ADVERTISEMENT

ಚಿಕ್ಕಬಳ್ಳಾಪುರ: ಇಲ್ಲ ಸೌಕರ್ಯ; ಸೊರಗಿದ ಕ್ರೀಡೆ

ಸುಸಜ್ಜಿತ ಅಂಕಣಗಳಿಲ್ಲ, ಗಗನಕುಸುಮವಾದ ಸಿಂಥೆಟಿಕ್ ಟ್ರ್ಯಾಕ್

ಈರಪ್ಪ ಹಳಕಟ್ಟಿ
Published 7 ಸೆಪ್ಟೆಂಬರ್ 2020, 2:59 IST
Last Updated 7 ಸೆಪ್ಟೆಂಬರ್ 2020, 2:59 IST
ಮಳೆ ಸುರಿದರೆ ಹೊಂಡವಾಗುವ ಜಿಲ್ಲಾ ಕ್ರೀಡಾಂಗಣ
ಮಳೆ ಸುರಿದರೆ ಹೊಂಡವಾಗುವ ಜಿಲ್ಲಾ ಕ್ರೀಡಾಂಗಣ   

ಚಿಕ್ಕಬಳ್ಳಾಪುರ: ಪ್ರವೇಶದ್ವಾರದಲ್ಲಿಯೇ ಸ್ವಾಗತಿಸುವ ನೀರು ತುಂಬಿದ ಗುಂಡಿಗಳು, ಧೋ ಎಂದು ಮಳೆ ಸುರಿದರೆ ಜಲಾವೃತಗೊಳ್ಳುವ ಅಂಗಳ, ಓಟದ ಅಭ್ಯಾಸ ಮಾಡಲಾಗದಷ್ಟು ಹಾಳಾದ ಮೈದಾನ, ಕ್ರೀಡಾಪಟುಗಳಿಗೆ ಗಾಯಗೊಳಿಸುವ ಅಂಕಣಗಳು, ಗಗನಕುಸುಮವಾದ ಸಿಂಥೆಟಿಕ್ ಟ್ರ್ಯಾಕ್..

ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ 12 ವರ್ಷ ಪೂರೈಸಿದರೂ ಸುಸಜ್ಜಿತವಾದ ಮೂಲಸೌಕರ್ಯಗಳಿಲ್ಲದೆ ಅಧ್ವಾನಗೊಂಡ ಜಿಲ್ಲಾ ಕೇಂದ್ರದ ಸರ್‌.ಎಂ.ವಿ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಣುವ ಚಿತ್ರಣವಿದು.

ಮೂಲ ಸೌಕರ್ಯಗಳ ಕೊರತೆ ಯಿಂದ ಸೊರಗುತ್ತಿರುವ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವಂತೆ ಸಮಸ್ಯೆಗಳ ಪಟ್ಟಿ ಹಿಡಿದು ಕ್ರೀಡಾಪಟುಗಳು ಅನೇಕ ವರ್ಷಗಳಿಂದ ಮಾಡಿಕೊಂಡ ಮನವಿಗಳೆಲ್ಲ ಅರಣ್ಯರೋದನವಾಗಿವೆ. ಪರಿಣಾಮ, ಸೂಕ್ತ ಮೂಲಸೌಕರ್ಯ ಸಿಗದೆ ಜಿಲ್ಲೆಯಲ್ಲಿ ಕ್ರೀಡೆ ಸೊರಗುತ್ತಿದೆ ಎಂಬ ಮಾತುಗಳು ಕ್ರೀಡಾ ವಲಯದಲ್ಲಿ ವ್ಯಕ್ತವಾಗುತ್ತಿದೆ.

ADVERTISEMENT

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ಸಂದರ್ಭದಲ್ಲಿ ಮಾತ್ರ ಕಸ ಕೊಡವಿಕೊಂಡು, ಶೃಂಗಾರಗೊಳ್ಳುವ ಕ್ರೀಡಾಂಗಣ ಉಳಿದಂತೆ ಬಣ್ಣಿಸಲಾಗದಷ್ಟು ಅಧ್ವಾನವಾಗಿರುತ್ತದೆ. ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಹೈರಾಣಾಗಿರುವ ಕ್ರೀಡಾಪಟುಗಳು ಕ್ರೀಡಾಂಗಣ ಅಭಿವೃದ್ಧಿಯಾಗುತ್ತದೆ ಎನ್ನುವ ಆಸೆಯನ್ನೇ ಕೈಬಿಟ್ಟು, ನಿಟ್ಟುಸಿರ ನಡುವೆ ಹಿಡಿಶಾಪ ಹಾಕುತ್ತಿದ್ದಾರೆ.

ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈವರೆಗೆ ನನಸಾಗಿಲ್ಲ. ಸದ್ಯ ಇರುವ ಟ್ರ್ಯಾಕ್‌ ವೈಜ್ಞಾನಿಕವಾಗಿ ನಿರ್ಮಿಸಿಲ್ಲ ಎನ್ನುವ ಆರೋಪ ಕ್ರೀಡಾಪಟುಗಳದ್ದು. ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವವರ ಬಾಧೆ ಕೇಳುವವರಿಲ್ಲದಂತಾಗಿದೆ ಎಂಬ ಅಳಲು ಕ್ರೀಡಾಪಟುಗಳದ್ದು.

ಬಿ.ಎಸ್‌.ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್, ವಸತಿ ನಿಲಯ ಸ್ಥಾಪಿಸಬೇಕು ಎಂಬ ಚರ್ಚೆ ನಡೆದಿತ್ತು. ಯಡಿಯೂರಪ್ಪ ಅವರು ಮೂರನೇ ಬಾರಿ ಮುಖ್ಯಮಂತ್ರಿಯಾದರೂ ಆ ಚರ್ಚೆ ಅಧಿಕೃತವಾಗಿ ಘೋಷಣೆಯಾಗಲೇ ಇಲ್ಲ ಎಂಬ ಬೇಸರ ಹಿರಿಯ ಕ್ರೀಡಾಪಟುಗಳದ್ದು.

ಕ್ರೀಡಾಂಗಣದಲ್ಲಿರುವ ಜಿಲ್ಲಾ ಕ್ರೀಡಾ ಶಾಲೆಯಲ್ಲಿ ಸುಮಾರು 40 ವಿದ್ಯಾರ್ಥಿಗಳು ಇರುತ್ತಾರೆ. ಅವರೆಲ್ಲ ನಿತ್ಯ ತಾಲೀಮಿಗಾಗಿ ಇದೇ ಕ್ರೀಡಾಂಗಣ ಬಳಸುತ್ತಾರೆ. ಆದರೆ ಟ್ರ್ಯಾಕ್‌ ನಿರ್ವಹಣೆ ಇಲ್ಲ. ಮಳೆ ಬಂದಾಗ ಬ್ಯಾಸ್ಕೆಟ್‌ ಬಾಲ್‌ ಅಂಕಣದಲ್ಲಿ ಆಡಲು ಆಗುವುದಿಲ್ಲ. ಕಬಡ್ಡಿ, ವಾಲಿಬಾಲ್‌, ಕೊಕ್ಕೊ, ಥ್ರೋಬಾಲ್‌ ಆಟಗಳನ್ನು ಆಡಲು ಸುಸಜ್ಜಿತ ಅಂಕಣಗಳೇ ಇಲ್ಲ!

ಈ ಹಿಂದೆ ಒಳಾಂಗಣ ಕ್ರೀಡಾಂಗಣ ನಿರ್ಮಿಸುವಾಗ ಅದನ್ನು ವಾಲಿಬಾಲ್, ಬ್ಯಾಸ್ಕೆಟ್‌ ಬಾಲ್‌ ಕ್ರೀಡೆಗಳಿಗೂ ಬಳಕೆಯಾಗುವಂತೆ ನಿರ್ಮಿಸುವಂತೆ ಕ್ರೀಡಾಪಟುಗಳು ಮನವಿ ಮಾಡಿದ್ದರು. ಅದು ಕೈಗೂಡಲೇ ಇಲ್ಲ. ಪ್ರಸ್ತುತ, ಆ ಕ್ರೀಡಾಂಗಣ ಕ್ರೀಡಾಪಟುಗಳ ಬದಲು ಬರೀ ಅಧಿಕಾರಿ ವರ್ಗದವರ ಷಟಲ್‌ ಆಟಕ್ಕೆ ಅನುಕೂಲವಾಗಿದೆ ಎಂಬ ಬೇಸರ ಕೇಳಿಬರುತ್ತದೆ.

ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬ ಬೇಸರ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟು ಮಾಡಿದೆ. ಬಳಸಲು ಬಾರದಷ್ಟು ಹಾಳಾಗಿದ್ದ ಶೌಚಾಲಯ ಸಾರ್ವಜನಿಕರ ಆಕ್ರೋಶದ ಫಲವಾಗಿ ಇತ್ತೀಚೆಗೆ ನವೀಕರಣಗೊಂಡಿದೆ.

ಇದು ಜಿಲ್ಲಾ ಕ್ರೀಡಾಂಗಣದ ಚಿತ್ರಣ ಮಾತ್ರವಲ್ಲ ಗೌರಿಬಿದನೂರು, ಚಿಂತಾಮಣಿ ಹೊರತುಪಡಿಸಿದರೆ ಉಳಿದೆಲ್ಲ ತಾಲ್ಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳು ಅಧ್ವಾನ ಸ್ಥಿತಿಯಲ್ಲಿವ ಎನ್ನುತ್ತಾರೆ ಕ್ರೀಡಾಪಟಗಳು.

ಒಂದೆಡೆ ಕ್ರೀಡಾಪಟುಗಳು ಕ್ರೀಡಾಂಗಣದ ಅಭಿವೃದ್ಧಿಯಾಗುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕಾರ್ಯಕ್ಕೆ ಬರುವ ಅನುದಾನ ಸರಿಯಾಗಿ ಬಳಕೆ ಮಾಡಿಕೊಳ್ಳದೆ, ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತ ಬಂದಿವೆ.

ಈ ಬಗ್ಗೆ ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಟಿ.ಜಯಲಕ್ಷ್ಮಿ ಅವರನ್ನು ವಿಚಾರಿಸಿದರೆ, ‘ಖೇಲೊ ಇಂಡಿಯಾ ಯೋಜನೆ ಅಡಿ ಸಿಂಥೆಟಿಕ್ ಟ್ರ್ಯಾಕ್ ಸಮೇತ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ, ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಹೇಳಿದರು.

***
ನಿರ್ವಹಣೆ ಕಾಣದ ಜಿಮ್

ಜಿಲ್ಲಾ ಕ್ರೀಡಾಂಗಣದಲ್ಲಿ ಸಣ್ಣ ಕೋಣೆಯೊಂದರಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ನಿರ್ವಹಿಸುವ ಜಿಮ್‌ ಇಲಾಖೆಯ ಅವ್ಯವಸ್ಥೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ. ಬಳಸಲಾಗದಷ್ಟು ಹಳತಾದ ಉಪಕರಣಗಳು, ಕಿತ್ತು ಹರಿದು ಹೋದ ಕವರ್‌ಗಳು ಅವ್ಯವಸ್ಥೆಯ ಆಗರವಾದ ಆ ಜಿಮ್‌ ನೋಡಿ ಕ್ರೀಡಾಪಟುಗಳು ಅದನ್ನು ಬಳಸುವುದನ್ನೇ ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.