ADVERTISEMENT

ಮಡುಗಟ್ಟಿದ್ದ ಕಾಲುವೆಗೆ ಸೊಳ್ಳೆಘಟ್ಟವಾದ ಶಿಡ್ಲಘಟ್ಟ

ಕಾಲುವೆ ನಿರ್ವಹಣೆ ಮರೆತ ನಗರಸಭೆ, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರ ಆಕ್ರೋಶ

ಡಿ.ಜಿ.ಮಲ್ಲಿಕಾರ್ಜುನ
Published 16 ನವೆಂಬರ್ 2019, 19:45 IST
Last Updated 16 ನವೆಂಬರ್ 2019, 19:45 IST
ಅಧ್ವಾನಗೊಂಡ ಕಾಲುವೆಯ ಚಿತ್ರಣ
ಅಧ್ವಾನಗೊಂಡ ಕಾಲುವೆಯ ಚಿತ್ರಣ   

ಶಿಡ್ಲಘಟ್ಟ: ನಗರದ ಸರ್ಕಾರಿ ಬಸ್ ನಿಲ್ದಾಣ ಬಳಿಯ ರಸ್ತೆಯ ಪಕ್ಕದ ಕೋಡಿ ಕಾಲುವೆಯು ಕಳೆಗಿಡಗಳಿಂದ ಆವರಿಸಿಕೊಂಡಿದ್ದು, ಕಸದ ರಾಶಿ ತುಂಬಿ, ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕಾಲುವೆಯಲ್ಲಿಯೇ ಮಡುಗಟ್ಟಿ, ಗಬ್ಬು ನಾರುತ್ತ ಸೊಳ್ಳೆ ಸಂತಾನದ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ.

ಗೌಡನ ಕೆರೆಯಿಂದ ಅಮ್ಮನ ಕೆರೆಗೆ ನೀರು ಹರಿದು ಹೋಗಲು ಮಾಡಿರುವ ಈ ಪುರಾತನ ಕೋಡಿ ಕಾಲುವೆ ಸರಿಯಾದ ನಿರ್ವಹಣೆ ಕಾಣದ ಪರಿಣಾಮ ತ್ಯಾಜ್ಯದ ಗುಂಡಿಯಂತೆ ಬಳಕೆಯಾಗುತ್ತಿದೆ. ನಗರದ ಪ್ರಮುಖ ಪ್ರದೇಶದ ಕಾಲುವೆ ದಿನೇ ದಿನೇ ತಿಪ್ಪೆಗುಂಡಿಯಾಗುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಲುವೆಯಲ್ಲಿ ಹರಿಯದೇ ಮಡುಗಟ್ಟಿ ನಿಂತ ನೀರಿನಲ್ಲಿ ವಿಪರೀತ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು, ಇದರಿಂದಾಗಿ ನಗರದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಭೀತಿ ಕೂಡ ವ್ಯಕ್ತವಾಗುತ್ತಿದೆ. ಸೊಳ್ಳೆಗಳ ಆವಾಸಸ್ಥಾನವಾಗಿರುವ ಕಾಲುವೆಯ ಪರಿಣಾಮ, ಶಿಡ್ಲಘಟ್ಟವನ್ನು ಪ್ರವೇಶಿಸುವವರೆಲ್ಲ ‘ಸೊಳ್ಳೆಘಟ್ಟ’ಕ್ಕೆ ಎಂಬ ಅನುಭವವಾಗುತ್ತಿದೆ ಎಂದು ಸ್ಥಳೀಯರನ್ನು ಆಡಿಕೊಳ್ಳುವವಷ್ಟರ ಮಟ್ಟಿಗೆ ಕಾಲುವೆ ಸ್ಥಿತಿ ಅಧ್ವಾನಗೊಂಡಿದೆ.

ADVERTISEMENT

ನಗರದ ಬಸ್ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಬಡಾವಣೆಗಳಲ್ಲಿನ ನೀರು ಇದೇ ಕಾಲುವೆ ಮೂಲಕ ಹರಿದು ಹೋಗಬೇಕಾಗಿದೆ. ಆದರೆ ಈ ಕಾಲುವೆಗಳನ್ನು ನಗರಸಭೆಯವರು ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ನಗರದ ವಿವಿಧ ಅಂಗಡಿ, ಮಳಿಗೆ, ಹೋಟಲ್, ಮಾಂಸದ ಅಂಗಡಿಯವರು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನೆಲ್ಲ ಇದೇ ಕಾಲುವೆಗೆ ತಂದು ಸುರಿದು ಮತ್ತಷ್ಟು ಪರಿಸ್ಥಿತಿ ಹದಗೆಡಿಸುತ್ತಿದ್ದಾರೆ.

ಒಂದೆಡೆ ಕೊಳೆತ ಪದಾರ್ಥಗಳಿಂದ ಹೊಮ್ಮುವ ದುರ್ನಾತ, ಇನ್ನೊಂದೆಡೆ ಆಹಾರ ಅರಸಿ ಕಾಲುವೆಗೆ ಮುತ್ತಿಗೆ ಹಾಕುವ ಹಂದಿ ಮತ್ತು ನಾಯಿಗಳ ಹಾವಳಿಯಿಂದಾಗಿ ಸಾರ್ವಜನಿಕರು ಕಾಲುವೆ ಬಳಿ ಹಾಯಲು ಮೂಗು ಮುಚ್ಚಿಕೊಂಡು, ಭಯದಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ವಿವಿಧ ಭಾಗದಲ್ಲಿ ದೊಡ್ಡ ಚರಂಡಿಗಳಲ್ಲಿ ಕೂಡ ಇದೇ ರೀತಿಯಾಗಿ ಕಸದ ರಾಶಿಗಳು ಬಿದ್ದು ಗಬ್ಬು ನಾರುತ್ತಿರುವುದರಿಂದ ನಾಗರಿಕರು ಸಾಂಕ್ರಾಮಿಕ ರೋಗಗಳ ಭೀತಿಗೆ ಒಳಗಾಗಿ, ಸೊಳ್ಳೆ ನೋಣಗಳ ಕಾಟಕ್ಕೆ ಬೇಸತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರೆಲ್ಲ ಇತ್ತ ಕಣ್ತೆರೆದು ನೋಡಿ ಸ್ವಚ್ಛತೆ ಕಾಯ್ದುಕೊಳ್ಳಲು ಮುಂದಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.