ADVERTISEMENT

ಹೈನೋದ್ಯಮ ಪ್ರೋತ್ಸಾಹಿಸುವುದೇ ನಮ್ಮ ಗುರಿ

ರಾಮಚಂದ್ರ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಅಭಿನಂದನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 16:30 IST
Last Updated 11 ನವೆಂಬರ್ 2019, 16:30 IST
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು.   

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪಶುಭಾಗ್ಯ ಕಾರ್ಯಕ್ರಮದ ಮೂಲಕ ರೈತರಿಗೆ ಉಚಿತವಾಗಿ ಸೀಮೆಹಸುಗಳನ್ನು ನೀಡಿ ಹೈನೋದ್ಯಮಕ್ಕೆ ಒತ್ತು ನೀಡಲು ಶ್ರಮಿಸಿದ್ದರು. ಆದರೆ, ಬಿಜೆಪಿ ಸರ್ಕಾರದಲ್ಲಿ ಈ ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ನಂದಿ ಆಂಜನಪ್ಪ ಹೇಳಿದರು.

ತಾಲ್ಲೂಕಿನ ರಾಮಚಂದ್ರ ಹೊಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜಯ ಗಳಿಸಿದ ನೂತನ ನಿರ್ದೇಶಕರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಶುಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಸಾವಿರಾರು ಬಡ ಕುಟುಂಬಗಳು ಹೈನುಗಾರಿಕೆ ಮೂಲಕ ಜೀವನ ಸಾಗಿಸಲು ಅನುಕೂಲವಾಯಿತು. ಆದರೆ, ಬಿಜೆಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಪಶುಭಾಗ್ಯ ಯೋಜನೆಯನ್ನು ಕೈ ಬಿಟ್ಟರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಮಳೆ ಅಭಾವದಿಂದ ಜನ ಕಂಗಾಲಾಗಿದ್ದು, ವ್ಯವಸಾಯಕ್ಕೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 1,500 ಅಡಿಯಷ್ಟು ಕೊಳವೆಬಾವಿ ಕೊರೆಸಿದರೂ ಸಹ ನೀರು ಬರುತ್ತಿಲ್ಲ. ಹೀಗಾಗಿ, ಇವತ್ತು ಜನರು ಹೆಚ್ಚಾಗಿ ಹೈನೋದ್ಯಮದ ಮೇಲೆ ಅವಲಂಬಿತವಾಗಿದ್ದಾರೆ. ಮುಂಬರುವ ದಿನಗಳಲ್ಲಿ ಹೈನೋದ್ಯಮ ಪ್ರೋತ್ಸಾಹಿಸುವುದೇ ನಮ್ಮ ಗುರಿಯಾಗಿದೆ’ ಎಂದರು.

ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ನಾರಾಯಣಸ್ವಾಮಿ, ಹನುಮಂತರಾಯಪ್ಪ, ಗಂಗಾಧರ್, ಮಂಜುನಾಥ್, ಕೃಷ್ಣಪ್ಪ,ಶ್ರೀನಿವಾಸ್, ರಾಜಣ್ಣ, ಸೊಣ್ಣಮ್ಮ, ತಿಮ್ಮಣ್ಣ, ಪಾಪಣ್ಣ, ಮುನಿವೆಂಕಟಪ್ಪ ಮತ್ತು ಪ್ರಜಮ್ಮ ಅವರನ್ನು ಅಭಿನಂದಿಸಲಾಯಿತು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಮುಖಂಡರಾದ ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ರಮೇಶ್, ತಾಲ್ಲೂ ಪಂಚಾಯಿತಿ ಸದಸ್ಯ ಸುಬ್ಬರಾಯಪ್ಪ, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಮುಖಂಡರಾದ ಮುನೇಗೌಡ, ಅಂಗರೇಖನಹಳ್ಳಿ ರವಿ, ನುಗತಹಳ್ಳಿ ರವಿ, ವಿನಯ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.