ADVERTISEMENT

ಸಮಾಜ ಸೇವೆ: ಶಾಸಕ ಕೃಷ್ಣಾರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:19 IST
Last Updated 1 ಡಿಸೆಂಬರ್ 2020, 3:19 IST
ಚಿಂತಾಮಣಿಯಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ಸಿ.ಸಿ. ಕ್ಯಾಮೆರಾಗಳನ್ನು ಶಾಸಕ ಎಂ. ಕೃಷ್ಣಾರೆಡ್ಡಿ ಉದ್ಘಾಟಿಸಿದರು
ಚಿಂತಾಮಣಿಯಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ಸಿ.ಸಿ. ಕ್ಯಾಮೆರಾಗಳನ್ನು ಶಾಸಕ ಎಂ. ಕೃಷ್ಣಾರೆಡ್ಡಿ ಉದ್ಘಾಟಿಸಿದರು   

ಚಿಂತಾಮಣಿ: ‘ಸಮಾಜ ನನಗೇನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಜನರು ಪ್ರಶ್ನಿಸಿಕೊಳ್ಳಬೇಕು’ ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ತಿಳಿಸಿದರು.

ನಗರ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿ.ಸಿ. ಕ್ಯಾಮೆರಾ ಉದ್ಘಾಟಿಸಿ ಅವರು ಮಾತನಾಡಿದರು.

ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸರು ದಾನಿಗಳ ನೆರವಿನಿಂದ ₹ 15 ಲಕ್ಷ ವೆಚ್ಚದಲ್ಲಿ 64 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿರುವುದು ಉತ್ತಮ ಕೆಲಸ. ಇದರಿಂದ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಎಲ್ಲವನ್ನು ಪೊಲೀಸರೇ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಸುತ್ತಮುತ್ತಲು ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಸಮಾಜಸೇವಾ ಕಾರ್ಯಕ್ರಮಕ್ಕೆ ದಾನಿಗಳು ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿರುವುದು ಶ್ಲಾಘನೀಯ. ಇದೇ ರೀತಿಯ ಸಹಕಾರ ಸದಾ ಇರಲಿ. ಪೊಲೀಸರು ಸಹ ಸಾರ್ವಜನಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಸಮಸ್ಯೆ ಹೊತ್ತು ಠಾಣೆಗೆ ಬರುವ ನಾಗರಿಕರ ಅಹವಾಲು ಆಲಿಸಿ ಪರಿಹರಿಸಬೇಕು. ಕ್ಷೇತ್ರದ ಶಾಸಕನಾಗಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.

ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿದರೆ ಸಾಕಷ್ಟು ಗಲಾಟೆ, ದೊಂಬಿಗಳನ್ನು ತಡೆಗಟ್ಟಬಹುದು. ಅಪರಾಧಗಳು ನಡೆದ ಮೇಲೆ ಕ್ರಮಕೈಗೊಳ್ಳುವುದಕ್ಕಿಂತ ಮುಂದಾಲೋಚನೆಯಿಂದ ನಡೆಯದಂತೆ ಕ್ರಮಕೈಗೊಳ್ಳಬೇಕು. ಯಾವುದೇ ಒತ್ತಡ, ಪ್ರಲೋಭನೆಗಳಿಗೆ ಒಳಗಾಗದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿ ಕೊಡಬೇಕು ಎಂದು ಸೂಚಿಸಿದರು.

ಡಿವೈಎಸ್‌ಪಿ ಲಕ್ಷ್ಮಯ್ಯ, ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸಪ್ಪ, ತಹಶೀಲ್ದಾರ್ ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್, ಉಪಾಧ್ಯಕ್ಷೆ ಸುಹಾಸಿನಿ ರೆಡ್ಡಿ, ಸದಸ್ಯರಾದ ಮಂಜುನಾಥ್, ಸಿ.ಕೆ. ಶಬ್ಬೀರ್, ಜೈಭೀಮ್ ಮುರಳಿ, ಅಗ್ರಹಾರ ಮುರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.