ADVERTISEMENT

ಪೊಲೀಸರು ರೈತರ ನಡುವೆ ಮಾತಿನ ಚಕಮಕಿ

ಹಮಾಲಿಗಳಿಂದ ರೈತರ ಮೇಲೆ ಹಲ್ಲೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 4:29 IST
Last Updated 5 ಆಗಸ್ಟ್ 2025, 4:29 IST

ಚಿಕ್ಕಬಳ್ಳಾಪುರ: ಇಲ್ಲಿನ ಹೂವಿನ ಮಾರುಕಟ್ಟೆಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿರುವ ಹಮಾಲಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ರೈತರು ಸೋಮವಾರ ಪ್ರತಿಭಟಿಸಿದರು. 

ಹೀಗೆ ‌ಏಕಾಏಕಿ ಪ್ರತಿಭಟನೆಗೆ ಇಳಿದ ಕಾರಣ ಗೊಂದಲ ಮೂಡಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ಉಂಟಾಯಿತು.

ಹಾರೋಬಂಡೆ ಗ್ರಾಮದ ರೈತ ಮಂಜುನಾಥ್ ಗುಲಾಬಿ ಹೂವಿನೊಂದಿಗೆ ನಗರ ಹೊರವಲಯದ ಸಿವಿವಿ ಕ್ಯಾಂಪಸ್ ಬಳಿಯ ಹೂವಿನ ಮಾರುಕಟ್ಟೆಗೆ ಬಂದಿದ್ದರು. ಯಾವಾಗಲೂ ಜನ ಜಂಗುಳಿಯಿಂದ ಕೂಡಿರುವ ಹೂವಿನ ಮಾರುಕಟ್ಟೆಯಲ್ಲಿ ಗೂಡ್ಸ್ ವಾಹನ ಹಿಂದಕ್ಕೆ ಬಂದು ಮಂಜುನಾಥ್ ಅವರ ಬೈಕ್‌ಗೆ ಡಿಕ್ಕಿಯಾಗಿದೆ.

ADVERTISEMENT

ಇದರಿಂದ ಮಂಜುನಾಥ್ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇದರಿಂದ ವಾಹನ ಚಾಲಕ ಮತ್ತು ಮಂಜುನಾಥ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ವಾಹನ ಚಾಲಕ ಹಾಗೂ ಹಮಾಲಿ ಕೆಲಸಗಾರರು ಸೇರಿ ರೈತ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೈತರು ಆರೋಪಿಸಿದರು.

ಮಂಜುನಾಥ್ ಮೇಲೆ ಹಲ್ಲೆ ನಡೆಸಿದ ಚಾಲಕ ವಾಹನ ಸ್ಥಳದಲ್ಲಿಯೇ ಬಿಟ್ಟು ಪರಾರಿ ಆಗಿದ್ದಾನೆ. ವಿಷಯ ತಿಳಿದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಹಲ್ಲೆ ಮಾಡಿದ ಆರೋಪಿಗಳನ್ನು ಸ್ಥಳಕ್ಕೆ ಕರೆಸುವಂತೆ ರೈತರು ಒತ್ತಾಯಿಸಿದರು. ಕೊನೆಗೆ ಆರೋಪಿಗಳ ವಿರುದ್ಧ ಕ್ರಮ ಜರಗಿಸುವುದಾಗಿ ಪೊಲೀಸರು ಹೇಳಿದ ಮೇಲೆ ರೈತರ ಪ್ರತಿಭಟನೆ ವಾಪಸ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.