ADVERTISEMENT

ಬಾಗೇಪಲ್ಲಿ | ದಿನಸಿ ಪದಾರ್ಥಗಳೊಂದಿಗೆ ಸಸಿ ವಿತರಣೆ

ಹಸಿರು‌ ಪಸರಿಸುವ ಕಾಯಕದಲ್ಲಿ ಸಮುದಾಯ ಉತ್ತೇಜಿಸುತ್ತಿರುವ ಉಸಿರಿಗಾಗಿ ಹಸಿರು ಟ್ರಸ್ಟ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 15:34 IST
Last Updated 3 ಜುಲೈ 2020, 15:34 IST
ದಿಗವನೆಟ್ಟಕುಂಟಪಲ್ಲಿ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಜತೆಗೆ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ದಿಗವನೆಟ್ಟಕುಂಟಪಲ್ಲಿ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಜತೆಗೆ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.   

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ದಿಗವನೆಟ್ಟಕುಂಟಪಲ್ಲಿ ಗ್ರಾಮದಲ್ಲಿ ಶುಕ್ರವಾರ ಗ್ರಾಮಾಂತರ ಟ್ರಸ್ಟ್ ಹಾಗೂ ರೋಟರಿ ಎಬಿಲಿಟೀಸ್ ಬೆಂಗಳೂರು ಸಹಯೋಗದಲ್ಲಿ ಉಸಿರಿಗಾಗಿ ಹಸಿರು ಟ್ರಸ್ಟ್ ಸದಸ್ಯರು 50 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಜತೆಗೆ ಹಣ್ಣಿನ ಸಸಿಗಳನ್ನು ವಿತರಿಸಿದರು.

ಹಿರಿಯ ನಾಗರಿಕರು, ಅಂಗವಿಕರು ಹಾಗೂ ವಿಧವೆಯರು ವಾಸಿಸುವ ಬಡ ಕುಟುಂಬಗಳಿಗೆ ದಿನಸಿ ಪದಾರ್ಥಗಳ ಜತೆಗೆ ನಿಂಬೆ, ನೇರಳೆ ಹಾಗೂ ಹೆಬ್ಬೇವು ಸಸಿಗಳನ್ನು ವಿತರಿಸಲಾಯಿತು. ನೆರವು ಪಡೆದವು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಪ್ರತಿಜ್ಞೆ ಮಾಡಿದ್ದು ವಿಶೇಷವಾಗಿತ್ತು.

ಗ್ರಾಮಸ್ಥರ ಸಹಯೋಗದಲ್ಲಿ ಉಸಿರಿಗಾಗಿ ಹಸಿರು ಟ್ರಸ್ಟ್ ಸದಸ್ಯರು ಗ್ರಾಮದ ಬಯಲು, ಮಸೀದಿ ಆವರಣ ಮತ್ತು ಸ್ಮಶಾನದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟರು. ನೆಟ್ಟ ಸಸಿಗಳ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ಟ್ರಸ್ಟಿನ‌ ಸದಸ್ಯ ಸುಹೇಲ್ ಅಹಮದ್ ವಹಿಸಿಕೊಂಡರು.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ ಉಸಿರಿಗಾಗಿ ಹಸಿರು ಟ್ರಸ್ಟಿನ ಕಾರ್ಯಕಾರಿ ಟ್ರಸ್ಟಿ ಎನ್.ಗಂಗಾಧರ ರೆಡ್ಡಿ, ‘ಸಸಿಗಳನ್ನು ನೆಡುವುದು ಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಷನ್ ಆಗಿದೆ. ಜೂನ್ ತಿಂಗಳಿನಲ್ಲಿ‌ ಎಲ್ಲಾ ಕಡೆ ಲಕ್ಷಾಂತರ ಸಸಿಗಳನ್ನು ನೆಡುವುದು ಸಾಮಾನ್ಯವಾಗಿದೆ. ಆದರೆ, ನೆಟ್ಟ ಸಸಿಗಳನ್ನು‌ ಕನಿಷ್ಠ ಒಂದು ವರ್ಷಗಳ ಕಾಲ ಪೋಷಿಸುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದರು.

‘ಟ್ರಸ್ಟ್ ಸಮುದಾಯವನ್ನು ಹಸಿರು‌ ಪಸರಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಜತೆಗೆ ಬಹುಪಯೋಗಿ ಸಸಿಗಳನ್ನು ನೀಡಿ, ಅವುಗಳ ಪಾಲನೆ ಮತ್ತು ಪೋಷಣೆಯನ್ನು ಖಾತರಿಗೊಳಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟ ಸಸಿಗಳನ್ನು ಸಂರಕ್ಷಿಸಲು ಸ್ಥಳೀಯರನ್ನು ನೇಮಕ ಮಾಡುತ್ತಿದೆ’ ಎಂದು ತಿಳಿಸಿದರು.

‘ಅತ್ಯುತ್ತಮವಾದ ಪರಿಸರ ಹೊಂದಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನಶಿಸಿಹೋಗುತ್ತಿರುವ ಅರಣ್ಯವನ್ನು ಸಂರಕ್ಷಿಸದಿದ್ದರೆ ಜೀವ ವೈವಿಧ್ಯತೆಗೆ ಅಪಾಯವಿದೆ. ಆದ್ದರಿಂದ, ಅರಣ್ಯ ಇಲಾಖೆ ಜತೆಗೆ ಜನಸಾಮಾನ್ಯರು ಕೈಜೋಡಿಸಿ ಹಸಿರನ್ನು‌ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು’ ಎಂದರು.

ಉಸಿರಿಗಾಗಿ ಹಸಿರು ಟ್ರಸ್ಟಿನ ಕಾರ್ಯಕಾರಿ ಟ್ರಸ್ಟ್ ಸದಸ್ಯರಾದ ಸುಹೇಲ್ ಅಹಮ್ಮದ್, ಶಿವಶಂಕರ, ರಾಜಶೇಖರ ಹಾಗೂ ಗ್ರಾಮಸ್ಥರಾದ ಮೌಲಾಸಾಬ್, ಪಿಲ್ಲು ಸಾಬ್, ಉಜೇರ್, ಅಕ್ರಂ ಭಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.