ADVERTISEMENT

ಗ್ರಾಮೀಣ ಮಹಿಳೆಯರ ಸ್ಪರ್ಧಾಕೂಟ

ಆನೂರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 3:50 IST
Last Updated 7 ಮಾರ್ಚ್ 2021, 3:50 IST
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದಲ್ಲಿ ಮಹಿಳೆಯರ ಸ್ಪರ್ಧಾಕೂಟ ನಡೆಯಿತು
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದಲ್ಲಿ ಮಹಿಳೆಯರ ಸ್ಪರ್ಧಾಕೂಟ ನಡೆಯಿತು   

ಶಿಡ್ಲಘಟ್ಟ: ಗ್ರಾಮೀಣ ಮಹಿಳೆಯರು ಇಡೀ ಕುಟುಂಬದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಮುಂತಾದ ಜವಾಬ್ದಾರಿ ಹೊತ್ತುಕೊಂಡು ದಣಿವಿಲ್ಲದೇ ದುಡಿಯುತ್ತಿರುತ್ತಾರೆ. ಒತ್ತಡದಿಂದ ಹೊರಬರಲು ಆಟಪಾಠಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದು ಫೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಉಪ ಯೋಜನಾಧಿಕಾರಿ ಆಗಟಮಡಕ ರಮೇಶ್ ತಿಳಿಸಿದರು.

ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ಮತ್ತು ಫೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆನೂರು ಗ್ರಾಮ ಪಂಚಾಯಿತಿ, ಎಫ್‌ಇಎಸ್ ಹಾಗೂ ಶ್ರೀಸಾಯಿಬಾಬಾ ಸಂಜೀವಿನಿ ಒಕ್ಕೂಟದಿಂದ ನಡೆದ ಮಹಿಳೆಯರ ಸ್ಪರ್ಧಾಕೂಟದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ 247 ಗ್ರಾಮಗಳಲ್ಲಿ ಎಫ್‌ಇಎಸ್ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಗ್ರಾಮಗಳ ಅಭಿವೃದ್ಧಿಗೋಸ್ಕರ, ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚನೆ ಮಾಡಿದೆ. ಈ ಸಮಿತಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದು, ಮಹಿಳೆಯರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ ಅಡಳಿತದಲ್ಲಿ ಮಹಿಳೆಯರು ಭಾಗವಹಿಸಲು ಪೋತ್ಸಾಹ ನೀಡಲಾಗುತ್ತಿದೆ ಎಂದರು.

ADVERTISEMENT

ಆನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯನಿ ಮಾತನಾಡಿ, ಮಹಿಳೆಯರು ಒಂದೆಡೆ ಸಂಸಾರವನ್ನು ಸಂಭಾಳಿಸಿಕೊಂಡು ಇನ್ನೊಂದೆಡೆ ಉದ್ಯೋಗದ ಸ್ಥಳದಲ್ಲಿಯೂ ದಕ್ಷವಾಗಿ ಕಾರ್ಯ ನಿರ್ವಹಿಸುವ ಶಕ್ತಿ ಹೊಂದಿದ್ದಾಳೆ. ಎಲ್ಲಾ ವಿಷಯದಲ್ಲೂ ಮಹಿಳೆಯರು ಪುರುಷರಿಗಿಂತ ಸಾಕಷ್ಟು ಹೆಜ್ಜೆ ಮುಂದೆಯೇ ಇದ್ದಾರೆ. ಮಹಿಳೆಯರನ್ನು ಎಲ್ಲಾ ಸ್ತರಗಳಲ್ಲೂ ಮೇಲಕ್ಕೆತ್ತಬೇಕು. ಆಕೆಗೆ ಸಮಾನ ಅವಕಾಶಗಳನ್ನು ನೀಡಬೇಕು ಎಂಬ ಉದ್ದೇಶದಿಂದ ನಮ್ಮಲ್ಲಿ ಅನೇಕ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
ಹೇಳಿದರು.

ಆನೂರು ಗ್ರಾಮ ಪಂಚಾಯಿತಿ, ಎಫ್‌ಇಎಸ್ ಹಾಗೂ ಶ್ರೀಸಾಯಿಬಾಬಾ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಮಹಿಳೆಯರಿಗೆ ಆನೂರು ಗ್ರಾಮದಲ್ಲಿ ಮಡಿಕೆ ಹೊಡೆಯವ ಆಟ, ಸಂಗೀತ ಕುರ್ಚಿ ಆಟ, ಗೋಣಿ ಚೀಲದ ಓಟ ಮುಂತಾದ ಆಟಗಳನ್ನು ಆಡಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಎನ್. ವಿಜಯೇಂದ್ರ, ಸದಸ್ಯರಾದ ಎಂ. ಲತಾ, ಉಷಾರಾಣಿ, ಮುರಳಿ, ಅಂಗನವಾಡಿ ಕಾರ್ಯಕರ್ತೆ ವಿಜಯಮ್ಮ, ಶ್ರೀಸಾಯಿಬಾಬಾ ಸಂಜೀವಿನಿ ಒಕ್ಕೂಟದ ಸದಸ್ಯೆ ಲಾವಣ್ಯ, ಗ್ರಾಮ ಪಂಚಾಯಿತಿ ಸಂಪನ್ಮೂಲ ವ್ಯಕ್ತಿ ಬಿ.ಎನ್. ಮುನಿರಾಜು, ಸಮುದಾಯ ಸಂಪನ್ಮೂಲ ವ್ಯಕ್ತಿ ಪಾರ್ವತಿ, ಶ್ವೇತಾ, ಗಾಯತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.