ADVERTISEMENT

‘ದೊಡ್ಡ’ ಖಾತೆಯ ನಿರೀಕ್ಷೆಯಲ್ಲಿ ಬೆಂಬಲಿಗರು

ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ‘ಪ್ರಭಾವಿ’ ಖಾತೆ ಸಿಗುವ ಆಸೆಯಲ್ಲಿ ಕೇಸರಿ ಪಾಳೆಯ

ಈರಪ್ಪ ಹಳಕಟ್ಟಿ
Published 11 ಡಿಸೆಂಬರ್ 2019, 19:45 IST
Last Updated 11 ಡಿಸೆಂಬರ್ 2019, 19:45 IST
.
.   

ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ತೆರೆ ಬೀಳುತ್ತಿದ್ದಂತೆ, ಇದೀಗ ಕ್ಷೇತ್ರದಲ್ಲಿ ಮೂರನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಯಾವ ಖಾತೆ ಸಿಗಬಹುದು ಎಂಬ ಲೆಕ್ಕಾಚಾರಗಳು ಚರ್ಚೆಗೆ ಎಡೆ ಮಾಡಿವೆ.

ಅತ್ತ ರಾಜಧಾನಿಯಲ್ಲಿ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆ ವಿಚಾರವಾಗಿ ಕರಸತ್ತು ನಡೆಸಿದ್ದರೆ, ಇತ್ತ ಜಿಲ್ಲೆಯಲ್ಲಿ ಶಾಸಕರ ಬೆಂಬಲಿಗರು ಮತ್ತು ಬಿಜೆಪಿ ಪಾಳೆಯದಲ್ಲಿ ಸುಧಾಕರ್ ಅವರು ಯಾವ ಖಾತೆ ಸಚಿವರಾಗಬಹುದು ಎಂಬ ಕುತೂಹಲ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿ ವದಂತಿಗಳನ್ನು ಹುಟ್ಟು ಹಾಕುತ್ತಿವೆ.

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿ ವಿಫಲರಾಗಿದ್ದ ಸುಧಾಕರ್ ಅವರು, ಆ ಸರ್ಕಾರ ಪತನಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ಅವರ ‘ವರ್ಚಸ್ಸು’ ಗಗನಮುಖಿಯಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರ ಭದ್ರಪಡಿಸಲು ನೆರವಾದ ಸುಧಾಕರ್ ಅವರಿಗೆ ತಮ್ಮ ಸಂಪುಟದಲ್ಲಿ ಮುಖ್ಯ ಖಾತೆಯೊಂದನ್ನು ನೀಡಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.

ADVERTISEMENT

ಉಪ ಚುನಾವಣೆ ಫಲಿತಾಂಶ ಹೊರಬದ್ದ ದಿನವೇ ಮತ ಎಣಿಕೆ ಕೇಂದ್ರದಲ್ಲಿ ನೆರೆದಿದ್ದ ಸುಧಾಕರ್ ಅವರ ಬೆಂಬಲಿಗರು ‘ಪವರ್ ಮಿಸ್ಟರ್‌ಗೆ ಜೈ’ ಎಂಬ ಘೋಷಣೆ ಮೊಳಗಿಸಿದ್ದರು. ಅದರ ಬೆನ್ನಲ್ಲೇ ಸದ್ಯ ಯಡಿಯೂರಪ್ಪ ಅವರ ಬಳಿ ಇರುವ ಬಹುತೇಕ ಪ್ರಮುಖ ಖಾತೆಗಳಲ್ಲಿ ಒಂದಾದ ಇಂಧನ ಖಾತೆ ಸುಧಾಕರ್ ಅವರಿಗೆ ಸಿಗಲಿದೆ ಎಂಬ ವದಂತಿ ಹರಡಿದೆ. ಅಷ್ಟೇ ಅಲ್ಲದೆ, ಸುಧಾಕರ್ ಅವರು ವೈದ್ಯಕೀಯ ಪದವೀಧರರಾಗಿರುವ ಕಾರಣಕ್ಕೆ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಬಳಿ ಹೆಚ್ಚುವರಿಯಾಗಿರುವ ವೈದ್ಯಕೀಯ ಶಿಕ್ಷಣ ಖಾತೆ ನೀಡಲು ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಜಾರ್ಖಂಡ್‌ನಲ್ಲಿ ಚುನಾವಣೆ ನಡೆದಿರುವ ಕಾರಣಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಡಿ.20ರ ನಂತರ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ, ಸುಧಾಕರ್ ಅವರ ಬೆಂಬಲಿಗರು ಇನ್ನು ಒಂದು ವಾರ ಆಸೆಯ ಬೆನ್ನೇರಿ ತುದಿಗಾಲಲ್ಲಿ ನಿಲ್ಲಬೇಕಾಗಿದೆ.

ಎಸ್.ಎಂ.ಕೃಷ್ಣ ಅವರ ಸಚಿವ ಸಂಪುಟದಲ್ಲಿ 1999ರಿಂದ 2004ರ ವರೆಗೆ ವಿ.ಮುನಿಯಪ್ಪ ಅವರು ಗಣಿ ಮತ್ತು ಭೂವಿಜ್ಞಾನ ಸಚಿವರು ಮತ್ತು ಅವಿಭಜಿತ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಅದಾಗಿ ಕೆಲ ವರ್ಷಗಳಲ್ಲೇ ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿತು. ಸುಮಾರು 14 ವರ್ಷಗಳಿಂದ ಈ ಭಾಗದ ಶಾಸಕರಿಗೆ ಸಚಿವರಾಗುವ ‘ಯೋಗ’ ಕೂಡಿ ಬಂದಿರಲಿಲ್ಲ. ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ಅವರು ಕೃಷಿ ಸಚಿವರಾಗುವ ಜತೆಗೆ ಜಿಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೆ 14 ತಿಂಗಳಲ್ಲಿಯೇ ಶಿವಶಂಕರರೆಡ್ಡಿ ಅವರು ಮಾಜಿ ಸಚಿವರಾದರು.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಹೊಣೆಗಾರಿಕೆಯನ್ನು ರಾಮನಗರ ಜಿಲ್ಲಾ ಉಸ್ತುವಾರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಹಂಗಾಮಿಯಾಗಿ ನೀಡಲಾಗಿತ್ತು. ಅದು ಕೂಡ ಈಗ ಸಚಿವ ಸ್ಥಾನದ ಜತೆಗೆ ಸುಧಾಕರ್ ಅವರ ಹೆಗಲೇರಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.