ADVERTISEMENT

ಚಿಂತಾಮಣಿ: ಅಸ್ತಿತ್ವ ಕಳೆದುಕೊಂಡ ಆರ್‌ಟಿಇ

ಕಡ್ಡಾಯ ಶಿಕ್ಷಣ ಹಕ್ಕು ನಿಯಮ ಬದಲಾವಣೆಯಿಂದ ಅಸಮಾಧಾನ

ಎಂ.ರಾಮಕೃಷ್ಣಪ್ಪ
Published 7 ಸೆಪ್ಟೆಂಬರ್ 2020, 3:26 IST
Last Updated 7 ಸೆಪ್ಟೆಂಬರ್ 2020, 3:26 IST
.
.   

ಚಿಂತಾಮಣಿ: ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಪರಿಷ್ಕರಿಸಿರುವುದರಿಂದ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ಆರ್‌ಟಿಇ ಅಡಿಯಲ್ಲಿ ಒಂದು ಶಾಲೆಗೂ ಅವಕಾಶ ದೊರೆತಿಲ್ಲ.

ತಾಲ್ಲೂಕಿನಲ್ಲಿ ಆರ್‌ಟಿಇ ತನ್ನ ಅಸ್ತಿತ್ವ ತ್ವವನ್ನೇ ಕಳೆದುಕೊಂಡಿದೆ. ಹಿಂದಿನ ವರ್ಷಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಮಾತ್ರ ಮುಂದುವರಿಯುತ್ತಾರೆ. 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದು ಮಗು ವಾಸವಿರುವ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇದ್ದರೆ, ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಅವಕಾಶವಿಲ್ಲ ಎಂಬ ನಿಯಮ ಜಾರಿಗೆ ತಂದಿದೆ. ಈ ಬದಲಾವಣೆಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಚಿಂತಾಮಣಿ ತಾಲ್ಲೂಕಿನಲ್ಲಿ ಆರ್‌ಟಿಇ ಅಡಿಯಲ್ಲಿ ಒಂದು ಶಾಲೆಗೂ ಅವಕಾಶವಿಲ್ಲದಂತಾಗಿದೆ.

ಸರ್ಕಾರದ ಹೊಸ ನಿಯಮಾವಳಿಗಳಿಂದ 2019-20ನೇ ಸಾಲಿನಿಂದ ಆರ್‌ಟಿಇ ವ್ಯಾಪ್ತಿಗೆ ಒಳಪಡುವ ಶಾಲೆಗಳು ಮತ್ತು ಸೀಟುಗಳಲ್ಲಿ ಇಳಿಕೆಯಾಗಿದೆ. ತಾಲ್ಲೂಕಿನಲ್ಲಿ 2018-19 ನೇ ಸಾಲಿನಲ್ಲಿ 45 ಶಾಲೆಗಳಲ್ಲಿ 571 ಸೀಟುಗಳು ಲಭ್ಯವಾಗಿದ್ದವು. 2019-20 ನೇ ಸಾಲಿನಲ್ಲಿ ನಿಯಮಾವಳಿಗಳ ಬದಲಾವಣೆಯಿಂದ 18 ಶಾಲೆಗಳಲ್ಲಿ 91 ಸೀಟುಗಳು ಮಾತ್ರ ಲಭ್ಯವಿದ್ದು, ಕೇವಲ 15 ಸೀಟುಗಳು ಮಾತ್ರ ಭರ್ತಿಯಾಗಿದ್ದವು. 2020-21 ನೇ ಸಾಲಿಗೆ ಒಂದು ಶಾಲೆಯು ಇಲ್ಲದೆ ಆರ್‌ಟಿಇ ಕೇವಲ ನಾಮಾವಶೇಷವಾಗಿದೆ.

ADVERTISEMENT

ಹಿಂದಿನ ವರ್ಷಗಳಲ್ಲಿ ಆರ್‌ಟಿಇ ಅಡಿಯಲ್ಲಿ ಸೀಟುದಕ್ಕಿಸಿ ಕೊಳ್ಳುವುದು ಹರಸಾಹಸವಾಗಿತ್ತು. ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಅವಕಾಶ ಪಡೆಯಲು ಆರ್ಥಿಕ ಹಾಗೂ ಸಾಮಾಜಿಕ ಕೆಳವರ್ಗದ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ಸರ್ಕಾರ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದು ನಿಯಮಾವಳಿಗಳನ್ನು ಬದಲಾವಣೆ ಮಾಡಿದ್ದರಿಂದ ಬಡವರು ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ಹಿಂದುಳಿದ ವರ್ಗ ಹಾಗೂ ಬಡಮಕ್ಕಳ ಶಿಕ್ಷಣ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ. ವಾಸಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಅವಕಾಶ ನೀಡದಿರುವುದು ಬಡಮಕ್ಕಳ ಶಿಕ್ಷಣದ ಹಕ್ಕನ್ನು ಸರ್ಕಾರವೇ ಕಸಿದುಕೊಳ್ಳುತ್ತಿದೆ. ಸಾಮಾಜಿಕ ನ್ಯಾಯದೃಷ್ಟಿಯಿಂದ ಶ್ರೀಮಂತ ಮಕ್ಕಳ ಜತೆಯಲ್ಲಿ ಬಡಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಪಡೆಯಲಿ ಎಂಬ ಉದ್ದೇಶ ಕಮಟಿ ಹೋಗಿದೆ
ಎಂಬುದು ಪೋಷಕರು ಅಸಮಾಧಾನವಾಗಿದೆ.

***

ಅವಕಾಶ ದೊರೆತಿಲ್ಲ

ಆರ್‌ಟಿಇಗೆ ಸರ್ಕಾರ ತಿದ್ದಪಡಿ ಮಾಡಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇಲ್ಲದಿರುವ ಕಡೆ ಮಾತ್ರ ಖಾಸಗಿ ಅನುದಾನರಹಿತ ಶಾಲೆಗಳಿಗೆ ಅವಕಾಶವಿದೆ. ತಾಲ್ಲೂಕಿನಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇಲ್ಲದಿರುವ ಸ್ಥಳಗಳಿಲ್ಲ. ಹೀಗಾಗಿ ಆರ್‌ಟಿಇ ಅಡಿಯಲ್ಲಿ ಯಾವ ಶಾಲೆಗೂ ಅವಕಾಶ ದೊರೆತಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ತಿಳಿಸಿದರು.

***

ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ

ಪರಿಶಿಷ್ಟ, ಹಿಂದುಳಿದ ಬಡವರ್ಗದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗಳಲ್ಲಿ ಎಲ್ಲ ವರ್ಗದ ಮಕ್ಕಳೊಂದಿಗೆ ಕಲಿಯಲು ಶೇ 25 ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂಬುದು ಆರ್‌ಟಿಇ ಕಾಯ್ದೆಯ ನಿಯಮ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರು ಪ್ರತಿಷ್ಠಿತ ಶಾಲೆಗಳಲ್ಲಿ ದುಬಾರಿ ಶುಲ್ಕ ನೀಡಿ ಓದಿಸಲು ಸಾಧ್ಯವೇ ಇಲ್ಲ. ಈ ವರ್ಗಗಳ ಪ್ರತಿಭಾವಂತ ಮಕ್ಕಳ ಕನಸನ್ನು ಸರ್ಕಾರ ನುಚ್ಚುನೂರು ಮಾಡಿದೆ. ಬಡವರ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಿದೆ ಎಂದು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಮುಖಂಡ ಕೃಷ್ಣಾರೆಡ್ಡಿ ಆರೋಪಿಸಿದರು.

***

ಪೋಷಕರು ಅಸಮಾಧಾನ

2018-19 ನೇ ಸಾಲಿನವರೆಗೂ ಎಲ್ಲ ಖಾಸಗಿ ಶಾಲೆಗಳು ಆರ್‌ಟಿಇ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಹೀಗಾಗಿ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಮುಗಿಬೀಳುತ್ತಿದ್ದರು. ಇನ್ನಿಲ್ಲದಂತೆ ಒತ್ತಡ ತರುತ್ತಿದ್ದರು. ಆರ್‌ಟಿಇ ಸೀಟುಗಳನ್ನು ಆಯ್ಕೆ ಮಾಡುವುದು ಅಧಿಕಾರಿಗಳಿಗೆ ತಲೆ ಬಿಸಿಯಾಗುತ್ತಿತ್ತು. ಇದೀಗ ಆರ್‌ಟಿಇ ನಿಯಮ ತಿದ್ದುಪಡಿಯಿಂದ ಪೋಷಕರು ಅಸಮಾಧಾನಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.