ADVERTISEMENT

ಸಕಾಲ: ರಾಜ್ಯಕ್ಕೆ ಜಿಲ್ಲೆ ಪ್ರಥಮ

ಸಚಿವ ಸುರೇಶ್ ಕುಮಾರ್‌ರಿಂದ ಅಭಿನಂದನಾ ಪತ್ರ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:48 IST
Last Updated 26 ಫೆಬ್ರುವರಿ 2021, 2:48 IST
ಸಚಿವ ಸುರೇಶ್ ಕುಮಾರ್ ಅವರು ಚಿಕ್ಕಬಳ್ಳಾಪುರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಅಮರೇಶ್‌ ಅವರಿಗೆ ಅಭಿನಂದನಾ ಪತ್ರ ನೀಡಿದರು
ಸಚಿವ ಸುರೇಶ್ ಕುಮಾರ್ ಅವರು ಚಿಕ್ಕಬಳ್ಳಾಪುರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಅಮರೇಶ್‌ ಅವರಿಗೆ ಅಭಿನಂದನಾ ಪತ್ರ ನೀಡಿದರು   

ಚಿಕ್ಕಬಳ್ಳಾಪುರ: ‘ಜಿಲ್ಲಾಡಳಿತ ಸಕಾಲ ಯೋಜನೆ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಶಂಸೆಗೆ ಪಾತ್ರವಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯು ನಾಗರಿಕರಿಗೆ ಸಕಾಲದ ಮೂಲಕ ಸೇವೆ ಒದಗಿಸುವಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ತ್ವರಿತವಾಗಿ ಅರ್ಜಿಗಳು ವಿಲೇವಾರಿವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಗುರುವಾರ ಸಚಿವ ಸುರೇಶ್ ಕುಮಾರ್ ಅವರು ಚಿಕ್ಕಬಳ್ಳಾಪುರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಅಮರೇಶ್‌ ಅವರಿಗೆ ವಿಕಾಸಸೌಧದಲ್ಲಿ ಅಭಿನಂದನಾ ಪತ್ರ ನೀಡಿ ಜಿಲ್ಲಾಡಳಿತದ ಸಾಧನೆಗೆ ಅಭಿನಂದಿಸಿದರು. ನಂತರ ಎಲ್ಲಾ ಜಿಲ್ಲಾಧಿಕಾರಿಯೊಂದಿಗೆ ವಿಡಿಯೊ ಸಂವಾದ ನಡೆಸಿದರು.

ADVERTISEMENT

‘ನವೆಂಬರ್ 30ರಿಂದ ಡಿಸೆಂಬರ್ 19ರವರೆಗೆ ನಡೆದ ಸಕಾಲ ಸಪ್ತಾಹದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿಗದಿತ ಕಾಲ ಮಿತಿಯೊಳಗೆ ಅತಿ ಹೆಚ್ಚು ಶೇ.99.41ರಷ್ಟು ಪ್ರಮಾಣದ ಅರ್ಜಿಗಳನ್ನು ವಿಲೇವಾರಿಯಾಗಿದ್ದು, ಸಕಾಲ ಸಪ್ತಾಹ ನಡೆದ ಸಂದರ್ಭದಲ್ಲಿ ನಾಗರಿಕರಿಗೆ ಸಕಾಲ ಸೇವೆಗಳ ಕುರಿತು ಹೆಚ್ಚಿನ ಅರಿವು ಮೂಡಿಸಿರುವುದು ಈ ಸಾಧನೆಗೆ ಕಾರಣವಾಗಿದೆ’ ಎಂದರು.

‘ನಾಗರಿಕರು ಸಕಾಲದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾದರೆ ಸರಿಯಾದ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ, ತ್ವರಿತವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಬಹುದು. ಈ ಕುರಿತು ಮತ್ತಷ್ಟು ನಾಗರಿಕರಲ್ಲಿ ಅರಿವು ಮೂಡಿಸಬೇಕು. ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸಿಕೊಂಡು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು’ ಎಂದು ಸೂಚನೆ ನೀಡಿದರು.

‘ಜನವರಿಯಲ್ಲಿ 72,659 ಅರ್ಜಿಗಳನ್ನು ಸ್ವೀಕೃತವಾಗಿದ್ದು, 61,663 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆ. ಡಿಸೆಂಬರ್‌ನಲ್ಲಿ 52,217 ಅರ್ಜಿಗಳು ಸ್ವೀಕೃತವಾಗಿದ್ದು, ಬಾಕಿ ಅರ್ಜಿಗಳು ಸೇರಿ ಒಟ್ಟು 52,660 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಕಾಲ ಸೇವೆಗಳ ನಿರ್ವಹಣೆಯಿಂದ ಸಾರ್ವಜನಿಕರ ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯದ ಕೊಂಡಿ ವೃದ್ಧಿಯಾಗಿದೆ. ಸಾರ್ವಜನಿಕರ ಸೇವೆಗಾಗಿ ಜಿಲ್ಲಾಡಳಿತ ಬದ್ಧವಾಗಿರುತ್ತದೆ. ಸಾರ್ವಜನಿಕರ ಅಲೆದಾಟವನ್ನು ತಪ್ಪಿಸುವುದು ಮುಖ್ಯ ಉದ್ದೇಶವಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.