ADVERTISEMENT

ಬೇಸಿಗೆ; ಮೊಸರಿಗೆ ದುಪ್ಪಟ್ಟಾದ ಬೇಡಿಕೆ

ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಬರಬೇಕಾಗಿದೆ ₹ 13 ಕೋಟಿ ಪ್ರೋತ್ಸಾಹಧನ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಏಪ್ರಿಲ್ 2025, 5:17 IST
Last Updated 11 ಏಪ್ರಿಲ್ 2025, 5:17 IST
ನಂದಿನಿ ಮೊಸರು
ನಂದಿನಿ ಮೊಸರು   

ಚಿಕ್ಕಬಳ್ಳಾಪುರ: ಬೇಸಿಗೆಯ ದಿನಗಳಲ್ಲಿ ಜನರು ತಂಪು ಪಾನೀಯಕ್ಕೆ ಹೆಚ್ಚು ಮೊರೆ ಹೋಗುವರು. ಮನೆಗಳಲ್ಲಿಯೂ ಮಜ್ಜಿಗೆ ಮತ್ತು ಮೊಸರು ಕಡ್ಡಾಯ ಎನ್ನುವ ಸ್ಥಿತಿ ಇರುತ್ತದೆ. ಮಜ್ಜಿಗೆ ದೇಹವನ್ನು ತಂಪಾಗಿ ಇಡುತ್ತದೆ ಎನ್ನುವ ಕಾರಣದಿಂದ ಟೀ ಅಂಗಡಿಗಳಲ್ಲಿ, ರಸ್ತೆ ಬದಿಗಳಲ್ಲಿಯೂ ಮಜ್ಜಿಗೆ ಮಾರಾಟ ಜೋರಾಗಿ ನಡೆದಿದೆ. 

ತಂಪು ಪಾನೀಯಗಳು ದೊರೆಯುವ ಅಂಗಡಿಗಳಲ್ಲಿಯೂ ಮಜ್ಜಿಗೆ ದೊರೆಯುತ್ತಿದೆ. ಹೀಗೆ ಮಜ್ಜಿಗೆ ತಯಾರಿಕೆಯ ಕಾರಣದಿಂದ ಮೊಸರಿಗೆ ಬೇಡಿಕೆ ಹೆಚ್ಚಿದೆ.

ಪ್ರಸಕ್ತ ವರ್ಷದ ಬೇಸಿಗೆ ದಿನಗಳಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಮೊಸರಿನ ಬೇಡಿಕೆ ದುಪ್ಪಟ್ಟಾಗಿದೆ. ಸಾಮಾನ್ಯ ದಿನಗಳಲ್ಲಿ ಒಂದು ದಿನಕ್ಕೆ 45ರಿಂದ 50 ಸಾವಿರ ಲೀಟರ್ ಮೊಸರು ಮಾರಾಟವಾಗುತ್ತದೆ. ಆದರೆ ಬೇಸಿಗೆಯ ಈ ದಿನಗಳಲ್ಲಿ 80 ಸಾವಿರ ಲೀಟರ್‌ಗೂ ಹೆಚ್ಚು ಮೊಸರು ನಿತ್ಯ ಮಾರಾಟವಾಗುತ್ತಿದೆ. ಮೊಸರಿಗೆ ಬೇಡಿಕೆ ಮನಗಂಡ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಮೊಸರು ಉತ್ಪಾದನೆಗೆ ಗಮನ ನೀಡಿದೆ.  

ADVERTISEMENT

ಹೀಗೆ ಮೊಸರಿಗೆ ಬೇಡಿಕೆ ಹೆಚ್ಚಿರುವ ನಡುವೆಯೇ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿದಿದೆ. ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಹಾಲು ಉತ್ಪಾದನೆ ಕುಸಿಯುತ್ತದೆ. ಬಿಸಿಲು, ಹಸಿರು ಮೇವು ಕೊರತೆಯ ಕಾರಣದಿಂದ ಉತ್ಪಾದನೆ ಕುಂಠಿತ ಆಗುತ್ತದೆ. ಆ ಪ್ರಕಾರ ಜಿಲ್ಲೆಯಲ್ಲಿ ಬೇಸಿಗೆಯ ದಿನಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ. ಈ ಹಿಂದಿನ ವರ್ಷಗಳಲ್ಲಿಯೂ ಬೇಸಿಗೆ ಅವಧಿಯಲ್ಲಿ ಹಾಲು ಉತ್ಪಾದನೆ ಕುಂಠಿತವಾಗಿತ್ತು.

ಚಿಮುಲ್ ಮೂಲಗಳ ಪ್ರಕಾರ 2024ರ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ಸರಾಸರಿ 4.50 ಲಕ್ಷ ಲೀಟರ್ ಉತ್ಪಾದನೆ ಇತ್ತು. ಜನವರಿಯಲ್ಲಿ 4.30 ಲಕ್ಷ ಲೀಟರ್, ಫೆಬ್ರುವರಿಯಲ್ಲಿ 4 ಲಕ್ಷ ಲೀಟರ್ ಮತ್ತು ಮಾರ್ಚ್‌ನಲ್ಲಿ 4.02 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಿದೆ. ಹೀಗೆ ತಿಂಗಳಿನಿಂದ ತಿಂಗಳಿಗೆ ಉತ್ಪಾದನೆ ಕುಸಿದಿದೆ.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಲೀಟರ್ ಹಾಲಿಗೆ ₹ 36.40 ದರ ನೀಡುತ್ತಿದೆ. ಇದರ ಜೊತೆಗೆ ಸರ್ಕಾರವು ₹ 5 ಪ್ರೋತ್ಸಾಹಧನ ಇದೆ. ಒಕ್ಕೂಟವು ತನ್ನಲ್ಲಿ ಸಂಗ್ರಹವಾಗುವ ಹಾಲಿನ ಪೈಕಿ 3.10 ಲಕ್ಷ ಲೀಟರ್ ಅನ್ನು ನಿತ್ಯ ಮಾರಾಟ ಮಾಡುತ್ತದೆ. ಉಳಿಕೆ ಹಾಲನ್ನು ಬೇರೆ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ. 

ಪೂರ್ಣ ಬಾರದ ಪ್ರೋತ್ಸಾಹಧನ: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಒಂದು ಲೀಟರ್‌ಗೆ ₹ 5 ಪ್ರೋತ್ಸಾಹಧನ ನೀಡುತ್ತದೆ. ಜಿಲ್ಲೆಯ ಹಾಲು ಉತ್ಪಾದಕರಿಗೆ ಜನವರಿಯವರೆಗೆ ಪ್ರೋತ್ಸಾಹಧನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಫೆಬ್ರುವರಿ ಮತ್ತು ಮಾರ್ಚ್‌ನ ಅಂದಾಜು ₹ 13 ಕೋಟಿ ಪ್ರೋತ್ಸಾಹಧನವು ಬಿಡುಗಡೆ ಬಾಕಿ ಇದೆ. 

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಅಸ್ತಿತ್ವಕ್ಕೆ ಬಂದ ನಂತರ ಇತ್ತೀಚೆಗೆ ಮಾ.15ರವರೆಗೆ ಲೀಟರ್ ಹಾಲಿನ ದರವನ್ನು ₹ 1 ಹೆಚ್ಚಿಸಿದೆ. 

ತಾಲ್ಲೂಕು;ಮಾರ್ಚ್‌ನಲ್ಲಿ ಹಾಲು ಉತ್ಪಾದನೆ (ಲೀಟರ್‌ಗಳಲ್ಲಿ)
ಬಾಗೇಪಲ್ಲಿ;26,114
ಚಿಕ್ಕಬಳ್ಳಾಪುರ;62,065
ಚಿಂತಾಮಣಿ;1,14,775
ಗುಡಿಬಂಡೆ;13,371
ಗೌರಿಬಿದನೂರು;75,229
ಶಿಡ್ಲಘಟ್ಟ;1,10,219
ಒಟ್ಟು;4,01,773

‘ಉತ್ಪಾದನೆ ಗುಣಮಟ್ಟ ಹೆಚ್ಚಳಕ್ಕೆ ಪ್ರೋತ್ಸಾಹ’

ಬೇಸಿಗೆಯ ದಿನಗಳಲ್ಲಿ ಹಾಲಿನ ಉತ್ಪಾದನೆ ಕುಸಿಯುತ್ತದೆ. ಆದ ಕಾರಣದಿಂದಲೇ ಒಕ್ಕೂಟವು ಲೀಟರ್‌ಗೆ ಹಾಲಿನ ದರವನ್ನು ₹ 1 ಹೆಚ್ಚಿಸಿತ್ತು. ಇದರ ಜೊತೆಗೆ ಸರ್ಕಾರವು ₹ 4 ಪ್ರೋತ್ಸಾಹಧನ ಹೆಚ್ಚಿಸಿದೆ. ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಒಕ್ಕೂಟವು ಮಾಡುತ್ತಿದೆ ಎಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಗೌಡ ತಿಳಿಸಿದರು. ಬೇಸಿಗೆ ಕಾರಣ ಹಾಲು ಉತ್ಪಾದನೆ ಕುಂಠಿತವಾಗುತ್ತದೆ ಎಂದು ರೈತರಿಗೆ ಹಸಿರು ಮೇವು ಬೆಳೆಯಲು ಪ್ರೋತ್ಸಾಹಧನ ನೀಡಿದ್ದೇವೆ. ಒಂದು ಎಕರೆ ಹಸಿರು ಮೇವಿಗೆ ₹ 3500 ನೀಡಿದ್ದೇವೆ. ಜಿಲ್ಲೆಯಲ್ಲಿ 1500 ಎಕರೆಯಲ್ಲಿ ರೈತರು ಹಸಿರು ಮೇವು ಬೆಳೆದಿದ್ದಾರೆ. ಉತ್ಪಾದನೆ ಮತ್ತು ಗುಣಮಟ್ಟ  ಹೆಚ್ಚಿಸಲು ಕ್ರಮವಹಿಸಿದ್ದೇವೆ. ಹೀಗೆ ಪ್ರೋತ್ಸಾಹದಾಯಕ ಕ್ರಮಗಳಿಂದ ರೈತರು ಹಸುಗಳನ್ನು ಮಾರಾಟ ಮಾಡಲು ಮುಂದಾಗುವುದಿಲ್ಲ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.