ADVERTISEMENT

ಕೆಳಸೇತುವೆ ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಅಗಲಗುರ್ಕಿ ರಸ್ತೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ನಡೆಸಿದ ಕಾಮಗಾರಿ ಬಗ್ಗೆ ಶಾಸಕ ಡಾ.ಕೆ.ಸುಧಾಕರ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 15:26 IST
Last Updated 21 ಡಿಸೆಂಬರ್ 2019, 15:26 IST
ಶಾಸಕ ಡಾ.ಕೆ.ಸುಧಾಕರ್ ಅವರು ಅಗಲಗುರ್ಕಿ ರಸ್ತೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ನಡೆಸಿದ ಕೆಳ ಸೇತುವೆ ಕಾಮಗಾರಿ ವೀಕ್ಷಿಸಿದರು.
ಶಾಸಕ ಡಾ.ಕೆ.ಸುಧಾಕರ್ ಅವರು ಅಗಲಗುರ್ಕಿ ರಸ್ತೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ನಡೆಸಿದ ಕೆಳ ಸೇತುವೆ ಕಾಮಗಾರಿ ವೀಕ್ಷಿಸಿದರು.   

ಚಿಕ್ಕಬಳ್ಳಾಪುರ: ಅಗಲಗುರ್ಕಿ ರಸ್ತೆಯಲ್ಲಿ ಕೇಂದ್ರ ರೈಲ್ವೆ ಇಲಾಖೆಯಿಂದ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಶಾಸಕ ಡಾ.ಕೆ.ಸುಧಾಕರ್ ಅವರು ಅಸಮಾಧಾನ ವ್ಯಕ್ತಪಡಿಸುವ ಜತೆಗೆ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಕಾಮಗಾರಿ ಮೇಲ್ವಿಚಾರಣೆ ವಹಿಸಿದ ಎಂಜಿನಿಯರ್‌ ಅವರಿಗೆ ಸೂಚನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಅಗಲಗುರ್ಕಿ ಮುಖ್ಯ ರಸ್ತೆಗೆ ಬದಲಾಗಿ ತಿರುವು ಪಡೆದು ಬೇರೆ ದಿಕ್ಕಿನಲ್ಲಿ ಕೆಳಸೇತುವೆ ಕಾಮಗಾರಿಯನ್ನು ನಡೆಸಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ತೊಂದರೆಯಾಗಲಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಪರಿಶೀಲನೆಗೆ ಬಂದಿರುವೆ. ಈ ಕಾಮಗಾರಿಯಿಂದ ಮೂರು ಪಟ್ಟು ಅನುದಾನ ಹೆಚ್ಚು ಬಳಕೆಯಾಗಲಿದೆ. ಜತೆಗೆ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಹೀಗಾಗಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿರುವೆ’ ಎಂದು ಹೇಳಿದರು.

‘ವೈಜ್ಞಾನಿಕವಾಗಿ ಕೆಳಸೇತುವೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಇಲ್ಲದಿದ್ದರೆ ಕೆಳಸೇತುವೆ ನಿರ್ಮಿಸಿಯೂ ಉಪಯೋಗವಿಲ್ಲದಂತಾಗುತ್ತದೆ. ಆದ್ದರಿಂದ ಈ ವಿಚಾರವನ್ನು ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಅವರ ಗಮನಕ್ಕೆ ತಂದು ತಕ್ಷಣ ನಿಲ್ಲಿಸಬೇಕು ಎಂದು ಹೇಳಿರುವೆ’ ಎಂದರು.

ADVERTISEMENT

ಆದಿಚುಂಚನಗಿರಿಯ ಚಿಕ್ಕಬಳ್ಳಾಪುರದ ಶಾಖಾ ಮಠಾಧೀಶ ಮಂಗಳನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶಿವರಾಮರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಮುಖಂಡರಾದ ಗರಿಗರೆಡ್ಡಿ, ರಾಮಾಂಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.