ADVERTISEMENT

ಚಿಂತಾಮಣಿ: ಸ್ಮಶಾನ, ರಸ್ತೆ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 3:47 IST
Last Updated 29 ಮಾರ್ಚ್ 2021, 3:47 IST

ಚಿಂತಾಮಣಿ: ತಾಲ್ಲೂಕಿನ ಕೈವಾರ ಪಂಚಾಯಿತಿ ವ್ಯಾಪ್ತಿಯ ಬನಹಳ್ಳಿ ಗ್ರಾಮದ ಸರ್ವೆ ನಂ. 67ರಲ್ಲಿ ಎರಡು ಎಕರೆ ಐದು ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಮೀಸಲಿರಿಸಲಾಗಿದೆ. ಇದರಲ್ಲಿ ಒಂದು ಎಕರೆಯನ್ನು ಗ್ರಾಮದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ತೆರವುಗೊಳಿಸಿ ಎಂದು ಕೈವಾರ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.

ಜಮೀನಿನಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಳು ಬೆಳೆದಿವೆ. ಸ್ಮಶಾನದ ಗಡಿಯನ್ನು ದಾಟಿ ಸುಮಾರು ಒಂದು ಎಕರೆಯಷ್ಟು ಜಮೀನು, ರಾಜಕಾಲುವೆ ಹಾಗೂ ಸ್ಮಶಾನಕ್ಕೆ ಹೋಗಲು ಇದ್ದ ರಸ್ತೆ ಒತ್ತುವರಿ ಆಗಿದೆ. ಒತ್ತುವರಿಯನ್ನು ತೆರವುಗೊಳಿಸಿಕೊಡಬೇಕು.

ರಸ್ತೆ ಇಲ್ಲದ ಕಾರಣದಿಂದ ಬನಹಳ್ಳಿ ಮೂಲಕ ಸುಮಾರು ಒಂದೂವರೆ ಕಿ.ಮೀ ಸುತ್ತಿಕೊಂಡು ಹೋಗಬೇಕಾಗಿದೆ. ನಮ್ಮ ಪೂರ್ವಿಕರ ಸಮಾಧಿಗಳು ಇದೇ ಜಮೀನಿನಲ್ಲಿವೆ. ವರ್ಷಕ್ಕೆ ಒಂದು ಬಾರಿ ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಿದ್ದೆವು. ಆದರೆ, ರಸ್ತೆ ಒತ್ತುವರಿಯಿಂದ ಸ್ಮಶಾನದ ಜಾಗಕ್ಕೆ ಅಲ್ಲದೇ ಆ ಭಾಗದ ಜಮೀನುಗಳಿಗೆ ತೆರಳಲು ಪಡಿಪಾಟಲಾಗಿದೆ.

ADVERTISEMENT

ಇನ್ನು ಹಳ್ಳಿಯ ಭಾಗದಲ್ಲಿ ಮುಕ್ತಿ ವಾಹನದ ವ್ಯವಸ್ಥೆ ಇಲ್ಲ. ಹೆಗಲ ಮೇಲೆ ಶವ ಸಾಗಿಸಬೇಕು. ರಸ್ತೆ ಒತ್ತುವರಿಯಿಂದ ಸುತ್ತಿಕೊಂಡು ಸ್ಶಶಾನಕ್ಕೆ ಹೋಗಬೇಕು. ಶೀಘ್ರದಲ್ಲಿ ರಸ್ತೆ ಹಾಗೂ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಬೇಕು. ಸ್ಮಶಾನದ ಗಡಿಯನ್ನು ಗುರುತಿಸಿ ಬೇಲಿ ಹಾಕಬೇಕು.

ಸರ್ವೆ ಮಾಡಿ ಗಡಿ ಗುರ್ತಿಸಿ ನಕ್ಷೆಯೊಂದಿಗೆ ವರದಿ ನೀಡಲು ತಹಶೀಲ್ದಾರರು ತಾಲ್ಲೂಕು ಭೂಮಾಪಕರಿಗೆ ಸೂಚಿಸಿ ನಾಲ್ಕು ತಿಂಗಳು ಕಳೆದಿದೆ. ಆದರೂ ಭೂಮಾಪಕರು ಇದೂವರೆಗೂ ಈ ಕಡೆ ತಲೆಹಾಕಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.