ADVERTISEMENT

‘ಗುಡಿಬಂಡೆ’ ಹೆಸರು ಇರುವ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:31 IST
Last Updated 26 ಜುಲೈ 2025, 4:31 IST
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದ ಹೊರವಲಯದಲ್ಲಿ ಪತ್ತೆಯಾದ ಶಾಸನೋಕ್ತ ವೀರಗಲ್ಲು
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದ ಹೊರವಲಯದಲ್ಲಿ ಪತ್ತೆಯಾದ ಶಾಸನೋಕ್ತ ವೀರಗಲ್ಲು   

ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಗ್ರಾಮದ ಹೊರವಲಯದಲ್ಲಿ ‘ಗುಡಿಬಂಡೆ’ ಹೆಸರಿನ ಪ್ರಸ್ತಾಪವಿರುವ ಮೊದಲ ಶಾಸನ ಪತ್ತೆಯಾಗಿದೆ.

‘ವಿಜಯನಗರ ಅರಸರ ಕಾಲ ಕ್ರಿ.ಶ. 1346 ಇಸವಿಗೆ ಸೇರಿದ ವೀರಗಲ್ಲು ಮತ್ತು ಕನ್ನಡ ಲಿಪಿ ಶಾಸನವು ವಿಶಿಷ್ಟವಾದುದು. ಪೆನುಗೊಂಡೆಯ ಕಾಮಯನಾಯಕನ ಪ್ರಸ್ತಾಪ ಮತ್ತು ಗುಡಿಬಂಡೆ ದುರ್ಗದ ಕೊಂಡಯದೇವನ ಆಳ್ವಿಕೆಯಲ್ಲಿ ಮರಗಯ್ಯನ ಮಗ ಕಾಟೆಯನೆಂಬ ವೀರ ಕುದುರೆ ವೀರರೊಂದಿಗೆ ನಡೆದ ಹೋರಾಟದಲ್ಲಿ ಕುದುರೆಗಳನ್ನೂ ಕೊಂದಂತೆ ತೋರುತ್ತಿದೆ’ ಎಂದು ಲಿಪಿ ಹಾಗೂ ಶಾಸನ ತಜ್ಞ ಪಿ.ವಿ.ಕೃಷ್ಣಮೂರ್ತಿ ಹೇಳಿದರು.

ಮೂರು ಹಂತಗಳಲ್ಲಿನ ಈ ವೀರಗಲ್ಲು ಚಿತ್ರಣದಲ್ಲಿ ಕುದುರೆ ಮೇಲಿನ ಇಬ್ಬರು ವೀರರ ಜೊತೆ ಒಬ್ಬ ವೀರ ಸೆಣಸಾಡುತ್ತಿದ್ದಾನೆ. ಮಡಿದ ಯೋಧನನ್ನು ಅಪ್ಸರೆಯರು ಕೈಲಾಸಕ್ಕೆ ಕರೆದೊಯ್ಯುತ್ತಿದ್ದಾರೆ. ಮೇಲಿನ ಹಂತದಲ್ಲಿ ಲಿಂಗ, ನಂದಿ ಮತ್ತು ಪೂಜೆಯಲ್ಲಿ ನಿರತನಾದ ಕಾಳಾಮುಖ ಯತಿ ಮತ್ತು ವೀರನನ್ನು ಕಾಣಬಹುದಾಗಿದೆ. 

ADVERTISEMENT

ಶಾಸನದ ಅಧ್ಯಯನಕ್ಕೆ ಬಂದ ತಜ್ಞ ಕೆ.ಆರ್.ನರಸಿಂಹನ್ ಮಾತನಾಡಿ, ‘ನೊಳಂಬವಾಡಿಯ ಒಂದು ಪ್ರಮುಖ ವಿಭಾಗವಾಗಿದ್ದ ಸಾದಲಿನಾಡು, ಚೋಳರ ಕಾಲಕ್ಕೆ ಮಾರಾಯಪಾಡಿಯ ಒಂದು ವಿಭಾಗವಾಗಿತ್ತು. ಆದರೆ ಈಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾದಲಿ ಹೋಬಳಿ ಕೇಂದ್ರವಾಗಿದೆ’ ಎಂದರು.

10ನೇ ಶತಮಾನದ ಅಂತಿಮ ಭಾಗದಲ್ಲಿ ಅಂದರೆ ಚೋಳರ ಸಾಮಂತರಾಗಿದ್ದ ನೊಳಂಬರ ಕಾಲದಲ್ಲಿ ನಿರ್ಮಾಣವಾದ ಶಿವಾಲಯದ ದೇವಕೋಷ್ಟಕಗಳು, ಸಪ್ತ ಮಾತೃಕೆಯರ ವಿಗ್ರಹಗಳು ಹೊಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೊಯ್ಸಳ ರಾಜ ವಿಷ್ಣುವರ್ಧನ 11ನೇ ಶತಮಾನದಲ್ಲಿ ಚೋಳರನ್ನು ಕಂಚಿಯವರೆಗೆ ಓಡಿಸಿ ವಾಪಾಸು ರಾಜಧಾನಿಗೆ ಬರುವಾಗ ಸಾದಲಿಯಲ್ಲಿದ್ದ ಇರುಂಗೋಳಚೋಳನ ಉತ್ತರಾಧಿಕಾರಿಗಳನ್ನು ಹಿಮ್ಮೆಟ್ಟಿಸಿದ ಸಮಾಚಾರವೂ ಚರಿತ್ರೆಯಲ್ಲಿ ಇದೆ.

ಶಾಸನ ತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸಾದಲಿ ನಾಗೇಶ್, ನಾಗರಾಜ್, ವಿಜಯಶಂಕರ್, ಡಿ.ಎನ್.ಸುದರ್ಶನರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.