ಚಿಂತಾಮಣಿ: ತಾಲ್ಲೂಕಿನಲ್ಲಿ ಸಮಾಪನಗೊಂಡಿರುವ ಪಿ.ಎಲ್.ಡಿ ಬ್ಯಾಂಕಿನ ಪುನರ್ ಸ್ಥಾಪನೆಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಎನ್.ನಾಗಿರೆಡ್ಡಿ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಬ್ಯಾಂಕ್ ಸಮಾಪನೆ ಆಗಿರುವುದರಿಂದ ರೈತರು ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಪಿ.ಎಲ್.ಡಿ ಬ್ಯಾಂಕಿನ ಪುನರುದ್ಧಾರಕ್ಕಾಗಿ ಕ್ರಮ ಕೈಗೊಂಡಿದ್ದರು. ಅದರೆ ಅವರ ಸೋಲಿನಿಂದಾಗಿ ಎಲ್ಲ ಪ್ರಯತ್ನಗಳು ಸ್ಥಗಿತಗೊಂಡವು. ಅದಾಗ್ಯೂ ಮತ್ತೆ ಆರಂಭಕ್ಕೆ ಹೋರಾಟ ಮುಂದು ವರಿಯಲಿದೆ ಎಂದು ಅವರು ತಿಳಿಸಿದರು.
ರೈತರು, ಕೂಲಿ ಕಾರ್ಮಿಕರು, ಸ್ತ್ರೀಶಕ್ತಿ ಸಂಘಗಳು, ಬೀದಿ ಬದಿಯ ಹಾಗೂ ಸಣ್ಣ ವ್ಯಾಪಾರಿಗಳನ್ನು ಖಾಸಗಿ ಲೇವಾದೇವಿಗಾರರಿಂದ ಬಿಡುಗಡೆ ಗೊಳಿಸಲಾಗುವುದು. ಬ್ಯಾಂಕಿನ ನಿಯಮಗಳಂತೆ ಎಲ್ಲರಿಗೂ ಸರಳ ಮತ್ತು ಸುಲಭವಾಗಿ ಸಾಲ ನೀಡಲಾಗುವುದು ಎಂದರು.
ಎಪಿಎಂಸಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಸಹಕಾರಿ ಕ್ಷೇತ್ರ ಉತ್ತರ ಕರ್ನಾಟಕದಂತೆ ಇಲ್ಲಿ ಬೆಳೆಯಲಿಲ್ಲ. ಅವಿಭಜಿತ ಕೋಲಾರ ಜಿಲ್ಲೆಯು ಸಹಕಾರಿ ಕ್ಷೇತ್ರದಲ್ಲಿ ಹಿಂದುಳಿದಿದೆ. ತಾಲ್ಲೂಕಿನಲ್ಲಿ ಹಲವಾರು ವ್ಯವಸಾಯ ಸೇವಾ ಸಹಕಾರ ಸಂಘಗಳು, ರೇಷ್ಮೆ ಬೆಳೆಗಾರರ ಸಹಕಾರ ಸಂಘಗಳು ಸಮಾಪನಗೊಂಡಿವೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಶಿವಣ್ಣ ಮಾತನಾಡಿ, ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಅನ್ನು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಉನ್ನತ ಸ್ಥಿತಿಗೆ ತಂದಿದ್ದಾರೆ. ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದು, ಮತ್ತಷ್ಟು ಅಭಿವೃದ್ಧಿಪಡಿಸಲಿ. ಸಾಲ ಪಡೆದವರು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಿದರು.
ಬನಹಳ್ಳಿ ನಂಜುಂಡಗೌಡ ಮಾತನಾಡಿದರು. ಟಿಎಪಿಸಿಎಎಸ್ ಮಾಜಿ ಅಧ್ಯಕ್ಷ ಚಂದ್ರಪ್ಪ, ವ್ಯವಸಾಯ ಸೇವಾ ಸಂಘಗಳ ಅಧ್ಯಕ್ಷರಾದ ಬೊಮ್ಮೆಕಲ್ ಚಂದ್ರಪ್ಪ, ಹುಲುಗುಮ್ಮನಹಳ್ಳಿ ಗೋವಿಂದರೆಡ್ಡಿ, ನಂದಿಗಾನಹಳ್ಳಿ ರಘುನಾಥರೆಡ್ಡಿ, ಟಿ.ಗೊಲ್ಲಹಳ್ಳಿ ಡಿ.ಸಿ.ಚೌಡರೆಡ್ಡಿ, ಮುಖಂಡರಾದ ಮುನಿನಾರಾಯಣಪ್ಪ, ನಾರಾಯಣಸ್ವಾಮಿ, ಮಂಜುನಾಥರೆಡ್ಡಿ, ಕೃಷ್ಣಪ್ಪ, ಆಂಜನೇಯರೆಡ್ಡಿ, ನಾರಾಯಣರೆಡ್ಡಿ, ವಿ.ಕೆಂಪರೆಡ್ಡಿ, ಕೃಷ್ಣಾರೆಡ್ಡಿ, ಎನ್.ಅರುಣ್‌ಕುಮಾರ್, ಎಸ್.ರವೀಂದ್ರ, ಎನ್.ಶ್ರೀರಾಮರೆಡ್ಡಿ, ವೆಂಕಟರಾಮರೆಡ್ಡಿ, ಅಶ್ವತ್ಥಪ್ಪ, ಮುನಿರೆಡ್ಡಿ, ರಮೇಶ್, ಕೃಷ್ಣಾರೆಡ್ಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.