ADVERTISEMENT

ಚಿಕ್ಕಬಳ್ಳಾಪುರ: ಜಲ ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ

ಅಂತರ್ಜಲ ಚೇತನ ಯೋಜನೆ ಅನುಷ್ಠಾನ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 14:35 IST
Last Updated 14 ಮೇ 2020, 14:35 IST
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ’ಕಲ್ಯಾಣಿ, ಗೋಕುಂಟೆ, ಕೆರೆ, ನದಿಗಳನ್ನು ಪುನಃಶ್ಚೇತನಗೊಳಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚು ಮಾಡಲು ಜಿಲ್ಲಾದ್ಯಂತ ಸುಮಾರು ಸಾವಿರ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗುತ್ತದೆ‘ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಅಂತರ್ಜಲ ಚೇತನ ಯೋಜನೆ ಜಾರಿಗೊಳಿಸಲು ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.

’ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಜಲ ಸಂರಕ್ಷಣೆ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಲಾಗುತ್ತದೆ‘ ಎಂದು ಹೇಳಿದರು.

ADVERTISEMENT

’ಮೇ 19 ರಂದು ಜಿಲ್ಲೆಗೆ ರಾಜ್ಯದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಲಿದ್ದಾರೆ‘ ಎಂದರು.

’ಈ ಯೋಜನೆ ಜಿಲ್ಲೆಯಲ್ಲಿ ನೀರು ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಗ್ರಾಮೀಣ ಭಾಗದ ಬಡ ಜನರಿಗೆ ಊರಿನಲ್ಲೇ ಕೆಲಸ ದೊರಕಿಸಿಕೊಡಲಾಗುತ್ತದೆ. ಜಿಲ್ಲೆಯ ಜಲ ಮೂಲಗಳಾದ ಕೆರೆ, ಕುಂಟೆ, ಬದು ನಿರ್ಮಾಣ, ಗೋಕುಂಟೆಗಳು ಹಾಗೂ ಪೋಷಕ ಕಾಲುವೆಗಳ ನಿರ್ಮಾಣ ಸೇರಿದಂತೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜಲ ಸಂವರ್ಧನೆಯನ್ನು ಹೆಚ್ಚು ಮಾಡಲಾಗುತ್ತದೆ‘ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನೋಮೇಶ್‍ಕುಮಾರ್ ಮುಖ್ಯ ಯೋಜನಾಧಿಕಾರಿ ಮಾಧುರಾಮ್, ಯೋಜನಾ ನಿರ್ದೇಶಕ ಗಿರಿಜಾ ಶಂಕರ್, ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.