ADVERTISEMENT

ಮಳೆ ತುಂತುರು: ಜನ ನಿಂತಲ್ಲೇ ನಿಂತರು

ಜಿಲ್ಲೆಯಲ್ಲಿ ಮುಂದುವರಿದ ಮಳೆ; ಶೀತಗಾಳಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 6:48 IST
Last Updated 11 ಡಿಸೆಂಬರ್ 2022, 6:48 IST
ಮಳೆಯ ನಡುವೆ ಚಿಕ್ಕಬಳ್ಳಾಪುರದಲ್ಲಿ ಕೊಡೆ ಹಿಡಿದು ನಡೆದ ಜನರು
ಮಳೆಯ ನಡುವೆ ಚಿಕ್ಕಬಳ್ಳಾಪುರದಲ್ಲಿ ಕೊಡೆ ಹಿಡಿದು ನಡೆದ ಜನರು   

ಚಿಕ್ಕಬಳ್ಳಾಪುರ: ವಾಯುಭಾರ ಕುಸಿತ ಪರಿಣಾಮ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಜಿಲ್ಲೆಯಾದ್ಯಂತ ಶನಿವಾರ ತುಂತುರು ಮಳೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸುರಿಯುತ್ತಲೇ ಇತ್ತು.

ತುಂತುರು ಮಳೆಯಿಂದಜನಜೀವನ ಅಸ್ತವ್ಯಸ್ಥಗೊಂಡಿದೆ. ಸೂರ್ಯ ಭೂಮಿಯತ್ತ ಇಣುಕಿಲ್ಲ. ಮೋಡ ಕವಿದು, ಚಳಿ ಗಾಳಿ ಬೀಸುತ್ತಿದೆ. ಬಂಗಾಳ ಕೊಲ್ಲಿಗೆ ‘ಮಾಂಡೂಸ್‌’ ಅಪ್ಪಳಿಸಿರುವುದರಿಂದ ಬಯಲುಸೀಮೆ ಮಲೆನಾಡಿನಂತಾಗಿದೆ.

ಹೆಚ್ಚಿನ ಜನರು ತಮ್ಮ ಕೆಲಸ ಕಾರ್ಯ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದರು. ಎರಡನೇ ಶನಿವಾರವಾದ ಕಾರಣ ಸರ್ಕಾರಿ ಕಚೇರಿಗಳು ಬಂದ್ ಆಗಿದ್ದವು. ಬೆಳಿಗ್ಗೆ ಪೋಷಕರು ಮಕ್ಕಳನ್ನು ಕೊಡೆ ಹಿಡಿದು ಶಾಲೆಗೆ ಕರೆದೊಯ್ಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ADVERTISEMENT

ಚಿಕ್ಕಬಳ್ಳಾಪುರ ನಗರದಲ್ಲಿ ಜನರ ಓಡಾಟ ಸಹ ಕಡಿಮೆ ಇತ್ತು. ಮಾರುಕಟ್ಟೆಯಲ್ಲಿ ವ್ಯಾಪಾರ ಬಿರುಸಿನಿಂದ ಇರಲಿಲ್ಲ.ಜಡಿಮಳೆಯಿಂದ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ದಿನವಿಡೀ ಸಮಸ್ಯೆ ಎದುರಿಸಿದರು.

ಮುಂಗಾರಿನ ಸಮಯದಲ್ಲೂ ಮಳೆ ಸುರಿದು ಬೆಳೆ ಹಾನಿಯಾಗಿ ಜಿಲ್ಲೆಯ ರೈತರು ನಷ್ಟ ಅನುಭವಿಸಿದ್ದಾರೆ. ಈಗ ಹಿಂಗಾರಿನಲ್ಲೂ ಮಳೆ ಬಂದು ರಾಗಿ, ಟೊಮೆಟೊ, ಸೊಪ್ಪು, ಅವರೆಕಾಳು ಬೆಳೆದವರಿಗೆ ನಷ್ಟ ತಂದೊಡ್ಡಿದೆ. ರಾಗಿ ಕಟಾವಿಗೆ ತೊಂದರೆ ಉಂಟಾಗಿದೆ.

ನಗರದ ಹೊರವಲಯದ ಹೂ ಮಾರುಕಟ್ಟೆಯು ಮಳೆಯ ಕಾರಣದಿಂದ ಕೆಸರು ಗದ್ದೆ ಆಗಿತ್ತು. ಮಳೆಯ ನಡುವೆ ವಹಿವಾಟು ನಡೆಯಿತು. ಜಿಲ್ಲೆಯ ಜನರು ಪ್ರಮುಖವಾಗಿ ತರಕಾರಿ, ಹೂ ಮತ್ತು ಹಣ್ಣಿನ ಬೇಸಾಯವನ್ನು ಅವಲಂಬಿಸಿದ್ದು ಮಳೆಯು ಸಮಸ್ಯೆಯನ್ನು ತಂದೊಡ್ಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.