ADVERTISEMENT

ಸಂಚಾರಿ ಪಶು ಚಿಕಿತ್ಸಾಲಯಕ್ಕಿಲ್ಲ ಸಿಬ್ಬಂದಿ

ಅಂತಿಮವಾಗದ ಟೆಂಡರ್; ತಾಲ್ಲೂಕು ಪಶು ಇಲಾಖೆ ಆವರಣದಲ್ಲಿ ವಾಹನಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 19 ಆಗಸ್ಟ್ 2022, 4:32 IST
Last Updated 19 ಆಗಸ್ಟ್ 2022, 4:32 IST
ಸಂಚಾರಿ ಪಶು ಚಿಕಿತ್ಸಾಲಯ
ಸಂಚಾರಿ ಪಶು ಚಿಕಿತ್ಸಾಲಯ   

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 275 ಸಂಚಾರಿ ಪಶು ಚಿಕಿತ್ಸಾಲಯಗಳ ಸೌಲಭ್ಯವನ್ನು ನೀಡಿದೆ. ಈ ಯೋಜನೆಯಡಿ ಜಿಲ್ಲೆಗೆ 8 ಸಂಚಾರಿ ಪಶು ಚಿಕಿತ್ಸಾಲಯಗಳು ದೊರೆತಿವೆ.

ಕಳೆದಮೇ 7ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಚಿಕಿತ್ಸಾಲಯಗಳಿಗೆ ಚಾಲನೆ ನೀಡಿದ್ದರು. ಆದರೆ ಸಿಬ್ಬಂದಿ ನೇಮಿಸದ ಕಾರಣ ಸಂಚಾರಿಪಶು ಚಿಕಿತ್ಸಾಲಯಗಳು ಆಯಾ ತಾಲ್ಲೂಕು ಪಶು ಆಸ್ಪತ್ರೆಗಳ ಆವರಣದಲ್ಲಿ ನಿಂತಿವೆ.ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆಗೆ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಇನ್ನೂ ಸರ್ಕಾರ ಹುದ್ದೆಗಳ ಭರ್ತಿಗೆ ಮನಸ್ಸು ಮಾಡಿಲ್ಲ. ಈ ನಡುವೆ ಸಂಚಾರಿ ಪಶು ಚಿಕಿತ್ಸಾಲಯದ ವಾಹನಗಳಿಗೂ ಸಿಬ್ಬಂದಿ ನೀಡಲ್ಲ.

ಒಂದು ಸಂಚಾರಿ ಪಶು ಚಿಕಿತ್ಸಾಲಯಕ್ಕೆ ಒಬ್ಬರು ವೈದ್ಯರು,ಒಬ್ಬ ಪಶು ವೈದ್ಯಕೀಯ ಸಹಾಯಕ, ಚಾಲಕ ಕಂ ಅಟೆಂಡರ್ ಹುದ್ದೆಗಳು ಮಂಜೂರಾಗಿವೆ. ಆ ಪ್ರಕಾರ ಜಿಲ್ಲೆಗೆ 24 ಮಂದಿ ಸಿಬ್ಬಂದಿ ಅಗತ್ಯವಿದೆ. ಸಿಬ್ಬಂದಿ ನೇಮಕವಾಗದ ಕಾರಣ ಮೂರು ತಿಂಗಳಿನಿಂದ ವಾಹನಗಳು ಇಲಾಖೆಯ ತಾಲ್ಲೂಕು ಆಸ್ಪತ್ರೆಗಳ ಆವರಣದಲ್ಲಿ ನಿಂತಿವೆ.

ADVERTISEMENT

ತಲಾ ಒಂದು ಲಕ್ಷರಾಸುಗಳಿಗೆ ಒಂದರಂತೆ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಸರ್ಕಾರ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ಲಕ್ಷ ಜಾನುವಾರುಗಳು ಮತ್ತು 8 ಲಕ್ಷ ಕುರಿ, ಮೇಕೆ ಮತ್ತಿತರ ಪ್ರಾಣಿಗಳು ಇವೆ. ರಾಜ್ಯದಲ್ಲಿ ಜಾನುವಾರುಗಳು ಮತ್ತು ಕುರಿ, ಮೇಕೆಗಳು ಹೆಚ್ಚಿರುವ ಜಿಲ್ಲೆಗಳನ್ನು ಪಟ್ಟಿ ಮಾಡಿದರೆ ಚಿಕ್ಕಬಳ್ಳಾಪುರವೂ ಸಹ ಪ್ರಮುಖವಾಗಿದೆ.

ಏನಿದು ಯೋಜನೆ: ಪಶುಗಳು, ಕರಿ, ಮೇಕೆ ಮತ್ತಿತರ ಪ್ರಾಣಿಗಳಿಗೆ ಚಿಕಿತ್ಸೆ, ಕೃತಕ ಗರ್ಭಧಾರಣೆಯ ಕೆಲಸಗಳಿಗೆ ರೈತರು ತಮ್ಮ ಜಾನುವಾರುಗಳನ್ನು ಪಶು ಚಿಕಿತ್ಸಾಲಯಗಳಿಗೆ ಕೊಂಡೊಯ್ಯಬೇಕಿಲ್ಲ. ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಪಶು ವೈದ್ಯರು, ತಜ್ಞ ಸಿಬ್ಬಂದಿ, ಉಪಕರಣ, ಔಷಧಿಯನ್ನು ಹೊತ್ತ ಸಂಚಾರಿ ಚಿಕಿತ್ಸಾಲಯವೇ ಮನೆ ಬಾಗಿಲಿಗೆ ಬರಲಿದೆ.

ಸುಸಜ್ಜಿತ ವಾಹನಗಳನ್ನು ಸಂಚಾರಿ ಪಶು ಚಿಕಿತ್ಸಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಹವಾನಿಯಂತ್ರಣ ವ್ಯವಸ್ಥೆ, ಫ್ಯಾನ್‌, ಬಿಸಿ ನೀರು ಕಾಯಿಸಲು ಗೀಸರ್‌, ಪ್ರಾಣಿಗಳ ದೇಹದ ತೂಕ ಮಾಪನಕ್ಕೆ ಯಂತ್ರ, ವೈದ್ಯಕೀಯ ಪರಿಕರಗಳನ್ನು ಇರಿಸುವ ಪೆಟ್ಟಿಗೆ, ಔಷಧಿಗಳನ್ನು ಇರಿಸಲು ಫ್ರಿಡ್ಜ್‌, ಸಿಬ್ಬಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಣ್ಣ ಪ್ರಾಣಿಗಳನ್ನು ವಾಹನದೊಳಕ್ಕೆ ಹತ್ತಿಸಿ, ಅಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡಲು ಸ್ಥಳಾವಕಾಶವಿದೆ.

ಹೀಗೆ ಸುಸಜ್ಜಿತವಾದ ವ್ಯವಸ್ಥೆಗಳನ್ನು ಸರ್ಕಾರ ಮಂಜೂರು ಮಾಡಿದ್ದರೂ ಸಿಬ್ಬಂದಿ ನೀಡದ ಕಾರಣ ಚಿಕಿತ್ಸಾಲಯಗಳು ಕಾರ್ಯಾರಂಭವಾಗಿಲ್ಲ.

ಜಿಲ್ಲೆಗೆ ಎರಡು ವಾಹನ ಕಡಿತ

ರಾಜ್ಯದಲ್ಲಿ ಗರಿಷ್ಠ ಎನ್ನುವಂತೆ ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತಲಾ 10 ಸಂಚಾರಿಪಶು ಚಿಕಿತ್ಸಾಲಯಗಳನ್ನು ನೀಡಲಾಗಿತ್ತು. ಹೊಸದಾಗಿ ರಚನೆಯಾಗಿರುವ ಮಂಚೇನಹಳ್ಳಿ ಮತ್ತು ಚೇಳೂರು ತಾಲ್ಲೂಕು ಕೇಂದ್ರಗಳು ಸೇರಿದಂತೆ ಜಿಲ್ಲೆಯ 8 ತಾಲ್ಲೂಕುಗಳಿಗೆ ತಲಾ ಒಂದು,ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರು ಹೋಬಳಿ ಕೇಂದ್ರಗಳಿಗೆ ತಲಾ ಒಂದುಸಂಚಾರಿ ಚಿಕಿತ್ಸಾಲಯ ನೀಡಲು ಸರ್ಕಾರ ಆಲೋಚಿಸಿತ್ತು. ಆ ಪ್ರಕಾರ 10 ವಾಹನಗಳು ಜಿಲ್ಲೆಗೆ ನಿಗದಿ ಆಗಿದ್ದವು. ಆದರೆ ಅಂತಿಮವಾಗಿ ಇದರಲ್ಲಿ ಎರಡು ವಾಹನಗಳು ಖೋತಾ ಆಗಿವೆ. ಮಲೆನಾಡು ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ವಾಹನಗಳನ್ನು ನೀಡಲಾಯಿತು. ಈ ಕಾರಣದಿಂದ ಜಿಲ್ಲೆಗೆ ಬಂದಿದ್ದ ಎರಡು ವಾಹನಗಳು ಅತ್ತ ಮುಖ ಮಾಡಿದವು.

‘ಟೆಂಡರ್ ಹಂತದಲ್ಲಿ ಸಿಬ್ಬಂದಿ ನೇಮಕ’

ಹೊರಗುತ್ತಿಗೆ ಆಧಾರದಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಮ್ಮೆ ಟೆಂಡರ್ ಕರೆದಾಗ ಒಬ್ಬರು ಮಾತ್ರ ಬಿಡ್ ಮಾಡಿದ್ದರಂತೆ. ಈಗ ಮತ್ತೊಮ್ಮೆ ಟೆಂಡ್ ಕರೆಯಲಾಗಿದೆ ಎನ್ನವ ಮಾಹಿತಿ ಇದೆ. ಟೆಂಡರ್ ಪ್ರಕ್ರಿಯೆಗಳು ಪೂರ್ಣವಾದ ತರುವಾಯ ಸಿಬ್ಬಂದಿ ನೇಮಕವಾಗುವರು’ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಾಹನಗಳು ನೋಂದಣಿ ಆಗಿದ್ದು ಆಯಾ ತಾಲ್ಲೂಕು ಪಶುಪಾಲನಾ ಇಲಾಖೆಯ ಕಚೇರಿಯಲ್ಲಿ ಇವೆ. ಸಿಬ್ಬಂದಿ ನೇಮಕವಾದ ತಕ್ಷಣ ಕಾರ್ಯಾಚರಣೆ ನಡೆಸಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.