ADVERTISEMENT

ಹೆಣ್ಣಿಗೆ ಆತ್ಮಸ್ಥೈರ್ಯ, ಆರ್ಥಿಕ ನೆರವು ಅಗತ್ಯ

ಮಹಿಳೆಯರ ಮತ್ತು ಮಕ್ಕಳ ವಿರುದ್ಧ ಹಿಂಸಾಚಾರ ಹಾಗೂ ಸುರಕ್ಷಿತ ನಗರಕ್ಕಾಗಿ ಜಂಟಿ ಬದ್ಧತೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 13:47 IST
Last Updated 1 ಆಗಸ್ಟ್ 2019, 13:47 IST
ಗಿಡಕ್ಕೆ ನೀರೇರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗಿಡಕ್ಕೆ ನೀರೇರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.   

ಚಿಕ್ಕಬಳ್ಳಾಪುರ: ‘ಸಮಾಜದಲ್ಲಿ ಹೆಣ್ಣು ಸದೃಢವಾಗಿ ಬದುಕಲು ಆತ್ಮಸ್ಥೈರ್ಯದ ಜತೆಗೆ ಆರ್ಥಿಕವಾಗಿ ಅವರನ್ನು ಸಬಲರನ್ನಾಗಿಸುವ ಪದ್ಧತಿ ಜಾರಿಯಾಗಬೇಕು’ ಎಂದು ಜಿಲ್ಲಾ ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾಸೆ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೋಬಲ್ ಕನ್ಸರ್ನ್‌ ಇಂಡಿಯಾ ಮತ್ತು ಹ್ಯಾನ್ಸ್ ಸೀಡೆಲ್ ಫೌಂಡೇಶನ್‌ನ ಸಹಯೋಗದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿರುದ್ಧ ಹಿಂಸಾಚಾರ ಹಾಗೂ ಸುರಕ್ಷಿತ ನಗರಕ್ಕಾಗಿ ಜಂಟಿ ಬದ್ಧತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


‘ಸಮಾಜದಲ್ಲಿ ಮಹಿಳೆಯರಿಗೆ ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಸಮಾನ ಸ್ಥಾನಮಾನ ನೀಡುವುದು ನಮ್ಮ ಆದ್ಯ ಕರ್ತವ್ಯ. ಮೂಲಭೂತ ಹಕ್ಕುಗಳನ್ನು ನಾವು ಹೇಗೆ ಉಪಯೋಗಿಸುತ್ತೇವೋ ಅದೇ ರೀತಿ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ವೇದಗಳ ಕಾಲದಿಂದಲೂ ಗಂಡು- ಹೆಣ್ಣು ಎಂಬ ವ್ಯತ್ಯಾಸ ಉಳಿಸಿಕೊಂಡು ಬರಲಾಗಿದೆ. ಅದನ್ನು ಹೋಗಲಾಡಿಸಬೇಕಿದೆ’ ಎಂದು ಹೇಳಿದರು.

ADVERTISEMENT


‘ಸಮಾಜದಲ್ಲಿ ಮಹಿಳೆ ಅಬಲೆ ಎಂದು ತಿಳಿಯದೆ ಲಿಂಗತ್ವ ಸಮಾನತೆಯನ್ನು ತರಬೇಕು. ದೌರ್ಜನ್ಯ ಎಸಗುವುದರ ವಿರುದ್ಧ ಕೈಗೊಳ್ಳಲಿರುವ ಗಂಭೀರ ಪರಿಣಾಮ ಕುರಿತು ಎಚ್ಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ಸುರಕ್ಷಿತ ನಗರಗಳ ಶ್ರೇಯೋಭಿವೃದ್ಧಿಗೆ ಮತ್ತು ಭಾರತ ಸಂವಿಧಾನ ವಿಧಿಸುವ ಕಟ್ಟುಪಾಡುಗಳನ್ನು ಸರಿಯಾಗಿ ಪೂರೈಸಲು ದಾರಿ ಮಾಡಿಕೊಡಬೇಕು’ ಎಂದರು.


ಜಿಲ್ಲಾ ಉಪ ಕಾರ್ಯದರ್ಶಿ ನೋಮೇಶ್ ಮಾತನಾಡಿ, ‘ಬಾಲ ಕಾರ್ಮಿಕ ನಿರ್ಮೂಲನೆ ಮಾಡುವಲ್ಲಿ ಜಿಲ್ಲೆಯು ಮೊದಲ ಸ್ಥಾನವನ್ನು ಅಲಂಕರಿಸಿದೆ. ಈವರೆಗೆ 920 ಪ್ರಕರಗಳಲ್ಲಿ 850 ಪ್ರಕರಣಗಳನ್ನು ಇತ್ಯರ್ಥ ಮಾಡಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ ಮಹಿಳೆಯರು ಮುನ್ನುಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ತಿಳಿಸಿದರು.


ಗ್ಲೋಬಲ್ ಕನ್ಸರ್ನ್ ಇಂಡಿಯಾ, ಹ್ಯಾನ್ಸ್ ಸೀಡೆಲ್ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಬೃಂದಾ ಅಡಿಗ ಮಾತನಾಡಿ, ‘ಕೌಟಂಬಿಕ ಹಿಂಸಾಚಾರಕ್ಕೊಳಗಾದ ಮಹಿಳೆಯರ ರಕ್ಷಣೆ ಆಗಬೇಕು ಮತ್ತು ಮಾನವ ಹಕ್ಕುಗಳ ಆಧಾರಿತ ದೃಷ್ಟಿಕೋನದಿಂದ ಮಾನವ ಹಕ್ಕುಗಳ ಕುರಿತ ಜ್ಞಾನವನ್ನು ತಿಳಿ ಪಡಿಸಬೇಕು’ ಎಂದು ಹೇಳಿದರು.


‘ದುರ್ಬಲ ಸಮುದಾಯಗಳ ಕಡೆಗೆ ಗಮನ ಹರಿಸಬೇಕು ಮತ್ತು ಕಾನೂನಿನ ಭಯವನ್ನು ಮೂಡಿಸಿ, ಬಲಿಪಶುಗಳಿಗೆ ಧೈರ್ಯ ತುಂಬಿ, ವ್ಯವಸ್ಥೆಗಳಲ್ಲಿ ವಿಶ್ವಾಸವನ್ನು ಬೆಳೆಸಿ, ಹಿಂಸಾಚಾರವಿಲ್ಲದ ಸುರಕ್ಷಿತ ನಗರಗಳಿಗೆ ಜಂಟಿ ಬದ್ಧತೆ ಕಲ್ಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ’ ಎಂದರು.


ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಾಲಗಂಗಾಧರ್, ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಪೋಲಿಸ್ ಇಲಾಖೆಯ ಅಧಿಕಾರಿಗಳು, ಕಾನೂನು ತಜ್ಞರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.