ADVERTISEMENT

ಚಿಕ್ಕಬಳ್ಳಾಪುರ | ಮಾದಕತೆ ಗೀಳಿನಿಂದ ಬಾಳು ಹಾಳು: ನ್ಯಾ. ಬೈರಪ್ಪ ಶಿವಲಿಂಗ ನಾಯಿಕ

ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ಸಪ್ತಾಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:43 IST
Last Updated 26 ಜೂನ್ 2020, 14:43 IST
ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ಸಪ್ತಾಹಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಬೈರಪ್ಪ ಶಿವಲಿಂಗ ನಾಯಿಕ ಚಾಲನೆ ನೀಡಿದರು.
ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ಸಪ್ತಾಹಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಬೈರಪ್ಪ ಶಿವಲಿಂಗ ನಾಯಿಕ ಚಾಲನೆ ನೀಡಿದರು.   

ಚಿಕ್ಕಬಳ್ಳಾಪುರ: ‘ಆರೋಗ್ಯದ ಜತೆಗೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮಾದಕ ವಸ್ತುಗಳ ಸೇವನೆ ಚಟವನ್ನು ಜನರು ಸ್ವ ಇಚ್ಚೆಯಿಂದ ತ್ಯಜಿಸಿದಾಗ ಮಾತ್ರ ದೇಶ ವ್ಯಸನ ಮುಕ್ತವಾಗಲು ಸಾಧ್ಯವಾಗುತ್ತದೆ. ಯುವಜನರು ದುಶ್ಚಟಗಳಿಂದ ದೂರವಿದ್ದು ಸದೃಢ ದೇಶ ನಿರ್ಮಾಣದಲ್ಲಿ ಭಾಗಿಯಾಗಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಬೈರಪ್ಪ ಶಿವಲಿಂಗ ನಾಯಿಕ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾದಕ ವಸ್ತುಗಳ ಸೇವನೆಗೆ ಒಮ್ಮೆ ಒಳಗಾದರೆ ಅದರಿಂದ ಹೋರ ಬರುವುದು ಕಷ್ಟ. ಮಾದಕ ವಸ್ತುಗಳ ಸೇವನೆ ಸಾವಿಗೆ ಆಹ್ವಾನ ನೀಡಿದಂತೆ. ಇದನ್ನು ಯುವಜನತೆ ತಾವು ತಿಳಿದುಕೊಳ್ಳುವ ಜತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಮದ್ಯ, ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಂದ ಮಾನಸಿಕ ಖಿನ್ನತೆ, ಆರ್ಥಿಕ ನಷ್ಟ, ಮಾನನಷ್ಟ, ಮನೆಯಲ್ಲಿ ಅಶಾಂತಿಯ ವಾತಾರಣ ನಿರ್ಮಾಣವಾಗುತ್ತದೆ. ಆದ್ದರಿಂದ ಯುವಜನರು ಪಾಶ್ಚಿಮಾತ್ಯರನ್ನು ಅನುಸರಿದೆ, ನಮ್ಮದೇ ಆದ ದೇಶಿ ವೈಚಾರಿಕ ಸಂವೇದನಾಶೀಲತೆಯ ಮನೋಭಾವವನ್ನು ರೂಪಿಸಿಕೊಳ್ಳಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಆರ್.ಲತಾ ಮಾತಾನಾಡಿ, ‘ಜೀವಕ್ಕೆ ಆಪತ್ತು ತಂದೊಡ್ಡುವ ಮಾದಕ ವಸ್ತುಗಳು ಅನೇಕ ಸಮಸ್ಯೆಗಳಿಗೆ ಎಡೆಮಾಡುತ್ತವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಮನುಷ್ಯನನ್ನು ಬಲಹೀನಗೊಳಿಸುತ್ತವೆ. ಮಾದಕ ವ್ಯಸನಿಗಳ ಸಂಖ್ಯೆ ಏರುಮುಖವಾಗುತ್ತಿರುವುದು ಕಳವಳದ ವಿಚಾರ. ಮಾದಕ ವಸ್ತುಗಳ ಚಟದಿಂದಲೇ ಶೇ 90 ರಷ್ಟು ಅಪರಾಧ ಪ್ರಕರಣಗಳು ನಡೆಯುತ್ತಿರುವುದು ಶೋಚನೀಯ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ‘ಕ್ಷಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತುಗಳು ವ್ಯಕ್ತಿಗೆ ಮಾತ್ರವಲ್ಲದೇ ಕುಟುಂಬಕ್ಕೂ ಮಾರಕವಾಗುತ್ತವೆ. ಮಾದಕ ವ್ಯಸನಿಗಳಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬಂದ ಸಾಕಷ್ಟು ಉದಾಹರಣೆಗಳಿವೆ. ಯುವ ಜನತೆ ಸ್ನೇಹಿತರ ಆಯ್ಕೆ ವಿಚಾರದಲ್ಲಿ ಜಾಗೃತರಾಗಿರಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಧೀಶ ಎಚ್‌.ದೇವರಾಜ್, ಜಿಲ್ಲಾ ಆರೋಗ್ಯ ಅಧಿಕಾರಿ ಬಿ.ಎಂ.ಯೋಗೇಶ್ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ವಿ.ರಮೇಶ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್, ಮನೋವೈದ್ಯರಾದ ಡಾ.ಡಿ.ಎನ್. ಕಿಶೋರ್, ಡಾ.ಜಿ.ಹೇಮಂತ್ ಕುಮಾರ್, ಡಾ.ಸುಬ್ರಮಣ್ಯಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.