ADVERTISEMENT

ಆಸ್ತಿ ತೆರಿಗೆ ವಸೂಲಾತಿ; ಚಿಕ್ಕಬಳ್ಳಾಪುರ ರಾಜ್ಯಕ್ಕೆ ಪ್ರಥಮ 

ಸೆಪ್ಟೆಂಬರ್ ಅಂತ್ಯಕ್ಕೆ ₹ 29.81 ಕೋಟಿ ತೆರಿಗೆ ವಸೂಲಿ ಗುರಿ; ₹ 16.35 ಕೋಟಿ ವಸೂಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:51 IST
Last Updated 5 ಅಕ್ಟೋಬರ್ 2025, 6:51 IST
ನೇರ ತೆರಿಗೆ
ನೇರ ತೆರಿಗೆ   

ಚಿಕ್ಕಬಳ್ಳಾಪುರ: ತೆರಿಗೆ ವಸೂಲಾತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ತೆರಿಗೆ ವಸೂಲಾತಿಯು ಆಯಾ ಗ್ರಾಮ ಪಂಚಾಯಿತಿಗಳ ಪ್ರಾಥಮಿಕ ಕರ್ತವ್ಯ.

ಈ ದಿಸೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಒಟ್ಟು ₹ 29.81 ಕೋಟಿ ತೆರಿಗೆ ವಸೂಲಾತಿ ಗುರಿ ಇತ್ತು. ಈ ಪೈಕಿ ₹ 16.35 ಕೋಟಿ ವಸೂಲಾತಿ ಮಾಡಿ ಇಲ್ಲಿಯವರೆಗೆ ಒಟ್ಟು 61,200 ರಶೀದಿಗಳನ್ನು ಸೃಜಿಸಲಾಗಿದೆ.

ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಮೊದಲ ಸ್ಥಾನ ಪಡೆದಿದೆ.

ADVERTISEMENT

2025-26ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು ₹ 29.81 ಕೋಟಿ ತೆರಿಗೆ ವಸೂಲಿ ಮಾಡಬೇಕಾಗಿತ್ತು. ಈ ಪೈಕಿ ₹ 16.35 ಕೋಟಿ ವಸೂಲಿ ಮಾಡುವ ಮೂಲಕ ಶೇ 54.82 ಪ್ರಗತಿ ಸಾಧಿಸಲಾಗಿದೆ. 

ಉಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ 54 ರಷ್ಟು ಪ್ರಗತಿ ಸಾಧಿಸಿ 2ನೇ ಸ್ಥಾನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯು ಶೇ 51.45 ರಷ್ಟು ತೆರಿಗೆ ವಸೂಲಿ ಮಾಡುವ ಮೂಲಕ 3ನೇ ಸ್ಥಾನ ಪಡೆದಿದೆ.

ತೆರಿಗೆ ವಸೂಲಾತಿ ಹಣವನ್ನು ಗ್ರಾಮ ಪಂಚಾಯಿತಿಗಳು ಸ್ವಂತ ನಿಧಿ ಎಂದು ಪರಿಗಣಿಸಿ ಸ್ಥಳೀಯವಾಗಿ ಅಭಿವೃದ್ಧಿ ಕೈಗೊಳ್ಳಲು ಹಾಗೂ ಆಡಳಿತಾತ್ಮಕ ವೆಚ್ಚಗಳಿಗಾಗಿ ಬಳಸಿಕೊಳ್ಳುತ್ತವೆ. ಇದರಿಂದ ಗ್ರಾಮೀಣಾಭಿವೃದ್ಧಿಯ ಜೊತೆಗೆ ಪಂಚಾಯತ್ ಸಶಕ್ತಿಕರಣ ಸಾಧಿಸಲು ಸಾಧ್ಯವಾಗುತ್ತದೆ. ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಹಕಾರಿ ಆಗುತ್ತದೆ

ಸಾರ್ಜನಿಕರು ತಮ್ಮ ಬಾಕಿ ತೆರಿಗೆಯನ್ನು ಖುದ್ದಾಗಿ ಗ್ರಾಮ ಪಂಚಾಯತಿ ಅಥವಾ ಆನ್‌ಲೈನ್ https://bsk.karnataka.gov.in/ UPI/Google pay/ PhonePe/Paytm ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತೆರಿಗೆ ವಸೂಲಾತಿ ಮೇಲ್ವಿಚಾರಣೆ ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ತೆರಿಗೆ ವಸೂಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ವಾರಕ್ಕೆ ಒಮ್ಮೆ ವಿಡಿಯೊ ಸಂವಾದ ಮೂಲಕ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತಿದೆ. ಕರವಸೂಲಿಗಾರ, ಬಿಲ್ ಕಲೆಕ್ಟರ್ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಂದ ತೆರಿಗೆ ಸಂಗ್ರಹಿಸಲಾಗುತ್ತಿದೆ.

ತೆರಿಗೆ ಸಂಗ್ರಹಣೆ ಜೊತೆಗೆ ನಾಗರಿಕರು ತಮ್ಮ ಆಸ್ತಿಯ ವಿವರಗಳನ್ನು ಪರಿಶೀಲಿಸಿಕೊಂಡು ಇ-ಸ್ವತ್ತು ದಾಖಲಾತಿ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಪಂಚಾಯಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.