಳಲು 50 ಜನರಿಗೆ ವಸತಿ ಸೌಲಭ್ಯ(ಮಹಿಳೆಯರಿಗೆ ಮತ್ತು ಮುರುಷರಿಗೆ ಪ್ರತ್ಯೇಕವಾಗಿ),ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಉಳಿದುಕೊಳ್ಳಲು ವಿಶ್ರಾಂತಿ ಗೃಹ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತು.

2013 ರಲ್ಲಿ ಚುನಾವಣೆ ನಡೆದು ಡಾ.ಎಂ.ಸಿ.ಸುಧಾಕರ್ ಸೋತರು. ನಂತರ ಬಂದ ಶಾಸಕರು ಗಮನಹರಿಸಲಿಲ್ಲ, ಕೇಂದ್ರಕ್ಕೆ ಗರಬಡಿಯಿತು. ಮಾವನ್ನು ಗ್ರೇಡಿಂಗ್, ಸ್ವಚ್ಛಗೊಳಿಸುವುದು, ಮಾಗಿಸವ ಯಂತ್ರಗಳ ಅಳವಡಿಸಲಾಗದೆ ಸುಮಾರು 5 ವರ್ಷಗಳ ಕಾಲ ಆಧುನಿಕ, ಸುಸಜ್ಜಿತ ಹೊಸ ಕಟ್ಟಡದಲ್ಲಿ ಯಾವುದೇ ಚಟುವಟಿಕೆಗಳು ನಡೆಯದೆ ಭೂತಬಂಗಲೆಯಾಗಿತ್ತು. ಸಾರ್ವಜನಿಕರ ಒತ್ತಡದಿಂದ 2016 ಆಗಸ್ಟ್ 22 ರಂದು ಉದ್ಘಾಟನೆ ಆಯಿತು.

ಮಾವು ಅಭಿವೃದ್ಧಿ ಮಂಡಳಿ ಆನ್ಲೈನ್ ಮೂಲಕ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿತ್ತು. ಖರೀದಿದಾರರು ಆನ್ಲೈನ್ ಮೂಲಕ ಅಥವಾ ದೂರವಾಣಿ ಮೂಲಕ ಆರ್ಡರ್ ನೀಡುತ್ತಿದ್ದರು. ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸಿ, ದಳ್ಳಾಳಿಗಳ ಕಾಟ ತಪ್ಪುತ್ತಿತ್ತು.
ಮುನಿರೆಡ್ಡಿ ಮಾವು ಬೆಳೆಗಾರ. ಅಕ್ಕಿಮಂಗಲ.

ಉದ್ಘಾಟನೆ ಆದರೂ 2 ವರ್ಷ ಕಾರ್ಯಾರಂಭ ಮಾಡಲಿಲ್ಲ. ರೈತರು ಮತ್ತು ಮಾವು ಬೆಳೆಗಾರರ ಹೋರಾಟದ ನಂತರ ಕೇಂದ್ರ ಆರಂಭವಾಯಿತು. 2-3 ವರ್ಷಗಳು ಕೇಂದ್ರ ಚೆನ್ನಾಗಿ ಕೆಲಸ ಮಾಡಿತು. ಕೊಯ್ಲೋತ್ತರ ಮಾವು ಸಂಸ್ಕರಣೆ ಮಾಡುವುದು. ಕೇಂದ್ರದಲ್ಲಿ ಮಾವು ಕೊಯ್ಲು, ಹಣ್ಣಿನ ಸ್ವಚ್ಚತೆ, ಬಿಸಿನೀರಿನ ಉಪಚಾರ, ಮಾಗಿಸುವುದು, ಪ್ಯಾಕ್ ಮಾಡುವುದು, ರಫ್ತು ಮಾಡುವುದರ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಜತೆಗೆ ಬೆಳೆಗಾರರಿಗೆ ಗಿಡದ ನಾಟಿಯಿಂದ ಹಣ್ಣು ಬಿಡುವವರೆಗೂ ಋತುವಿಗೆ ತಕ್ಕಂತೆ ವಾರಕ್ಕೆ ಒಂದು ತರಬೇತಿಯನ್ನು ನೀಡಲಾಗುತ್ತಿತ್ತು ಎನ್ನುತ್ತಾರೆ ಮಾವು ಬೆಳೆಗಾರ ಎನ್.ನಾಗಿರೆಡ್ಡಿ.

ಮಾವಿನ ಚಿಗುರು, ಪೀಚು, ಕಾಯಿಯವರೆಗೂ ಬರುವ ರೋಗಗಳು ಮತ್ತು ಅವುಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಪರಿಣಾಮಕಾರಿಯಾದ ಕ್ರಮಗಳನ್ನು ರೈತರ ತೋಟಗಳಲ್ಲೇ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಗುತ್ತದೆ. ತೋಟಗಳಿಗೂ ತೆರಳಿ ಕಟಾವು ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಸ್ಥಳೀಯ ಮಾರುಕಟ್ಟೆಗೆ ಮಾರಾಟದ ಜತೆಗೆ ಯುರೋಪ್ ರಫ್ತು ಮಾಡುವ ಯೋಜನೆಯನ್ನು ರೂಪಿಸಲಾಗಿತ್ತು. ಕೇಂದ್ರದಲ್ಲಿ ಪ್ರಮುಖವಾಗಿ ಬಿಸಿ ನೀರಿನ ಉಪಚಾರ ಘಟಕ(ರಫ್ತು ಉಪಚಾರ), ಕಾಟನ್ ಬಾಕ್ಸ್ ಬಳಸದೆ ಬ್ಯಾಸ್ಕೆಟ್ ಬಳಸುವುದು, ಇಥಲೀನ್ ಬಳಸಿ ಮಾಗಿಸುವ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು.

ರಾಜ್ಯದಲ್ಲಿ 1.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅದರಲ್ಲಿ ಶೇ.40 ರಷ್ಟು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೊಡುಗೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಪ್ರಥಮ ಸ್ಥಾನದಲ್ಲಿದ್ದು ಮಾವಿನ ಮಡಿಲುಗಳಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ 15778 ಹೆಕ್ಟೇರ್ ನಷ್ಟು ಇದ್ದರೆ, ಚಿಂತಾಮಣಿ ತಾಲ್ಲೂಕಿನಲ್ಲಿ 7947 ಹೆಕ್ಟೇರ್ ಪ್ರದೇಶವಿದೆ. ಚಿಂತಾಮಣಿ ಮತ್ತು ಶ್ರೀನಿವಾಸಪುರ ದೇಶ, ವಿದೇಶಗಳಲ್ಲಿ ಮಾವಿಗೆ ಹೆಸರುವಾಸಿಯಾಗಿವೆ.

ಬೆಳೆಗಾರರ ಅನುಕೂಲಕ್ಕಾಗಿ ಬಿಗ್ ಬ್ಯಾಸ್ಕೆಟ್, ರಿಲಿಯನ್ಸ್ ನಂತಹ ದೊಡ್ಡ ದೊಡ್ಡ ಕಂಪನಿಗಳ ಜತೆ ಕೇಂದ್ರವು ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡುತ್ತಿತ್ತು. ಅವರು ರೈತರ ತೋಟಗಳಿಗೆ ತೆರಳಿ ನೇರವಾಗಿ ಖರೀದಿ ಮಾಡುತ್ತಾರೆ. ಆನ್ಲೈನ್ ಮೂಲಕ ಮಾರಾಟ ಮಾಡುವುದಕ್ಕೂ ಅನುಕೂಲ ಕಲ್ಪಿಸಲಾಗಿದೆ. ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರಕ್ಕೆ ಅಪೆಡಾ ಮತ್ತು ಎನ್.ಪಿ.ಪಿ.ಓ ನಿಂದ ಮಾನ್ಯತೆ ಇತ್ತು.

ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರವು ರೈತರಿಗೆ ವರದಾನವಾಗಿತ್ತು. ಮಾವು ಬೆಳೆಗಾರರು ಉತ್ತಮ ಗುಣಮಟ್ಟ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಅಗತ್ಯವಾದ ತರಬೇತಿ ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಮಾವು ಸ್ಪೆಷಲ್, ಔಷಧಿಗಳು, ಹಲವಾರು ಪರಿಕರಗಳು, ರಫ್ತು ಮಾಡಲು ಅಗತ್ಯವಾದ ರಟ್ಟಿನ ಬಾಕ್ಸ್, ಪ್ಲಾಸ್ಟಿಕ್ ಕ್ರೇಟ್ಸ್ ಸಿಗುತ್ತಿದ್ದವು.
ರಘುನಾಥರೆಡ್ಡಿ ರೈತ ಮುಖಂಡ.

ರಫ್ತು ಹೇಗೆ

ಮಾವು ಅಭಿವೃದ್ಧಿ ಕೇಂದ್ರವು ರೈತರು ಮತ್ತು ರಫ್ತುದಾರರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ರೈತರಿಂದ ನೇರವಾಗಿ ಕೊಂಡುಕೊಳ್ಳುತ್ತಾರೆ. ಉತ್ತಮ ಗುಣಮಟ್ಟದ ಹಣ್ಣುಗಳನ್ನು ಕಟಾವು ಮಾಡಿ ಕ್ರೇಟ್ಗಳಲ್ಲಿ ಕೇಂದ್ರಕ್ಕೆ ತರಬೇಕು. ಕೇಂದ್ರದಲ್ಲಿ ಗ್ರೇಡಿಂಗ್, ವಾಷ್ ಮಾಡಿ ಜೀಡಿ ಇಳಿಸಲಾಗುತ್ತದೆ. 48 ಡಿಗ್ರಿ ಸೆಲ್ಷಿಯಸ್ನಲ್ಲಿ ಒಂದು ಗಂಟೆ ಬಿಸಿ ನೀರಿನ ಉಪಚಾರ ಘಟಕದಲ್ಲಿ ಇಡಲಾಗುತ್ತದೆ. ಮತ್ತೆ ಸಾಮಾನ್ಯ ಸ್ಥಿತಿಗೆ ಬರಲು ಪ್ರೀ ಕೂಲಿಂಗ್ ನಲ್ಲಿ ಇಡಲಾಗುತ್ತದೆ. ಹೊರ ದೇಶಗಳ ಪ್ರಕೃತಿಗೆ ತಕ್ಕಂತೆ ಕಾಯಿ, ಹಣ್ಣುಗಳನ್ನು ಪ್ಯಾಕ್ ಮಾಡಿಕೊಡಲಾಗುತ್ತದೆ. ನಂತರ ರಫ್ತುದಾರರು ತೆಗೆದುಕೊಂಡು ಹೋಗುತ್ತಾರೆ. ಗುಣಮಟ್ಟಕ್ಕೆ ಪ್ರಧಾನ್ಯತೆ ಹಾಗೂ ಹೆಚ್ಚಿನ ಬೆಲೆ ಸಿಗುತ್ತದೆ ಎನ್ನುತ್ತಾರೆ ಕೇಂದ್ರದ ಹಿಂದಿನ ಉಪನಿರ್ದೇಶಕಿ ಎಂ.ಗಾಯಿತ್ರಿ.

ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ರೈತರ ನೇರ ಮಾರಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ. ಲಾಲ್ ಬಾಗ್ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಾರಾಟ ಕೇಂದ್ರಗಳನ್ನು ತೆರೆದು ಬೆಳೆಗಾರರ ಮಾರಾಟಕ್ಕೆ ವ್ಯವಸ್ಥೆಯನ್ನು ಕೇಂದ್ರದಿಂದ ಮಾಡುತ್ತಿದ್ದರು. ಎಲ್ಲ ವ್ಯವಸ್ಥೆಗಳು ಸ್ಥಗಿತಗೊಂಡಿವೆ.

ಮಾವಿನಿಂದ ತಯಾರಿಸಬಹುದಾದ ಉತ್ಪನ್ನಗಳಾದ ಉಪ್ಪಿನ ಕಾಯಿ, ಜ್ಯೂಸ್, ಬಾರ್, ಕ್ಯಾಂಡಿ ತಯಾರಿಸುವ ವಸತಿಸಹಿತ ತರಬೇತಿಯನ್ನು ನೀಡುವುದು. ಬೇರೆ ಬೇರೆ ಜಿಲ್ಲೆಗಳ ರೈತರ ತಂಡಗಳಿಗೂ ತರಬೇತಿ ಶಿಬಿರಗಳು ನಡೆಯುತ್ತಿದ್ದವು. ಮಾವು ಋತುವಿನ ನಂತರ ಬೇರೆ ಬೇರೆ ಬೆಳೆಗಳ ಬೆಳೆಗಾರರಿಗೆ ತರಬೇತಿ ನೀಡುವ ಉದ್ದೇಶ ಸಹ ಕೇಂದ್ರ ಹೊಂದಿತ್ತು.ದಳ್ಳಾಳಿಗಳ ಹಿಡಿತ ತಪ್ಪಿಸಿ ಬೆಳೆಗಾರರಿಗೆ ಉತ್ತಮ ಧಾರಣೆ ದೊರೆಯುವಂತೆ ಮತ್ತು ಪಾರದರ್ಶಕ ತೂಕ ಮಾಡುವ ವ್ಯವಸ್ಥೆಯನ್ನು ಬೆಳೆಗಾರರಿಗೆ ಒದಗಿಸಿಕೊಡುವ ಉದ್ದೇಶ ವಿಫಲವಾಗಿದೆ ಎಂದು ರೈತರು ದೂರುತ್ತಾರೆ.

ಮಾವು ಬೆಳೆಗಾರರಿಗೆ ಅನುಕೂಲವಾದ ಕೇಂದ್ರವನ್ನು ಸ್ಥಗಿತಗೊಳಿಸಿ, ತೋಟಗಾರಿಕೆ ಇಲಾಖೆಯ ವಶಕ್ಕೆ ನೀಡಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಅದು ನಿಜವಾದರೆ ರೈತರು ಉಗ್ರವಾದ ಹೋರಾಟ ಅನಿವಾರ್ಯವಾಗುತ್ತದೆ.
ಸೀಕಲ್ ರಮಣಾರೆಡ್ಡಿ ರೈತ ಮುಖಂಡ

ಪ್ರಸ್ತುತ ಮಾವು ಅಭಿವೃದ್ಧಿ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರನ್ನು ಹೊರತುಪಡಿಸಿ ಎಲ್ಲ ಹುದ್ದೆಗಳು ಖಾಲಿ ಇವೆ. ಉಪನಿರ್ದೇಶಕರ ಹುದ್ದೆ ಖಾಲಿ ಇದೆ. ಸಹಾಯಕ ನಿರ್ದೇಶಕರ 2 ಹುದ್ದೆಗಳಲ್ಲಿ ಒಬ್ಬರು ಮಾತ್ರ ಇದ್ದಾರೆ. ಸಹಾಯಕ ತೋಟಗಾರಿಕೆ ಅಧಿಕಾರಿಯ 2 ಹುದ್ದೆ, ಮ್ಯಾನೇಜರ್ ಹುದ್ದೆ 1, ಪ್ರಥಮ ದರ್ಕೆ ಸಹಾಯಕರ ಹುದ್ದೆ 1, ತೋಟಗಾರಿಕೆ ಸಹಾಯಕ ಹುದ್ದೆ 1, ತೋಟದ ಕೆಲಸಗಾರ ಹುದ್ದೆ 1 ಖಾಲಿ ಇವೆ. ಹೊರಗುತ್ತಿಗೆ ಆಧಾರದಲ್ಲಿ ಒಬ್ಬ ಕಂಪ್ಯೂಟರ್ ಆಪರೇಟರ್, ಒಬ್ಬ ಕಾವಲುಗಾರ, ಒಬ್ಬ ತೋಟದ ಕೆಲಸದವರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಮಾವು ಅಭಿವೃದ್ಧಿ ಕೇಂದ್ರದ ಸ್ಥಾಪಕ ಡಾ.ಎಂ.ಸಿ.ಸುಧಾಕರ್ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದು ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಹಿಂದಿನಂತೆ ಕೇಂದ್ರ ಮಾವು ಬೆಳೆಗಾರರಿಗೆ ವರವಾಗಿ ಪರಿಣಮಿಸಲಿ ಎನ್ನುವುದು ಬೆಳೆಗಾರರ ಆಶಯವಾಗಿದೆ.

ಮಾವು ಸಂಸ್ಕರಣೆ ಘಟಕ
ರೈತರು ಉಳಿದುಕೊಳ್ಳುವ ವಸತಿನಿಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.