ADVERTISEMENT

ಗೌರಿಬಿದನೂರು ‘ಕೈ’ ಪಾಳೆಯದಲ್ಲಿ ಬೀದಿ ರಂಪ

ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆಯೇ ತಾರಕಕ್ಕೇರಿದ ಆರೋಪ–ಪ್ರತ್ಯಾರೋಪ

ಈರಪ್ಪ ಹಳಕಟ್ಟಿ
Published 4 ಜೂನ್ 2020, 3:31 IST
Last Updated 4 ಜೂನ್ 2020, 3:31 IST
ಉದ್ಯಮಿ ಪುಟ್ಟಸ್ವಾಮಿ ಗೌಡ ಅವರೊಂದಿಗೆ ಗುರುತಿಸಿಕೊಂಡ ಕಾಂಗ್ರೆಸ್‌ ಮುಖಂಡರು
ಉದ್ಯಮಿ ಪುಟ್ಟಸ್ವಾಮಿ ಗೌಡ ಅವರೊಂದಿಗೆ ಗುರುತಿಸಿಕೊಂಡ ಕಾಂಗ್ರೆಸ್‌ ಮುಖಂಡರು   

ಚಿಕ್ಕಬಳ್ಳಾಪುರ: ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್‌ ಪಾಳೆಯದಲ್ಲಿ ಇತ್ತೀಚೆಗೆ ಧುತ್ತೆದ್ದು ಸ್ವಪಕ್ಷೀಯರಲ್ಲೇ ಆರೋಪ, ಪ್ರತ್ಯಾರೋಪಗಳು ಮೊಳಗಲು ಆರಂಭಿಸಿ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.

ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಮತ್ತು ಅವರಿಂದ ಅಂತರ ಕಾಯ್ದುಕೊಂಡಿರುವ ಕೈ ಬಣದ ಮುಖಂಡರ ನಡುವೆ ದಿನೇ ದಿನೇ ತಾರಕಕ್ಕೆ ಏರುತ್ತಿರುವ ವಾಕ್ಸಮರ ಹಾದಿಬೀದಿ ರಂಪವಾಗಿ ಮಾರ್ಪಡುತ್ತಿರುವುದು, ವಿರೋಧಿ ಬಣಗಳಿಗೆ ಉಚಿತ ಮನರಂಜನೆ ಒದಗಿಸುತ್ತಿದೆ.

ವಿಧಾನಸಭೆ ಚುನಾವಣೆ ಇನ್ನೂ ಮುರ್ನಾಲ್ಕು ವರ್ಷ ಮುಂದಿರುವಾಗಲೇ ಕ್ಷೇತ್ರದಲ್ಲಿ ದೂರದೃಷ್ಟಿಯಿಂದ ಸೇವಾ ಕಾರ್ಯ ಶುರುವಿಟ್ಟುಕೊಂಡಿರುವ ಅಲಕಾಪುರದ ಬಳಿ ಇರುವ ಏಷಿಯನ್ ಪ್ಯಾಬ್ ಟೆಕ್ ಸೋಲಾರ್ ಘಟಕದ ವ್ಯವಸ್ಥಾಪಕ, ಸಂಸದ ಬಿ.ಎನ್.ಬಚ್ಚೇಗೌಡರ ಬೀಗರಾಗಿರುವ ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ದಿನೇ ದಿನೇ ವರ್ಚಸ್ಸು ವೃದ್ಧಿಸಿಕೊಳ್ಳುತ್ತಿರುವುದೇ ಕೈ ಪಾಳೆಯದೊಳಗಿನ ಈ ತಳಮಳಕ್ಕೆ ಕಾರಣ ಎನ್ನಲಾಗಿದೆ.

ADVERTISEMENT

ಶಿವಶಂಕರರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ನಡುವಿನ ರಾಜಕೀಯ ದ್ವೇಷ ಇದೀಗ ಎಲ್ಲರಿಗೂ ತಿಳಿದಿರುವ ಇತಿಹಾಸ. ಇದೀಗ ಆ ದ್ವೇಷ ಶಿವಶಂಕರರೆಡ್ಡಿ ಮತ್ತು ಪುಟ್ಟಸ್ವಾಮಿಗೌಡರ ನಡುವೆ ಕೂಡ ಹೊತ್ತಿಕೊಳ್ಳುತ್ತಿರುವುದೇ ಹೊಸ ವರಾತಗಳಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ಬಲ್ಲವರು.

ಈ ಹಿಂದೆ ತಾಲ್ಲೂಕಿನ ಕಾಂಗ್ರೆಸ್ ಪಾಳೆಯ ದಶಕಗಳಿಂದ ಪ್ರಬಲ ನಾಯಕರಾಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್‌.ವಿ.ಮಂಜುನಾಥ್‌, ಡಿ.ನರಸಿಂಹಮೂರ್ತಿ, ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷರಾದ ಅಬ್ದುಲ್ಲಾ, ಎಂ.ನರಸಿಂಹಮೂರ್ತಿ, ಜಿ.ಕೆ.ಸತೀಶ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಪುಟ್ಟಸ್ವಾಮಿ ಗೌಡರೊಂದಿಗೆ ಗುರುತಿಸಿಕೊಳ್ಳಲು ಆರಂಭಿಸಿದ್ದು, ಶಾಸಕರ ನಿದ್ದೆಗೆಡಿಸಿದೆ ಎನ್ನುತ್ತಾರೆ ಅವರ ಆಪ್ತರು.

ಇತ್ತೀಚೆಗೆ ಶಿವಶಂಕರರೆಡ್ಡಿ ಅವರು ಪ್ರತಿ ಸಭೆಗಳಲ್ಲೂ, ‘ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ, ಹಣಕ್ಕಾಗಿ ಮಾರಿಕೊಂಡವರಿಂದ ಪಕ್ಷಕ್ಕೆ ನಷ್ಟವಿಲ್ಲ. ಆದರೆ, ಪಕ್ಷ ದ್ರೋಹಿಗಳಿಗೆ ರಾಜಕೀಯ ಭವಿಷ್ಯವಿಲ್ಲ’ ಎಂದು ಟೀಕಿಸುತ್ತಿರುವುದು ಆ ಪಕ್ಷದಲ್ಲಿಯೇ ಇದ್ದು, ಅವರಿಂದ ಅಂತರ ಕಾಯ್ದುಕೊಂಡಿರುವವರನ್ನು ಕೆರಳುವಂತೆ ಮಾಡಿದೆ.

ಪರಿಣಾಮ, ಪುಟ್ಟಸ್ವಾಮಿ ಗೌಡರೊಂದಿಗೆ ಗುರುತಿಸಿಕೊಂಡವರು ಶಾಸಕರ ಟೀಕೆಗೆ ಪ್ರತಿಯಾಗಿ, ‘ಕ್ಷೇತ್ರದಲ್ಲಿ ಪಕ್ಷಕ್ಕೆ ಮೋಸ ಮಾಡುವುದನ್ನು ಮೊದಲಿಗೆ ಕಲಿಸಿದ್ದೇ ಶಿವಶಂಕರರೆಡ್ಡಿ. ಅವರು ರಾಜಕೀಯ ಗುರುವಿಗೇ ದ್ರೋಹ ಬಗೆದಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗೆ ಮೋಸ ಮಾಡಿದ್ಧಾರೆ. ರಹಸ್ಯವಾಗಿ ಜೆಡಿಎಸ್‌, ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತ ಬಂದಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದ್ಧಾರೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಟೀಕಾಸ್ತ್ರಗಳು ವಿರಾಮ ನೀಡುವ ಲಕ್ಷಣಗಳಿಲ್ಲ. ಶಾಸಕರನ್ನು ತೊರೆದು ದೂರವಾದವರೆಲ್ಲ ಇದೀಗ ಶಿವಶಂಕರರೆಡ್ಡಿ ಅವರನ್ನು ಸೋಲಿಸಲೇ ಬೇಕೆಂಬ ಒಂದಂಶದ ಗುರಿಯೊಂದಿಗೆ ಪುಟ್ಟಸ್ವಾಮಿ ಗೌಡರ ಕೈಬಲಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎನ್ನಲಾಗಿದೆ.

ಇದೇ ರೀತಿಯ ಈ ಹಿಂದೆ ಅನೇಕ ಸಮಾಜ ಸೇವಕರು ಎಸೆದ ಸವಾಲನ್ನು ತಮ್ಮ ರಾಜಕೀಯ ತಂತ್ರಗಾರಿಕೆಯಿಂದ ಜೈಯಿಸಿಕೊಂಡು ಬಂದಿರುವ ಶಾಸಕರಿಗೆ ಇದೀಗ ತಮ್ಮ ಸೇನೆಯ ಪ್ರಬಲ ಸೇನಾನಿಗಳೆಲ್ಲ ಎದುರಾಳಿಯ ಪಡೆ ಸೇರಿರುವುದು ಚಿಂತೆಗೀಡು ಮಾಡಿದೆ ಎನ್ನಲಾಗಿದೆ. ಹೀಗಾಗಿಯೇ, ಅವರು ಹತಾಶರಾಗಿ ತಾವು ಬೆಳೆಸಿದ ಮುಖಂಡರ ವಿರುದ್ಧವೇ ಸಭೆಗಳಲ್ಲಿ ಟೀಕೆ ಮಾಡಲು ಶುರುವಿಟ್ಟುಕೊಂಡಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್‌ ಪಾಳೆಯದಲ್ಲಿ ಬಣ ರಾಜಕೀಯ ಜೋರಾಗಿ, ನಿಷ್ಠಾವಂತ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿ ವರಿಷ್ಠರನ್ನು ಶಪಿಸುತ್ತಿದ್ದಾರೆ. ಈವರೆಗೆ ಈ ‘ಕೈ’ ಗಾಯಕ್ಕೆ ಹೈಕಮಾಂಡ್‌ ಮುಲಾಮು ಸವರುವ ಕೆಲಸ ಮಾಡದೆ ಇರುವುದು ಕೂಡ ಕಾಂಗ್ರೆಸ್‌ ಪಾಳೆಯದ ಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಲಿದೆ ಎಂದು ಸ್ಥಳೀಯರು ವಿಶ್ಲೇಷಣೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.