ADVERTISEMENT

ಅಲೆಮಾರಿಗರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿ

ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 13:59 IST
Last Updated 6 ಅಕ್ಟೋಬರ್ 2020, 13:59 IST
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರಿಗೆ ಸರ್ಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ಸಮರ್ಪಕವಾಗಿ ದೊರಕಿಸಿಕೊಡಲು ಎಲ್ಲಾ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.‌

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಿವಿಧ ಇಲಾಖೆಗಳಲ್ಲಿರುವ ಸರ್ಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಭೂ ಒಡೆತನ ಯೋಜನೆಡಿಯಲ್ಲಿ ಭೂಮಿ ಇಲ್ಲದವರಿಗೆ ಆದಷ್ಟು ಭೂಮಿಯನ್ನು ಖರೀದಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ನಿವೇಶನ ರಹಿತ ಹಾಗೂ ವಸತಿ ರಹಿತ ಅರೆ ಅಲೆಮಾರಿಗರನ್ನು ಗುರ್ತಿಸಿ ವಸತಿ ಕಲ್ಪಿಸಲಾಗುತ್ತದೆ’ ಎಂದರು.

‘ಅಲೆಮಾರಿ ಸಮುದಾಯದವರು ನೆಲೆಸಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅಲೆಮಾರಿ ಜನಾಂಗದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮಿಸಬೇಕು’ ಎಂದು ಹೇಳಿದರು.

‘ಅಲೆಮಾರಿ ಸಮುದಾಯದ ಜನಸಂಖ್ಯೆ ಹೆಚ್ಚು ಇರುವ ಕಡೆ ಜವಳಿ ಇಲಾಖೆ ವತಿಯಿಂದ ಬಟ್ಟೆ ಕಾರ್ಖಾನೆ ಸೇರಿದಂತೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಅನೇಕ ಅಲೆಮಾರಿ ಜನಾಂಗಕ್ಕೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಜಿಲ್ಲೆಯಲ್ಲಿ ಅಕ್ರಮವಾಗಿ ಸ್ಮಶಾನಗಳನ್ನು ಒತ್ತುವರಿ ಮಾಡಿದ್ದರೆ ತಕ್ಷಣವೇ ಅದನ್ನು ತೆರವುಗೊಳಿಸಬೇಕು. ಖಾಸಗಿ ಶಾಲೆಗಳಲ್ಲಿ ಹೆಚ್ಚಾಗಿ ಶುಲ್ಕ ವಸೂಲಿ ಮಾಡುತ್ತಿದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಶೋಕ್ ಮಾತನಾಡಿ, ‘ಜಿಲ್ಲೆಯ ಸೊಣ್ಣಪುರ ಗ್ರಾಮ ಹಾಗೂ ದೊಡ್ಡಕಿರುಗಂಬಿ ಗ್ರಾಮದಲ್ಲಿ ನಿವೇಶನ ರಹಿತ ಅಲೆಮಾರಿ ಜನಾಂಗದವರಿಗೆ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮನ್ನಾಪುರ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘2019-20 ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ 2,882 ವಿದ್ಯಾರ್ಥಿಗಳಿಗೆ 54.98 ಲಕ್ಷ ವಿದ್ಯಾರ್ಥಿ ವೇತನವನ್ನು ವಿಶೇಷ ಪ್ರೋತ್ಸಾಹಧನವನ್ನಾಗಿ ಅಲೆಮಾರಿ, ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ನೀಡಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಂ.ಮುನೇಗೌಡ, ಸರಸ್ವತಮ್ಮ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.