ADVERTISEMENT

‘ಬೆಳೆ ದರ್ಶಕ’ದಲ್ಲಿ ಆಕ್ಷೇಪಣೆ ಸಲ್ಲಿಸಿ

ಪಹಣಿಯಲ್ಲಿ ಬೆಳೆ ತಪ್ಪಾಗಿ ನಮೂದಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಸರಳವಾದ ಅವಕಾಶ, ಆಕ್ಷೇಪಣೆ ಸಲ್ಲಿಸಲು ಜನವರಿ 30 ಕೊನೆಯ ದಿನ

ಈರಪ್ಪ ಹಳಕಟ್ಟಿ
Published 24 ಜನವರಿ 2020, 19:30 IST
Last Updated 24 ಜನವರಿ 2020, 19:30 IST
.
.   

ಚಿಕ್ಕಬಳ್ಳಾಪುರ: ಪಹಣಿಯಲ್ಲಿ (ಆರ್‌ಟಿಸಿ) ಅಧಿಕಾರಿಗಳು ಸರಿಯಾಗಿ ಬೆಳೆ ಮಾಹಿತಿ ನಮೂದಿಸದ ಕಾರಣ ನೀವು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಯೋಜನದಿಂದ ವಂಚಿತರಾಗುತ್ತಿದ್ದೀರಾ? ಹಾಗಿದ್ದರೆ, ನೀವು ‘ಬೆಳೆ ದರ್ಶಕ’ ಮೊಬೈಲ್ ಆ್ಯಪ್‌ ಮೂಲಕವೇ ಸುಲಭವಾಗಿ ಆಕ್ಷೇಪಣೆ ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

ಇತ್ತೀಚೆಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಖರೀದಿ ಕೇಂದ್ರ ತೆರೆಯುತ್ತಿದ್ದಂತೆ ಮಾರುಕಟ್ಟೆಗಿಂತಲೂ ಉತ್ತಮವಾದ ಬೆಲೆ ಕಂಡು ಸಂತಸದಿಂದಲೇ ರಾಗಿ ಮಾರಲು ನೋಂದಣಿಗೆ ಹೋದ ರೈತರಲ್ಲಿ ಸಾಕಷ್ಟು ಜನರಿಗೆ ತಪ್ಪಾದ ಬೆಳೆ ಮಾಹಿತಿಯಿಂದ ಸಂಕಷ್ಟ ಎದುರಾಗಿತ್ತು.

ಪಹಣಿಯಲ್ಲಿ ಪರಿಷ್ಕರಣೆಯಾಗದ ಮಾಹಿತಿಯಿಂದಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿ, ಅನೇಕ ರೈತರು ಪಹಣಿಯಲ್ಲಿನ ದೋಷ ಪರಿಹರಿಸುವ ದಾರಿ ತಿಳಿಯದೆ ಖರೀದಿ ಕೇಂದ್ರದ ಸಹವಾಸವೇ ಬೇಡ ಎಂದು ರೋಸಿ ಹೋಗಿದ್ದರು.

ADVERTISEMENT

ಈ ಸಮಸ್ಯೆ ಅರಿವಿಗೆ ಬರುತ್ತಿದ್ದಂತೆ ಕಂದಾಯ ಮತ್ತು ಕೃಷಿ ಇಲಾಖೆಗಳು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್) ಸಹಕಾರದೊಂದಿಗೆ ಆ್ಯಪ್‌ ಮೂಲಕ ರೈತರ ಸಮಸ್ಯೆ ಬಗೆಹರಿಸಲು ಮುಂದಾಗಿವೆ. ರೈತರ ಪಹಣಿಯಲ್ಲಿ ಬೆಳೆ ತಪ್ಪಾಗಿ ನಮೂದಾಗಿದ್ದರೆ ಮತ್ತು ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಲಾದ ಬೆಳೆ ಮಾಹಿತಿಯ ಕುರಿತು ಆಕ್ಷೇಪಣೆಗಳಿದ್ದರೆ ‘ಬೆಳೆ ದರ್ಶಕ’ ಮೊಬೈಲ್ ಆ್ಯಪ್ ಮೂಲಕ ಸಲ್ಲಿಸುವ ವ್ಯವಸ್ಥೆ ಕಲ್ಪಿಸಿವೆ.

ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಡೆಸಿದ ಬೆಳೆ ಸಮೀಕ್ಷೆ ಮಾಹಿತಿ ಈವರೆಗೆ ಪಹಣಿಯಲ್ಲಿ ಸರಿಯಾಗಿ ಪರಿಷ್ಕರಣೆಯಾಗದ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದು ತೊಂದರೆಗೆ ಒಳಗಾದ ರೈತರ ಆರೋಪ.

ಇದು ಸದ್ಯ ನೋಂದಣಿ ಕೇಂದ್ರಗಳಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಯನ್ನು ರೈತರು ಇದೀಗ ‘ಬೆಳೆ ದರ್ಶಕ’ ಆ್ಯಪ್ ಮೂಲಕ ಮನೆಯಲ್ಲಿಯೇ ಕುಳಿತು ಸರಿಪಡಿಸಿಕೊಳ್ಳಬಹುದಾಗಿದೆ.

ಆ್ಯಪ್‌ನಲ್ಲಿ ಆಕ್ಷೇಪಣೆ ಸಲ್ಲಿಸುವುದು ಹೇಗೆ?
ರೈತರು ಸ್ಮಾರ್ಟ್‌ ಫೋನ್‌ಗಳ ಮೂಲಕ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘Bele Darshak Karnataka-2019‘ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಸ್ಥಾಪಿಸಿಕೊಳ್ಳಬೇಕು. ಆ್ಯಪ್‌ ತೆರೆದಾಗ ರೈತರ ವಿಭಾಗದ ಆಯ್ಕೆ ಮೇಲೆ ಕ್ಲಿಕ್ ಮಾಡಿ ಪ್ರವೇಶಿಸಿದರೆ ಸರ್ವೇ ನಂಬರ್ ಆಯ್ಕೆಯ ಪುಟ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಮಾಲೀಕರ ವಿವರ ಭರ್ತಿ ಮಾಡಬೇಕು. ಬಳಿಕ ಬೆಳೆ ಸಮೀಕ್ಷೆಗಾರರ ವಿವರ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿದಾಗ ಸಮೀಕ್ಷೆಗಾರರ ಹೆಸರು, ಮೊಬೈಲ್ ನಂಬರ್ ಗೋಚರಿಸುತ್ತದೆ.

ಆ ಪುಟದಿಂದ ಹಿಂದಿರುಗಿ, ಬಳಿಕ ‘ದಾಖಲಿಸಿದ ಬೆಳೆ ವಿವರ’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆ ಪುಟದಲ್ಲಿ ಬೆಳೆ ಹೆಸರು, ವಿಸ್ತೀರ್ಣ, ವರ್ಗ, ಷರಾ ಸಮೇತ ಛಾಯಾಚಿತ್ರಗಳೊಂದಿಗೆ ಮಾಹಿತಿ ಗೋಚರವಾಗುತ್ತದೆ. ಅದೇ ಪುಟದಲ್ಲಿ ಕೆಳಗೆ ಆಕ್ಷೇಪಣೆ ಸಲ್ಲಿಸುವ ಆಯ್ಕೆಗಳಿವೆ. ಆ ಆಯ್ಕೆಯ ಮೇಲೆ ಕ್ಲಿಕಿಸಿದರೆ, ತೆರೆದುಕೊಳ್ಳುವ ಪುಟದಲ್ಲಿ ಆಕ್ಷೇಪಕರ ಹೆಸರು, ಮೊಬೈಲ್ ಸಂಖ್ಯೆ, ಜಮೀನಿನ ಮಾಲೀಕರೊಂದಿಗೆ ಸಂಬಂಧ ನಮೂದು ಮಾಡಬೇಕು.

ಆಕ್ಷೇಪಣೆಯ ವಿವರದಲ್ಲಿ ಬೆಳೆ ತಪ್ಪಾಗಿ ನಮೂದಿಸಲಾಗಿದೆ, ಬೆಳೆ ನಮೂದಿಸಿಲ್ಲ, ವಿಸ್ತೀರ್ಣ ಸರಿಯಾಗಿ ನಮೂದಿಸಿಲ್ಲ, ಪಕ್ಕದ ಜಮೀನಿನ ವಿವರ ನಮೂದಿಸಲಾಗಿದೆ ಇತ್ಯಾದಿ ಆಯ್ಕೆಗಳಲ್ಲಿ ತಮಗೆ ಸಂಬಂಧಿಸಿ ಸಮಸ್ಯೆ ಆಯ್ಕೆ ಮಾಡಬೇಕು.

ಬಳಿಕ ಓಟಿಪಿ (ಒಂದು ಬಾರಿ ಬಳಸಬಹುದಾದ ಪಾಸ್‌ವರ್ಡ್‌) ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆ್ಯಪ್‌ನಲ್ಲಿ ನಮೂದಿಸಿದ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂದಿಸಿ, ಬಳಿಕ ತೆರೆದುಕೊಳ್ಳುವ ಪುಟದಲ್ಲಿ ಧ್ವನಿ ಮುದ್ರಣ ಆಯ್ಕೆ ಮಾಡಿಕೊಂಡು ರೈತರು ಸಮಸ್ಯೆ ಹೇಳಿಕೊಳ್ಳಬಹುದು ಅಥವಾ ಬೆಳೆಯ ಚಿತ್ರಗಳಿದ್ದರೆ ಕ್ಯಾಮೆರಾ ಆಯ್ಕೆ ಮೇಲೆ ಕ್ಲಿಕ್ ಮಾಡಿ ಚಿತ್ರಗಳನ್ನು ಸಲ್ಲಿಸಬೇಕು. ಅಂತಿಮವಾಗಿ ಮೊಬೈಲ್ ಸಂಖ್ಯೆಗೆ ಆಕ್ಷೇಪಣೆ ಸಂಖ್ಯೆ ಸಮೇತ ಆಕ್ಷೇಪಣೆ ಸಲ್ಲಿಕೆಯಾದ ಬಗ್ಗೆ ಸಂದೇಶ ಬರುತ್ತದೆ.

ಅನೇಕ ರೈತರಿಗೆ ತಮ್ಮಲ್ಲಿ ಸ್ಮಾರ್ಟ್‌ ಫೋನ್‌ಗಳಿಲ್ಲ, ಇದ್ದರೂ ಆ್ಯಪ್‌ ಮೂಲಕ ದೂರು ನೀಡುವಷ್ಟು ತಿಳುವಳಿಕೆ ತಮಗೆ ಇಲ್ಲ ಎಂಬ ಚಿಂತೆ ಮೂಡುವುದು ಸಹಜ. ಆ ಚಿಂತೆಪಡುವ ಅಗತ್ಯವಿಲ್ಲ. ಇಲ್ಲಿ ಆ್ಯಪ್‌ ಮೂಲಕ ರೈತರೇ ಸ್ವತಃ ಆಕ್ಷೇಪಣೆ ಸಲ್ಲಿಸಬೇಕಿಲ್ಲ. ಅವರ ಕುಟುಂಬ ಸದಸ್ಯರು ಕೂಡ ಆಕ್ಷೇಪಣೆ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.