ADVERTISEMENT

ಜನಮನ ಸೆಳೆದ ಗಣತಂತ್ರದ ಉತ್ಸವ

ಜಿಲ್ಲಾ ಕ್ರೀಡಾಂಗಣದಲ್ಲಿ ಸಡಗರ, ಸಂಭ್ರಮದಿಂದ 71ನೇ ಗಣರಾಜ್ಯೋತ್ಸವ ಆಚರಣೆ, ನೋಡುಗರ ಮನ ಸೆಳೆದ ವಿವಿಧ ನೃತ್ಯರೂಪಕಗಳು

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 12:44 IST
Last Updated 26 ಜನವರಿ 2020, 12:44 IST
ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.   

ಚಿಕ್ಕಬಳ್ಳಾಪುರ: ಆ ವಿಶಾಲ ಬಯಲು ಆವರಿಸಿಕೊಂಡಿದ್ದ ಮುಂಜಾನೆಯ ತಂಪು ದೇಶಭಕ್ತಿಯ ಕಿಚ್ಚಿಗೆ ಮಾಯವಾಗಿ ಉತ್ಸಾಹದ ಬಿಸಿ ಏರಿಸಿತ್ತು. ಗಣತಂತ್ರದ ಹಬ್ಬದ ಸಡಗರಕ್ಕಾಗಿ ಮೈದಾನದಲ್ಲಿ ನೆರೆದವರು ಶಿಸ್ತಿನಿಂದ ಪಥಸಂಚಲನ ನಡೆಸುತ್ತಿದ್ದರೆ, ಇನ್ನೊಂದೆಡೆ ಸಂಭ್ರಮಾಚರಣೆ ಕಣ್ತುಂಬಿಕೊಂಡವರ ಕರತಾಡನ ಅಂಗಳದ ತುಂಬೆಲ್ಲ ಅನುರಣಿಸಿತ್ತು. ಮಕ್ಕಳಿಂದ ಮೈದಾನದಲ್ಲಿ ಮೈದಳೆದ ನೃತ್ಯ ರೂಪಕಗಳಂತೂ ನೋಡುಗರನ್ನು ಪರವಶಗೊಳಿಸಿದ್ದವು.

ಇದು ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ71ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಝಲಕ್.

ಜಿಲ್ಲಾಧಿಕಾರಿ ಆರ್.ಲತಾ ಅವರು ಬೆಳಿಗ್ಗೆ 9.05ಕ್ಕೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತೆರೆದ ಜೀಪಿನಲ್ಲಿ ಸಾಗಿ ಗೌರವ ರಕ್ಷೆ ಸ್ವೀಕರಿಸಿದರು.

ADVERTISEMENT

ಪರೇಡ್‌ ಕಮಾಂಡರ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್‌ ಎನ್‌.ಎಲ್‌.ನಾಗೇಂದ್ರಪ್ರಸಾದ್‌ ಅವರ ನೇತೃತ್ವದಲ್ಲಿ ಶಾಲೆ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಬಹು ಶಿಸ್ತಿನಲ್ಲಿ ಸಾಗಿದ 20 ಕವಾಯತು ತುಕಡಿಗಳಿಗೆ ಭರಪೂರ ಕರತಾಡನದ ಹರ್ಷೋದ್ಘಾರ ದೊರೆಯಿತು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್‌ ತುಕಡಿಗಳು, ಜಿಲ್ಲಾ ಗೃಹ ರಕ್ಷಕ ದಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಕೆಡೆಟ್‌, ಅರಣ್ಯ ಇಲಾಖೆ, ಸರ್.ಎಂ.ವಿ ಪ್ರೌಢಶಾಲೆಯ ಭಾರತ ಸೇವಾ ದಳ ತಂಡ, ನ್ಯೂಹೊರೈಜನ್ ಪ್ರೌಢಶಾಲೆ, ಭಾರತಿ ವಿದ್ಯಾಸಂಸ್ಥೆ, ಬ್ರೈಟ್‌ ಪ್ರೌಢಶಾಲೆ, ಪಂಚಗಿರಿ ಬೋಧನಾ ಶಾಲೆ, ಗುಡ್‌ ಶೆಫರ್ಡ್‌ ಬಾಲಕರ ಪ್ರೌಢಶಾಲೆ, ಪೂರ್ಣಪ್ರಜ್ಞಾ ಪ್ರೌಢಶಾಲೆ, ನ್ಯೂಟನ್‌ ಗ್ರಾಮರ್‌ ಪ್ರೌಢಶಾಲೆ.

ಸೇಂಟ್‌ ಜೋಸೆಫ್‌ ಬಾಲಕಿಯರ ಪ್ರೌಢಶಾಲೆ, ಇಂಡಿಯನ್‌ ಪಬ್ಲಿಕ್ ಪ್ರೌಢಶಾಲೆ, ಪ್ರಶಾಂತಿ ಬಾಲಕಿಯರ ಪ್ರೌಢಶಾಲೆ, ಗುಡ್‌ ಶೆಫರ್ಡ್‌ ಬಾಲಕಿಯರ ಪ್ರೌಢಶಾಲೆ, ಗೌರಿಬಿದನೂರು ತಾಲ್ಲೂಕಿನ ಅಲ್ಲಿಪುರದ ವಿಶೇಷ ಚೇತನ ಮಕ್ಕಳ ನೊಬೆಲ್‌ ಶಾಲೆ ಮಕ್ಕಳ ತಂಡ ನಡೆಸಿಕೊಟ್ಟ ಆಕರ್ಷಕ ಕವಾಯತು ನೋಡುಗರ ಮನಸೆಳೆಯಿತು. ಪೊಲೀಸ್‌ ಬ್ಯಾಂಡ್‌ ಕಾರ್ಯಕ್ರಮಕ್ಕೆ ಹುರುಪು ತುಂಬಿತು.

ಜಿಲ್ಲಾಧಿಕಾರಿ ಗಣರಾಜ್ಯೋತ್ಸವ ದಿನಾಚರಣೆ ಸಂದೇಶದ ತರುವಾಯ 11 ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ಮೈದಾನಕ್ಕೆ ರಂಗು ತುಂಬಿ, ಮನದ ಮೂಲೆಯಲ್ಲಿ ಅಡಗಿದ್ದ ದೇಶಭಕ್ತಿಯನ್ನು ಬಡಿದೇಳಿಸುವಂತಹ ಸಾಂಸ್ಕೃತಿಕ ರಸದೌತಣ ಉಣಬಡಿಸಿದವು.

ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿ ಶಾಲೆ, ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಹಾರುತಿದೆ ಹಾರುತಿದೆ ನಮ್ಮ ಬಾವುಟ’ ನೃತ್ಯರೂಪಕ ನೋಡುಗರ ಮನಸೂರೆಗೊಂಡಿತು. ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಹೊಸ ಹಿರಿಯ ಪ್ರಾಥಮಿಕ ಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ, ಸೇಂಟ್‌ ಜಾನ್ಸ್‌ ಇಂಗ್ಲಿಷ್ ಶಾಲೆ ವಿದ್ಯಾರ್ಥಿಗಳ ‘ಏರೋಬಿಕ್ಸ್’ ನೃತ್ಯ ಗಮನ ಸೆಳೆಯಿತು.

ಸರ್‌.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆ ವಿದ್ಯಾರ್ಥಿಗಳು ‘ವಂದೇ ಮಾತರಂ’ ರೂಪಕ ನೆರೆದವರಲ್ಲಿ ದೇಶಭಕ್ತಿ ಬಡಿದೆಬ್ಬಿಸಿತು. ಪ್ರಶಾಂತಿ ಬಾಲ ಮಂದಿರದ ಮಕ್ಕಳ ‘ಸಮುದ್ರ ಮಂಥನ’ ಯಕ್ಷಗಾನ ನೃತ್ಯ ಭಾರತದ ಭವ್ಯ ಪರಂಪರೆ ಪರಿಚಯಿಸುವಂತಿತ್ತು. ಬಾಗೇಪಲ್ಲಿ ತಾಲ್ಲೂಕಿನ ಪೂಲವಾರಪಲ್ಲಿ ಮೂರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಚಿಂತಾಮಣಿ ತಾಲ್ಲೂಕಿನ ಮೂರಾರ್ಜಿ ದೇಸಾಯಿ ವಸತಿ ಶಾಲೆ ನೃತ್ಯಗಳು ಮೈದಾನಕ್ಕೆ ರಂಗು ತುಂಬಿದವು.

ಕವಾಯತು ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ನೋಡುಗರ ಮನಗೆದ್ದ ಶಾಲಾ ವಿದ್ಯಾರ್ಥಿಗಳ ತಂಡಗಳಿಗೆ ಬಹುಮಾನ ವಿತರಿಸಲಾಯಿತು. 10 ಸರ್ಕಾರಿ ನೌಕರರಿಗೆ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ಎನ್.ಎನ್.ರಘುನಂದನ್, ಎಸ್ಪಿ ಅಭಿನವ್‌ ಖರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.