ಚಿಕ್ಕಬಳ್ಳಾಪುರ: ಬಿಜೆಪಿ ಶಿಸ್ತಿನ ಪಕ್ಷ. ಯಾರನ್ನೇ ಅಧ್ಯಕ್ಷ, ಪದಾಧಿಕಾರಿಯನ್ನಾಗಿ ಆಯ್ನೆ ಮಾಡಲು ಶಿಫಾರಸು ನಡೆಯುವುದಿಲ್ಲ. ಇದು ಕಾಂಗ್ರೆಸ್ ರೀತಿಯ ರಾಜಕಾರಣವಲ್ಲ. ಸಂಘಟನೆಯಲ್ಲಿ ಯಾರು ತೊಡಗಿರುತ್ತಾರೊ ಅವರಿಗೆ ಜವಾಬ್ದಾರಿ ಮತ್ತು ಅವಕಾಶಗಳನ್ನು ನೀಡುತ್ತದೆ ಎಂದು ಬಿಜೆಪಿ ನೂತನ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಜಿಲ್ಲಾ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ನಂತರ ಅವರು ಮಾಧ್ಯಮಗೋಷ್ಠಿ ನಡೆಸಿದರು.
‘ಜಿಲ್ಲೆಯಲ್ಲಿ ಪಕ್ಷದ ಎಲ್ಲ ಮುಖಂಡರ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ. ಬಿಜೆಪಿ ಪ್ರಪಂಚದಲ್ಲಿ ಅತಿ ದೊಡ್ಡ ಪಕ್ಷ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆ ಹೇಗೆ ಮಾಡಬೇಕು ಎನ್ನುವ ಬಗ್ಗೆ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಚರ್ಚಿಸಲಾಗುವುದು. ಯಾರು ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವರೊ ಅವರಿಗೆ ಅವಕಾಶಗಳು ದೊರೆಯಲಿವೆ’ ಎಂದು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಗುಂಪುಗಾರಿಕೆಗೆ ಆಸ್ಪದ ಕೊಡಬಾರದು. ಎಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು. ಚಿಕ್ಕಬಳ್ಳಾಪುರಕ್ಕೆ ನೀರು ಬರದಿರಲು ಕಾರಣ ಸಂಘಟನೆಯ ಕೊರತೆ. ಮುಂದೆ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು. ಆ ಮೂಲಕ ಜಿಲ್ಲೆಗೆ ನೀರು ತರಲಾಗುವುದು ಎಂದರು.
ಕಾಂಗ್ರೆಸ್ ಮುಖಂಡರು ಸಹ ನರೇಂದ್ರ ಮೋದಿ ಅವರ ಕಾರ್ಯಗಳನ್ನು ಮೆಚ್ಚಿ ಅವರಿಗೆ ಬೆಂಬಲ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಅವರಿಗೆ ಕೈ ಜೋಡಿಸುತ್ತಿಲ್ಲ. ಸರ್ಕಾರ ಸಂಸದರ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿದೆ ಎಂದು ದೂರಿದರು.
ಮಾಜಿ ಅಧ್ಯಕ್ಷ ಟಿ.ರಾಮಲಿಂಗಪ್ಪ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬೆಳವಣಿಗೆ ಇದೆ. ಈ ಹಿಂದೆ ಕೆಲವು ಕ್ಷೇತ್ರಗಳಲ್ಲಿ ಶೇ ಶೇ 2ರಿಂದ 3ರಷ್ಟು ಮತಗಳು ಪಕ್ಷಕ್ಕೆ ಬರುತ್ತಿದ್ದವು. ಆದರೆ ಈಗ ಶೇ 25ರಷ್ಟು ಮತಗಳನ್ನು ವಿಧಾನಸಭೆ ಚುನಾವಣೆಯಲ್ಲಿ ಪಡೆದಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ದೊರೆತಿವೆ ಎಂದರು.
ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿ, ಪಕ್ಷವನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಟ್ಟಲಾಗುವುದು. ರಾಜ್ಯ ಸರ್ಕಾರ ವೈಫಲ್ಯಗಳನ್ನು ಜನರಿಗೆ ಮುಟ್ಟಿಸಬೇಕಾಗಿದೆ. ಕೇಂದ್ರ ಸರ್ಕಾರದ ಜನಪರವಾದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಮುಖಂಡರಾದ ವೇಣುಗೋಪಾಲ್, ಶಶಿಧರ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ರಾಜ್ಯ ಎಸ್. ಟಿ. ಮೋರ್ಚಾ ಉಪಾಧ್ಯಕ್ಷ ಅರುಣ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಮುರಳೀಧರ್, ಕೆ.ಬಿ. ಮುರಳಿ, ಮಧುಸೂರ್ಯನಾರಾಯಣ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಅಶೋಕ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
‘ಸಂದೀಪ್ ರೆಡ್ಡಿ ಜೊತೆಯಲ್ಲಿ ಇರುವರು’
‘ಪಕ್ಷದ ವರಿಷ್ಠರು ಅಳೆದು ತೂಗಿ ನನ್ನ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಹಿಂದಿನ ಅಧ್ಯಕ್ಷ ಸಂದೀಪ್ ರೆಡ್ಡಿ ಅವರ ಜೊತೆಯೂ ಮಾತನಾಡಿದ್ದೇನೆ. ಅವರು ನನ್ನ ಆಯ್ಕೆಯನ್ನು ಸಂತೋಷದಿಂದ ಒಪ್ಪಿದ್ದಾರೆ. ನಮ್ಮ ಜೊತೆಯಲ್ಲಿದ್ದ ಪಕ್ಷ ಕಟ್ಟುವರು. ಹಳೆಯದು ಮುಗಿದ ಅಧ್ಯಾಯ’ ಎಂದು ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.